mahesh tenginakai 18 ಅಡಿಗೂ ಎತ್ತರದ ಮೂರ್ತಿಗಳಿಗೆ ಪರ್ಯಾಯ ಮಾರ್ಗ

mahesh tenginakai ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಶನಿವಾರ ಸ್ಥಳ ಪರಿಶೀಲಿಸಿದರು.
mahesh tenginakai ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಶನಿವಾರ ಸ್ಥಳ ಪರಿಶೀಲಿಸಿದರು.
Published on
ಹುಬ್ಬಳ್ಳಿ: ಹುಬ್ಬಳ್ಳಿಯ ಗಣೇಶ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ನಗರದ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮುಂಭಾಗದ ಸ್ಥಳವನ್ನು ಶಾಸಕ ಮಹೇಶ ಟೆಂಗಿನಕಾಯಿ mahesh tenginakai ಅವರು ಶನಿವಾರ ಪರಿಶೀಲಿಸಿದರು.
ಸಂಗೊಳ್ಳಿ ರಾಯಣ್ಣ ಹಾಗೂ ಚನ್ನಮ್ಮ ವೃತ್ತದ ಮೇಲ್ಸೇತುವೆ ಕೆಳಗಡೆ ಬೃಹತ್ ಗಣೇಶ ಮೂರ್ತಿಗಳು ಹೋಗುತ್ತವೆಯೇ? ಪರ್ಯಾಯ ಮಾರ್ಗಗಳೇನು? ಎಂಬುದರ ಕುರಿತು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾಮಂಡಳ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸ್ಥಳದಲ್ಲಿಯೇ ಹೆಸ್ಕಾಂನ ಲ್ಯಾಡ್ರ ಜೀಪ್ ತರಿಸಿ ಮೇಲ್ಸೇತುವೆ ಎತ್ತರ ಹಾಗೂ ಗಣೇಶ ಮೂರ್ತಿಗಳ ಮೆರವಣಿಗೆಗೆ ಆಗುವ ಅಡ್ಡಿಯನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಟೆಂಗಿನಕಾಯಿ, ಚನ್ನಮ್ಮ ಸರ್ಕಲ್‌ನಿಂದ ಗಾಜಿನ ಮನೆ ಆವರಣಕ್ಕೆ 16ರಿಂದ 18 ಅಡಿ ಎತ್ತರದ ಗಣಪತಿಗಳ ವಿಸರ್ಜನಾ ಮೆರವಣಿಗೆ ನಡೆಸಲು ಯಾವುದೇ ತೊಂದರೆಯಿಲ್ಲ. 18 ಅಡಿಗೂ ಎತ್ತರದ ನಾಲ್ಕು ಬೃಹತ್ ಗಣಪತಿಗಳಿಗೆ ಮಾತ್ರ ಪರ್ಯಾಯ ಮಾರ್ಗ ಕಲ್ಪಿಸಲಾಗುವುದು. ಇವುಗಳು ಹಳೇಕೋರ್ಟ್, ಪ್ರವಾಸಿ ಮಂದಿರ, ದೇಶಪಾಂಡೆ ನಗರ, ಉತ್ತರ ಸಂಚಾರ ಠಾಣೆ ಮೂಲಕ ಹೊಸೂರಿಗೆ ತೆರಳಲಿವೆ ಎಂದರು.
ಹುಬ್ಬಳ್ಳಿಯ ಗಣೇಶೋತ್ಸವ ರಾಜ್ಯದಲ್ಲೇ ವಿಜೃಂಭಣೆಯಿಂದ ನಡೆಯುತ್ತಿದ್ದು, ಈ ಬಾರಿ ಸುಮಾರು 25 ಅಡಿಗೂ ಎತ್ತರದ ಮೂರುನಾಲ್ಕು ಬೃಹತ್ ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಸೆ. 14ರಂದು ಪ್ರತಿಷ್ಠಾಪನೆಯಾಗುವ ಐದು ದಿನಗಳ ಗಣಪತಿಗಳ ವಿಸರ್ಜನೆ 18ರಂದು ನಡೆಯಲಿದೆ. ಏಳು ದಿನಗಳ ಗಣಪತಿಗಳ ವಿಸರ್ಜನೆ 20, ಒಂಬತ್ತು ದಿನಗಳ ಗಣಪತಿಗಳ ವಿಸರ್ಜನೆ 22ರಂದು ನಡೆಯಲಿದೆ. 12 ದಿನಗಳ ಗಣಪತಿಗಳ ವಿಸರ್ಜನೆ 25ರಂದು ನಡೆಯಲಿದ್ದು, ಈ ವೇಳೆ ಬೃಹತ್ ಗಣಪತಿಗಳಿಗೆ ವಿಶೇಷ ಮಾರ್ಗ ವ್ಯವಸ್ಥೆ ಕಲ್ಪಿಸಲಾಗುವುದು, ಇದಕ್ಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಸಹಮತ ವ್ಯಕ್ತಪಡಿಸಿದೆ ಎಂದರು.
ಬೃಹತ್ ಗಣಪತಿ ಮೂರ್ತಿಗಳ ಸಂಚಾರದ ಮಾರ್ಗದಲ್ಲಿ ಅಗತ್ಯವಿರುವೆಡೆ ಮರಗಳ ಕೊಂಬೆಗಳನ್ನು ಟ್ರಿಮ್ಮಿಂಗ್ ಮಾಡಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಮಾರ್ಗಗಳ ಸಂಪೂರ್ಣ ಪರಿಶೀಲನೆ ನಡೆಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿ ಮುಚ್ಚುವುದು ಹಾಗೂ ದುರಸ್ತಿ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ ಎಂದರು.
ಗಣೇಶೋತ್ಸವ ವೀಕ್ಷಿಸಲು ಹುಬ್ಬಳ್ಳಿಗೆ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಅದ್ದೂರಿ ಹಾಗೂ ಸುಗಮ ಗಣೇಶೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಹಾಮಂಡಳದ ಪದಾಧಿಕಾರಿಗಳಾದ ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಶಾಂತರಾಜ ಪೋಳ, ಚನ್ನಬಸಪ್ಪ ಧಾರವಾಡಶೆಟ್ಟರ್, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಡಿಸಿಪಿಗಳಾದ ಶ್ರುತಿ ಎನ್.ಎಸ್., ಸಿ.ಆರ್. ರವೀಶ, ಆರ್‌ಎಫ್‌ಒ ಆರ್.ಎಸ್. ಉಪ್ಪಾರ, ಪ್ರಮುಖರಾದ ರವಿ ನಾಯಕ್, ಪರಶುರಾಮ ಪೂಜಾರ ಇತರರು ಸ್ಥಳದಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net