ಹುಬ್ಬಳ್ಳಿ: ರೈತ ತಾನು ಬೆಳೆದ ಫಸಲು ಮಾರುಕಟ್ಟೆಗೆ ತರುತ್ತಿದ್ದಂತೆ ಬೆಲೆ ಕುಸಿತವಾಗುವುದು ಸಾಮಾನ್ಯ ಸಂಗತಿ ಎಂಬಂತಾಗುತ್ತಿದ್ದು, ಇದೀಗ (maize rate) ಗೋವಿನ ಜೋಳ ಬೆಳೆಗಾರರು ಇಂತಹ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಈ ವರ್ಷದ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಗೋವಿನ ಜೋಳ ಬೆಳೆ ಸದ್ಯ ರೈತರ ಕೈಸೇರುತ್ತಿದೆ. ಈಗಾಗಲೇ ಒಕ್ಕಣೆ ಮಾಡಿರುವ ರೈತರು ಮಾರುಕಟ್ಟೆಗೆ ತಂದರೆ ಅತ್ಯಂತ ಕಡಿಮೆ ಬೆಲೆಗೆ ವ್ಯಾಪಾರಸ್ಥರು ಕೇಳುತ್ತಿದ್ದಾರೆ.
ಸದ್ಯ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಗೋವಿನ ಜೋಳ ದರ 1400 ರೂ. ಆಸುಪಾಸಿನಲ್ಲಿದೆ.
ಬೀಜ, ರಸಗೊಬ್ಬರ, ಕೀಟನಾಶಕ, ಕೂಲಿಕಾರರ ಪಗಾರ, ಮಾರುಕಟ್ಟೆಗೆ ತರಲು ಸಾಗಾಟ ವೆಚ್ಚ ಹೀಗೆ ಹತ್ತಾರು ಖರ್ಚು ತೆಗೆದು ಬೆಳೆದವನಿಗೆ ಏನೂ ಉಳಿಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಗೋವಿನ ಜೋಳಕ್ಕೆ ಕನಿಷ್ಠ ಬೆಲೆಯನ್ನಾದರೂ ನೀಡಬೇಕು. ಕೇಂದ್ರ ಸರ್ಕಾರ ಈ ವರ್ಷದ ಬೆಂಬಲ ಬೆಲೆ ಘೋಷಣೆ ಮಾಡಿದೆ. ಪ್ರತಿ ಕ್ವಿಂಟಾಲ್ಗೆ 2400 ರೂ.ನಂತೆ ಖರೀದಿ ಮಾಡಬೇಕೆಂದು ಹೇಳಿದೆ.
ಆದರೆ, ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಕರ್ನಾಟಕ ಹಾಲು ಒಕ್ಕೂಟ ಉತ್ಪಾದನೆ ಮಾಡುವ ಪಶು ಆಹಾರಕ್ಕೆ ಗೋವಿನ ಜೋಳ ಬಳಸಲಾಗುತ್ತದೆ. ಹಾಗಾಗಿ ಕೆಎಂಎಫ್ ಖರೀದಿ ಮಾಡಬೇಕು ಎಂಬುದು ಬೆಳೆಗಾರರು ಒತ್ತಾಯ. ಈ ಪ್ರಕ್ರಿಯೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನುಮತಿ ನೀಡಬೇಕಾಗಿದೆ.
ಕಳೆದ ವರ್ಷ 2225 ರೂ.ಗೆ ಕ್ವಿಂಟಾಲ್ನಂತೆ ಬೆಂಬಲ ಬೆಲೆ ಘೋಷಣೆ ಮಾಡಲಾಗಿತ್ತು. ಈ ಬಾರಿ 175 ರೂ. ಹೆಚ್ಚು ನೀಡಿ 2400 ರೂ. ಪ್ರತಿ ಕ್ವಿಂಟಾಲ್ಗೆ ಘೋಷಿಸಲಾಗಿದೆ. ಆದರೆ, ಬೆಳೆ ಕೈಗೆ ಬಂದು ತಿಂಗಳು ಕಳೆಯುತ್ತ ಬಂದರೂ ಸರ್ಕಾರಗಳು ರೈತರ ಕೂಗಿಗೆ ಓಗೊಟ್ಟಿಲ್ಲ. ಕೇವಲ ಪತ್ರ ವ್ಯವಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ರೈತ ಮುಖಂಡರು ದೂರಿದ್ದಾರೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗೋವಿನ ಜೋಳ ಬೆಳೆಯಲಾಗುತ್ತದೆ. ಈ ಬಾರಿ ಧಾರವಾಡ ಜಿಲ್ಲೆಯೊಂದರಲ್ಲೇ 71 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಿತ್ತು. ಕಡಿಮೆ ಎಂದರೂ ಹೆಕ್ಟೇರ್ಗೆ 40ರಿಂದ 50 ಕ್ವಿಂಟಾಲ್ ಗೋವಿನ ಜೋಳ ಬರುತ್ತದೆ. ಈ ಬಾರಿ ಇಳಿವರಿ ಉತ್ತಮವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕರ ಪತ್ರ
ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋವಿನ ಜೋಳ ಬೆಳೆಯಲಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದೆ. ಬೆಂಬಲ ಬೆಲೆಯಡಿ ಖರೀದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆಹಾರ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಲು ತಿಳಿಸಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಂಡು ಕೂಡಲೇ ರೈತರಿಂದ ಗೋವಿನ ಜೋಳ ಖರೀದಿಸಬೇಕೆಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
"
ಧಾರವಾಡ ಜಿಲ್ಲೆಯಲ್ಲಿ ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸುವಂತೆ ರೈತರು ಒತ್ತಾಯ ಮಾಡಿದ್ದಾರೆ. ಬೆಳೆಗಾರರ ಮನವಿ ಮೇರೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದೇಶ ಬರುತ್ತಿದ್ದಂತೆ ಖರೀದಿ ಆರಂಭಿಸಲಾಗುವುದು.