ಹುಬ್ಬಳ್ಳಿ : ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಭಾಗವನ್ನಾಗಿಸುವುದು ಅನಿವಾರ್ಯ ಎಂದು ಪತಂಜಲಿ ಯೋಗಪೀಠದ ಸಂಸ್ಥಾಪಕರಾದ ಯೋಗಗುರು ಬಾಬಾ ರಾಮದೇವ ಹೇಳಿದರು.
ಹರಿದ್ವಾರದ ಪತಂಜಲಿ ಯೋಗಪೀಠದ ಆವರಣದಲ್ಲಿ ಯೋಗ ಶಿಕ್ಷಕರ ತರಬೇತಿಯ ಶಿಬಿರದಲ್ಲಿ ಯೋಗ ಸಾಂಗತ್ಯ ಪುಸ್ತಕ ಲೋಕಾರ್ಪಣೆೆಗೊಳಿಸಿ ಅವರು ಮಾತನಾಡಿದರು.
ಬೀದರನ ಯೋಗಸಾಧಕ ಗೋರಖನಾಥ ಕುಂಬಾರ ಅವರು ರಚಿಸಿರುವ ಯೋಗ ಸಾಂಗತ್ಯ ಪುಸ್ತಕವು ಪ್ರೇರಣಾದಾಯಕವಾಗಿದೆ ಎಂದರು.
ಈ ಪುಸ್ತಕದಲ್ಲಿ ಯೋಗಾಸನಗಳ ಸ್ಪಷ್ಟ ಚಿತ್ರಗಳು, ಅವುಗಳ ಅರ್ಥ ಮತ್ತು ಉಪಯೋಗಗಳ ಕುರಿತು ಸಮಗ್ರ ವಿವರಣೆಯಿದ್ದು ಯೋಗಾಸನಗಳನ್ನು ಕಲಿಯಲು ಬಯಸುವ ಎಲ್ಲರಿಗೂ ಇದು ಅತ್ಯುತ್ತಮ ಆಕರ ಗ್ರಂಥವಾಗಿದ್ದು, ಪ್ರತಿಯೊಬ್ಬರೂ ಇದನ್ನು ತಮ್ಮ ಬಳಿ ಇಟ್ಟುಕೊಳ್ಳಬಹುದು ಎಂದು ಬಾಬಾ ರಾಮದೇವ ಅವರು ತಿಳಿಸಿದರು.
ಪತಂಜಲಿ ಯೋಗಪೀಠದ ಕರ್ನಾಟಕದ ಪ್ರಭಾರಿ ಭವರಲಾಲ ಆರ್ಯ ಮಾತನಾಡಿ, ಗೋರಖನಾಥ ಕುಂಬಾರ್ ಅವರ ನಿಸ್ವಾರ್ಥ ಯೋಗ ಸೇವೆಯನ್ನು ಕಂಡಿದ್ದೇನೆ. ಕಳೆದ ಎರಡು ದಶಕಗಳಿಂದ ಬಾಬಾ ರಾಮದೇವ್ ಜಿ ಅವರ ಮಾರ್ಗದರ್ಶನದಲ್ಲಿ ಬೀದರ ಜಿಲ್ಲೆಯಾದ್ಯಂತ ಅನೇಕ ಶಾಲಾ, ಕಾಲೇಜುಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಉಚಿತ ಯೋಗ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರು.
ಯೋಗಸಾಧಕ ಹಾಗೂ ಲೇಖಕ ಗೋರಖನಾಥ ಕುಂಬಾರ ಮಾತನಾಡಿ, ಯೋಗದ ಚಿತ್ರಗಳು ಮತ್ತು ಭಾವಾರ್ಥಗಳೊಡನೆ ಈ ಪುಸ್ತಕ ರಚಿಸಿದ್ದಾಗಿ ತಿಳಿಸಿದರು.