ಹುಬ್ಬಳ್ಳಿ: maize sale ಧಾರವಾಡ ಜಿಲ್ಲೆಯಲ್ಲಿ 1.85 ಲಕ್ಷ ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರವು ಅನುಮತಿ ನೀಡಿದ್ದು, ಈಗಾಗಲೇ 120 ರೈತರು ನೋಂದಣಿ ಮಾಡಿದ್ದಾರೆ. ಈವರೆಗೆ 400 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಇಲ್ಲಿಯ ಎಪಿಎಂಸಿ ಆವರಣದ ರೈತರ ನೋಂದಣಿ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿ ಅವರು ಮಾತನಾಡಿದರು.
ರೈತರು ನೇರವಾಗಿ ಎಪಿಎಂಸಿ ಕಚೇರಿಗೆ ಬಂದು ನೋಂದಣಿ ಮಾಡಿಸಬೇಕು. ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಅರಿವು ಮೂಡಿಸಿ, ಬ್ಯಾನರ್ಗಳನ್ನು ಅಳವಡಿಸಬೇಕು. ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ದಲ್ಲಾಳಿಗಳಿಗೆ ಅವಕಾಶವಿಲ್ಲ. ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಲಾಭ ರೈತರಿಗೆ ಸೀಗುವಂತೆ ನಿಗಾ ವಹಿಸಬೇಕೆಂದು ಸೂಚಿಸಿದರು.
ಮೆಕ್ಕೆಜೋಳ ಉತ್ಪನ್ನವನ್ನು ಜಿಲ್ಲಾ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ, ಉಪ ಮಾರುಕಟ್ಟೆಗಳಲ್ಲಿ ಯುನಿಫೈಡ್ ಮಾರ್ಕೆಟ್ ಪ್ಲಾಟಫಾರಂ (ಯುಎಂಪಿ) ಮೂಲಕ ಖರೀದಿ ಮಾಡಬೇಕು. ಮೆಕ್ಕೆಜೋಳ ಮಾರುಕಟ್ಟೆಯಲ್ಲಿ ಸರಾಸರಿ ಮಾದರಿ ದರ ಪ್ರತಿ ಕ್ವಿಂಟಾಲ್ಗೆ 1900 ರೂ. ಇದೆ. ಬೆಂಬಲ ಬೆಲೆಯಡಿ ಗರಿಷ್ಠ 2150 ರೂ. ನಿಗದಿ ಪಡಿಸಲಾಗಿದೆ. ಪ್ರತಿ ಎಕರೆಗೆ 12 ಕ್ವಿಂಟಾಲ್ನಂತೆ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆಜೋಳ ಫ್ರುಟ್ಸ್ ತಂತ್ರಾಂಶದಲ್ಲಿನ ಜಮೀನಿನ ವಿಸ್ತಿರ್ಣಕ್ಕನುಗುಣವಾಗಿ ಪ್ರತಿ ರೈತರಿಂದ ಖರೀದಿಸಬಹುದು ಎಂದು ಅವರು ಹೇಳಿದರು.
ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಬೆಲೆ ಕೊರತೆ ವ್ಯತ್ಯಾಸ ಪಾವತಿ ಕೇಂದ್ರಗಳನ್ನು ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ, ಧಾರವಾಡ, ಕಲಘಟಗಿ ಮತ್ತು ಕುಂದಗೋಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆಯಲಾಗಿದೆ. ರೈತರ ನೋಂದಣಿ ಕಾರ್ಯವು ಜ. 8ರಿಂದ ಆರಂಭವಾಗಿ ಫೆಬ್ರವರಿ 7ರ ವರೆಗೆ ನಡೆಯಲಿದೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಬಗ್ಗೆ ಮಾಹಿತಿ ನೀಡಬೇಕು. ಈ ಯೋಜನೆಯನ್ನು ರೈತರಿಗೆ ತಲುಪಿಸುವ ಕೆಲಸಗಳಾಗಬೇಕು. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಗಳಲ್ಲಿ ಖರೀದಿ ಕೇಂದ್ರಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು.