ಅಣಬೆ ಬೇಸಾಯ ಅಪಾರ ಆದಾಯ

ಧಾರವಾಡ ತಾಲೂಕಿನ ಕೆಲಗೇರಿ ಗ್ರಾಮದ ಅಣಬೆ.
ಧಾರವಾಡ ತಾಲೂಕಿನ ಕೆಲಗೇರಿ ಗ್ರಾಮದ ಅಣಬೆ.
Published on
ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಇಂಜಿನಿಯರಿಂಗ್ ಮತ್ತು ಸೂಕ್ಷ್ಮ ಜೀವಾಣುಶಾಸ್ತ್ರ ಓದಿರುವ ನಾಲ್ವರು ಪದವೀಧರರು ಧಾರವಾಡ ತಾಲೂಕಿನ ಕ್ಯಾರಕೊಪ್ಪ ರಸ್ತೆ ಯ ಕೆಲಗೇರಿ ಗ್ರಾಮದಲ್ಲಿ ಚಿಪ್ಪು ಅಣಬೆ (ಪ್ಲುರೋಟಸ್ ಸಾಜೋರಕಾಜು) ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.
ಧಾರವಾಡದ ನರಸನಗೌಡ ವೀರಾಪುರ, ಪ್ರಕಾಶ ವೀರಾಪುರ, ವರುಣ ವಿಶ್ವನಾಥ ಮತ್ತು ಹುಬ್ಬಳ್ಳಿಯ ವಿಶಾಲ ಮಠ ಎಂಬುವವರು ಚಿಪ್ಪು ಅಣಬೆ (ಆಯಸ್ಟರ್ ಮಶ್ರೂಂ) ಬೆಳೆದವರು. ಉತ್ತರ ಭಾರತದಲ್ಲಿ ಇದಕ್ಕೆ ಡಿಂಗ್ರಿ ಮಶ್ರೂಂ ಎನ್ನುತ್ತಾರೆ. ಚಿಪ್ಪು ಅಣಬೆ ಕೃಷಿ ಅತಿ ಸರಳ. ಕಡಿಮೆ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ಕೃಷಿ ತ್ಯಾಜ್ಯಗಳಾದ ಭತ್ತ ಅಥವಾ ಗೋಧಿ ಹುಲ್ಲು ಬಳಸಿ ಇದನ್ನು ಬೆಳೆಯಬಹುದು.
ಸದ್ಯ ನಿತ್ಯ 20 ಕೆಜಿಯಂತೆ ತಿಂಗಳಿಗೆ 600 ಕೆಜಿ ಅಣಬೆ ಇಳುವರಿ ಬರುತ್ತಿದೆ. 240 ರೂ.ಗೆ ಒಂದು ಕೆಜಿಯಂತೆ ಮಾರಾಟ ಮಾಡಿದರೆ 1.44 ಲಕ್ಷ ರೂ. ಸಿಗುತ್ತದೆ. ಅದರಲ್ಲಿ ಖರ್ಚು 40 ಸಾವಿರ ರೂ. ಖರ್ಚು ಕಳೆದು ಪ್ರತಿ ತಿಂಗಳು 1 ಲಕ್ಷ ರೂ. ಲಾಭ ಸಿಗುತ್ತದೆ.
ಬೀಜ ಖರೀದಿ: ಅಣಬೆ ಬೀಜಗಳನ್ನು ಶಿವಮೊಗ್ಗದ ಸರ್ಕಾರಿ ಜೈವಿಕ ಕೇಂದ್ರದಿಂದ 80 ರೂ.ಗೆ ಒಂದು ಕೆಜಿಯಂತೆ ಖರೀದಿಸಲಾಗುವುದು. ಪ್ರತಿ ತಿಂಗಳಿಗೆ 120 ಕೆಜಿ ಖರೀದಿಸಲಾಗುವುದು.
ಅಣಬೆ ಬೆಳೆಯುವ ವಿಧಾನ: ಮೊದಲಿಗೆ ಭತ್ತದ ಹುಲ್ಲನ್ನು ಒಂದು ಇಂಚಿನಷ್ಟು ತುಂಡು ಮಾಡಿ ಆ ಪುಡಿಯನ್ನು ಎಂಟು ತಾಸು ನೀರಿನಲ್ಲಿ ನೆನಸಿಡಲಾಗುವುದು. ಬಳಿಕ ಆ ಹುಲ್ಲಿನಲ್ಲಿರುವ ನೀರು ಬಸಿಯಲು 3 ತಾಸು ಇಡಲಾಗುವುದು. ಅದಾದ ನಂತರ 14/24 ಇಂಚಿನ ಪ್ಲಾಸ್ಟಿಕ್ ಚೀಲಗಳಲ್ಲಿ 6 ಹಂತಗಳಲ್ಲಿ ಹುಲ್ಲು ಮತ್ತು ಅಣಬೆ ಬೀಜಗಳನ್ನು ಸೇರಿಸಿ ಚೀಲಗಳನ್ನು ಸಿದ್ಧಪಡಿಸಲಾಗುವುದು. ಈ ಚೀಲಗಳನ್ನು 2 ತಾಸು ನಿರ್ಜೀವಿಕರಣ (ಸ್ಟೀಮಿಂಗ್) ಪ್ರಕ್ರಿಯೆಗೆ ಒಳಪಡಿಸಲಾಗುವುದು. ಸ್ಟೀಮಿಂಗ್ ಬಳಿಕ ಬೀಜ ಬಿತ್ತನೆ ಕೊಠಡಿಯಲ್ಲಿ 20 ನಿಮಿಷ ಇಡಲಾಗುವುದು. ನಂತರ ಈ ರೀತಿ ಸಿದ್ಧಪಡಿಸಿದ ಚೀಲಗಳನ್ನು ಕತ್ತಲೆ ಕೊಠಡಿಯಲ್ಲಿ 15 ರಿಂದ 20 ದಿನ ಇರಿಸಲಾಗುವುದು. ಅಲ್ಲಿ ಅದರ ಪ್ರಾಥಮಿಕ ಬೆಳವಣಿಗೆಯಾಗುತ್ತದೆ. 20 ದಿನಗಳ ನಂತರ ಅದೇ ಚೀಲಗಳನ್ನು ಫಲೋತ್ಪನ್ನ ಕೊಠಡಿಗಳಿಗೆ ವರ್ಗಾಯಿಸಲಾಗುವುದು. ಇಲ್ಲಿ ವಾತಾವರಣದ ಆರ್ದ್ರತೆ ಕಾಯ್ದುಕೊಳ್ಳಲು ಮಂಜು ಹನಿ ಸಿಂಪಡಣೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಫಲೋತ್ಪನ್ನ ಕೊಠಡಿಗಳಲ್ಲಿ ಐದಾರು ದಿನಗಳಲ್ಲಿ ಮೊದಲ ಇಳುವರಿ ಬರುತ್ತದೆ. 1 ವಾರದ ನಂತರ ಹಂತಹಂತವಾಗಿ 2 ಹಾಗೂ 3ನೇ ಇಳುವರಿ ಬರುತ್ತದೆ. 50 ದಿನಗಳಲ್ಲಿ ಪೂರ್ಣ ಇಳುವರಿ ಪಡೆಯಲಾಗುತ್ತದೆ.
ಪ್ಯಾಕಿಂಗ್: ಕಟಾವು ಮಾಡಿದ ಅಣಬೆಗಳನ್ನು ಪೊಟ್ಟಣಗಳಲ್ಲಿ 200 ಗ್ರಾಂ, ಅರ್ಧ ಕೆಜಿ, 1 ಕೆಜಿಯಂತೆ ಪ್ಯಾಕ್ ಮಾಡಿ ಮಾರುಕಟ್ಟೆಗೆ ಸಾಗಿಸಲಾಗುವುದು. ತಾಜಾ ಚಿಪ್ಪು ಅಣಬೆಗಳ ತಾಳಿಕೆ ಕಾಲ 24 ತಾಸು ಆಗಿರುತ್ತದೆ.
ಒಣ ಅಣಬೆ: ಇದೇ ಚಿಪ್ಪು ಅಣಬೆಗಳನ್ನು ಪ್ರಖರವಾದ ಸೂರ್ಯನ ಬೆಳಕಿನಲ್ಲಿ ಎರಡ್ಮೂರು ದಿನ ಒಣಗಿಸಿ ಅದನ್ನು ತೇವಾಂಶ ಇರದ ಮತ್ತು ಗಾಳಿ ಆಡದ ಡಬ್ಬಗಳಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಈ ಅಣಬೆಗಳನ್ನು ಒಂದು ವರ್ಷದವರೆಗೆ ಬಳಸಬಹುದು.
ಅಣಬೆ ಸೇವನೆಯಿಂದಾಗುವ ಲಾಭ: ಅಣಬೆ (ಮಶ್ರೂಮ್ ಇದು ಶಿಲೀಂಧ್ರ ವರ್ಗಕ್ಕೆ ಸೇರಿದ್ದು, ಸಸ್ಯಾಹಾರ ಬೆಳೆಯಾಗಿದೆ. ಇದರಲ್ಲಿ ಸಸಾರಜನಕ ಮತ್ತು ನಾರಿನಾಂಶ ಪ್ರಮಾಣ ಹೆಚ್ಚಿಗೆ ಇದೆ. ಇದರಲ್ಲಿ ಸಕ್ಕರೆ ಅಂಶ ಕಡಿಮೆ ಇದೆ. ಮಧುಮೇಹ ಮತ್ತು ರಕ್ತದ ಒತ್ತಡ ಇರುವವರಿಗೆ ಉತ್ತಮ ಆಹಾರ. ಅಲ್ಲದೆ, ಕೊಬ್ಬಿನಾಂಶ ಕಡಿಮೆ ಇರುವುದರಿಂದ ಹೆಚ್ಚು ತೂಕವಿರುವವರಿಗೆ ಇದು ಉತ್ತಮ. ಕಡಿಮೆ ಕ್ಯಾಲೋರಿ ಹೊಂದಿದೆ.
ಭಗವಂತನ ಬೆಳೆ: ಚೀನಾ ದೇಶದಲ್ಲಿ ಎರಡು ಸಾವಿರ ವರ್ಷಗಳಿಂದ ಅಣಬೆಯನ್ನು ಆಹಾರವಾಗಿ ಬಳಸುತ್ತಿದ್ದಾರೆ. ವೈದ್ಯಕೀಯ ಗುಣಗಳಿಂದಾಗಿ ಅಣಬೆಗೆ ರೋಮನ್ನರು ‘ಭಗವಂತನ ಆಹಾರ’ ಎಂದು ಕರೆದಿದ್ದಾರೆ. ಅಣಬೆ ಕೃಷಿಗೆ ಭಾರತದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆ ಕಂಡು ಬಂದಿದ್ದು, ಆಹಾರದಲ್ಲಿ ನಿತ್ಯ ಅಣಬೆಯನ್ನು ಬಳಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಜೀವ ಸಂಜೀವಿನಿ: ಅಣಬೆಯಲ್ಲಿ ಹೈಪೋಗ್ಲೈಸೇಮಿಯಾ, ಹೈಪೊಲಿಪಿಡೆಮಿಕ್, ಹೈಪೊಕೊಲೆಸ್ಟಿರೋಲೆಮಿಕ್, ಹೈಪೊಟೆಸ್ಹಿವ್, ಆಂಟಿ ಕ್ಯಾನ್ಸರ್, ಆಂಟಿ ಟ್ಯೂಮರ್, ಆಂಟಿ ಎಚ್​ಐವಿ, ಆಂಟಿ ಹಿಪ್ಯಾಟೈಟಿಸ್, ಆಂಟಿ ಪ್ಲಟಿಲೆಟ್ ಇತ್ಯಾದಿ ವೈದ್ಯಕೀಯ ಗುಣಗಳಿದ್ದು, ಇದಕ್ಕೆ ‘ಜೀವ ಸಂಜೀವಿನಿ’ ‘ದಿವ್ಯೌಷಧ’ ಎಂದು ಕರೆಯುತ್ತಾರೆ.
ಅಣಬೆ ಎಂದರೇನು:ಅಣಬೆಯನ್ನು ಆಂಗ್ಲ ಭಾಷೆಯಲ್ಲಿ (ಮಶ್ರೂಮ್ ಎನ್ನುತಾರೆ. ಇದು ಬೆಸಿಡಿಯೋಮೈಸಿಟಿಸ್ ಶಿಲೀಂಧ್ರಗಳ ಗುಂಪಿಗೆ ಸೇರಿದೆ. ವಿಜ್ಞಾನಿ ಚಾಂಗ್ ಹೇಳಿಕೆ ಪ್ರಕಾರ ಅಣಬೆಗಳು ಎಲೆರಹಿತ, ಮೊಗ್ಗುರಹಿತ, ಹೂವು ರಹಿತವಿದ್ದರೂ ಹಣ್ಣನ್ನು ಕೊಡುವ ಆಹಾರವಾಗಿ, ಶಕ್ತಿವರ್ಧಕ ಔಷಧೀಯ ಗುಣ ಹೊಂದಿದ್ದು, ಸೃಷ್ಟಿಯ ಅಮೂಲ್ಯ ಕೊಡುಗೆಯಾಗಿದೆ.
ಅಣಬೆ ಪ್ರಕಾರಗಳು: ಚಿಪ್ಪು ಅಣಬೆ (ಪ್ಲುರೋಟಸ್ ಸಾಜೋರಕಾಜು) ಭತ್ತದ ಹುಲ್ಲಿನ ಅಣಬೆ (ವೋಲ್ವೇರಿಯಲ್ಲ ವಲವೇಸಿ) ಹಾಲು ಅಣಬೆ (ಕ್ಯಾಲೋಸೈಟ್ ಇಂಡಿಕಾ) ಬಿಳಿಗುಂಡಿ ಅಣಬೆ (ಅಗ್ಯಾರಿಕಸ್ ಬೈಸ್ಪೋರಸ್).
ಅಣಬೆ ಖಾದ್ಯಗಳು: ಅಣಬೆ ಟ್ಯೊಮಾಟೊ ಸೂಪ್, ಅಣಬೆ ತರಕಾರಿ ಮಿಕ್ಸ್ ಸೂಪ್, ಅಣಬೆ, ಟ್ಯೊಮಾಟೊ ಕೋಸಂಬರಿ, ಉಪ್ಪಿನಕಾಯಿ, ಅಣಬೆ, ಮೊಳಕೆ ಕಾಳುಗಳ ಕೋಸಂಬರಿ, ಭಜಿ, ಸ್ಯಾಂಡ್​ವಿಚ್, ಸಾಂಬಾರ್, ಬಿರಿಯಾನಿ, ಅಣಬೆ ಫ್ರೖೆ, ಮ್ಯಾಕ್ರೋನಿ ನೂಡಲ್ಸ್, ಅಣಬೆ ಮಂಚೂರಿ, ಫ್ರೖೆಡ್​ರೈಸ್, ಅಣಬೆ ಸಮೋಸ ಹೀಗೆ ವಿವಿಧ ಖಾದ್ಯ ತಯಾರಿಸಬಹುದು.
14 ಬಗೆಯ ಜಾಮ್ ತಯಾರು: 2019-20ರಲ್ಲಿ ಸಣ್ಣ ಪ್ರಮಾಣದಲ್ಲಿ ಅಣಬೆ ಕೃಷಿ ಮಾಡಲು ಆರಂಭಿಸಿದೇವು. ಆಗ ಕರೊನಾ ಬಂದಿದ್ದರಿಂದ ಬೇರೇಡೆ ಕಳುಹಿಸುವುದು ಬಂದ್ ಆಯಿತು. ಆಗ ಅನಿವಾರ್ಯವಾಗಿ ಅಣಬೆಗೆ ಕಲ್ಲಂಗಡಿ ಬೀಜ ಸೇರಿಸಿ ಜಾಮ್ ತಯಾರಿಸಲಾಯಿತು. ಅದೇ ರೀತಿ ಕಸ್ತೂರಿ ಬೀಜ, ಫೈನಾಪಲ್, ಕಸಕಸಿ, ಸೇವಂತಿಗೆ ಹೂವಿನ ಪಕಳಿ, ಲೋಟಸ್, ಗುಲಾಬಿ ಹೂವಿನ ಪಕಳಿ ಸೇರಿಸಿ ಜಾಮ್ ಮಾಡಿ ಮಾರಾಟ ಮಾಡಲಾಯಿತು. ಆಗ ಗ್ರಾಹಕರಿಂದ ಉತ್ತಮ ಬೇಡಿಕೆಯೂ ಬಂತು. ನಮ್ಮ ಭಾಗದಲ್ಲಿ ಮಶ್ರೂಂ ಬೆಳೆಯುವುದೇ ವಿರಳ. ಇನ್ನು ಅದರಲ್ಲಿ ಜಾಮ್ ಮಾಡೋದು ಇನ್ನೂ ವಿರಳ. ಮುಂದಿನ ದಿನಗಳಲ್ಲಿ ಮತ್ತೆ ಉಪ್ಪಿನಕಾಯಿ, ಸೂಪ್ ಪೌಡರ್, ಜಾಮ್ ಸಾಂಬಾರ ಪೌಡರ್, ಬಿಸ್ಕಿಟ್ ಮಾಡುವ ಯೋಚನೆ ಇದೆ ಎನ್ನುತ್ತಾರೆ ವರುಣ ವಿಶ್ವನಾಥ.
ಆರ್ಕಿಡ್ಸ್ ಫ್ಲಾವರಿಂಗ್: ನರಸನಗೌಡ ಅವರು 20 ಗುಂಟೆ ಜಾಗದಲ್ಲಿ ಆರ್ಕಿಡ್ಸ್ ಹೂವು ಬೆಳೆಸುತ್ತಾರೆ. ಇದು ವರ್ಷಕ್ಕೆ 3 ಬಾರಿ ಇಳುವರಿ ಬರುತ್ತದೆ. ಇವುಗಳನ್ನು ಕೋಕೋ ಫಿಟ್, ತೆಂಗಿನ ಚಿಪ್ಪು ಮತ್ತು ಇದ್ಲಿ ಬಳಸಿ ಹೂವು ಬೆಳೆಯಲಾಗುತ್ತದೆ. ಒಂದು ಗಿಡಕ್ಕೆ 50 ರೂ. ನಂತೆ ಒಟ್ಟು 15 ಸಾವಿರ ಆರ್ಕಿಡ್ ಗಿಡಗಳನ್ನು ತಂದು ಬೆಳೆಸಲಾಗಿದೆ. ಇವುಗಳನ್ನು ಹೂಗುಚ್ಛ ಮತ್ತು ಮನೆ, ಕಚೇರಿಗಳಲ್ಲಿ ಶೋಕೇಸ್​ಗಳಲ್ಲಿ ಮನೆಯ ಅಂದ ಹೆಚ್ಚಿಸಲು ಬಳಸಲಾಗುತ್ತದೆ. ಇವುಗಳನ್ನು ಮುಂಬೈ ಮಾರುಕಟ್ಟೆ ಕಳುಹಿಸಲಾಗುತ್ತದೆ. ಒಂದು ಬಾರಿ ಹೂವಿನ ಗಿಡ ನಾಟಿ ಮಾಡಿದರೆ 10 ವರ್ಷ ಇಳುವರಿ ನೀಡುತ್ತವೆ. ಇದರಿಂದ ವರ್ಷಕ್ಕೆ 3 ಲಕ್ಷ ರೂ. ಆದಾಯ ಸಿಗುತ್ತಿದೆ.

"

ಸ್ವಂತ ಉದ್ಯಮ ಅದರಲ್ಲೂ ಸ್ವ ಉದ್ಯೋಗ ಮಾಡುವ ಗುರಿ ಇತ್ತು. ಅದರಂತೆ ಅಣಬೆ ಬೇಸಾಯದಲ್ಲಿ ತೊಡಗಿದ್ದೇನೆ. ಯಾವುದೇ ಉದ್ಯಮ ಅಥವಾ ಕ್ಷೇತ್ರವಿರಲಿ ಸದಾ ಹೊಸತನ ಮತ್ತು ವಿಶೇಷತೆ ಇರಬೇಕು. ಅಣಬೆಯಿಂದ ಉಪ ಉತ್ಪನ್ನ ತಯಾರಿಸುವ ಯೋಜನೆ ಇದೆ. ಧಾರವಾಡದ ಅಣಬೆ ಕೃಷಿಯನ್ನು ರಾಷ್ಟ್ರ ಮಟ್ಟಕ್ಕೆ ಬೆಳೆಸುವ ಗುರಿ ಇದೆ. ವಾಣಿಜ್ಯೀಕರಣವಾಗಿ ಬೆಳೆದು ವಿದೇಶಗಳಿಗೆ ರಫ್ತು ಮಾಡುವ ಯೋಚನೆ ಇದೆ. 

 | ವರುಣ ವಿಶ್ವನಾಥ, ಅಣಬೆ ಬೆಳೆಗಾರ, ಧಾರವಾಡ.

"

ಮುಂಬರುವ ದಿನಗಳಲ್ಲಿ ಅಣಬೆ ಕೃಷಿಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ಇದೆ. ಜತೆಗೆ ಪಿಎಂ ಎಫ್​ಎಂಇ ಯೋಜನೆಯಡಿ 30 ಲಕ್ಷ ರೂ. ಪ್ರಾಸೆಸಿಂಗ್ ಘಟಕ ನಿರ್ವಿುಸಲು ಅನುದಾನ ನೀಡಲು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಘಟಕ ನಿರ್ವಿುಸಿದ ಬಳಿಕ ಸುತ್ತಮುತ್ತಲಿನ ಆಸಕ್ತ ರೈತರು ಅಣಬೆ ಬೆಳೆದು ನಮಗೆ ನೀಡಬಹುದು. ಹೆಚ್ಚಿನ ದರ ಸಿಕ್ಕರೆ ತಾವೇ ಮಾರಾಟ ಮಾಡಬಹುದು. ಆಸಕ್ತರಿಗೆ ನಾವು ತರಬೇತಿ ನೀಡುತ್ತೇವೆ.| ನರಸನಗೌಡ ವೀರಾಪುರ, ಅಣಬೆ ಬೆಳೆಗಾರ.

"

ಧಾರವಾಡ ನಾವು ಆರಂಭಿಸುವ ಕೃಷಿ ಪದ್ಧತಿ ಅಥವಾ ಉದ್ಯಮ ಸ್ಥಾಪನೆಗೆ ಬಂಡವಾಳ ಕಡಿಮೆ ಇರಬೇಕು. ಬೇಗ ಫಲಿತಾಂಶ ಬರಬೇಕು, ಉತ್ತಮ ಮಾರುಕಟ್ಟೆ ಇರಬೇಕು, ಉತ್ಪನ್ನಗಳಿಗೆ ಜನಮನ್ನಣೆ ಇರಬೇಕು, ದೀರ್ಘಕಾಲದ ತಾಳಿಕೆ ಬರುವಂತಿರಬೇಕು. ಅಣಬೆ ಕೃಷಿಯಲ್ಲಿ ಕೃಷಿಯಲ್ಲಿ ಈ ಎಲ್ಲ ಸಾಧ್ಯತೆಗಳಿವೆ. ವಿಶಾಲ ಮಠ ಅಣಬೆ ಬೆಳೆಗಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net