ಇಲ್ಲಿನ ಚಾಲುಕ್ಯ ನಗರದಲ್ಲಿರುವ ಸುಜಾತಾ ಹಂಡಿ ಮನೆಗೆ ಗುರುವಾರ ಭೇಟಿ ನೀಡಿದ ನಂತರ ಅರವಿಂದ ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯ ಮಹಿಳಾ ಆಯೋಗ ಕಾಂಗ್ರೆಸ್ ಏಜೆಂಟ್ನಂತೆ ವರ್ತಿಸುತ್ತಿದೆ. ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ನಿರಂತರ ಕೊಲೆ, ದೌರ್ಜನ್ಯಗಳು ನಡೆಯುತ್ತಿದ್ದರೂ ಆಯೋಗದ ಸದಸ್ಯರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷಿ್ಮೕ ಹೆಬ್ಬಾಳಕರ ಅವರಿಗೆ ಗರ್ಭಿಣಿಯರ ಸಾವು, ನೇಹಾ, ಮಾನ್ಯಾಳ ಹತ್ಯೆ, ಸುಜಾತಾ ಹಂಡಿ ಮೇಲೆ ನಡೆದ ದೌರ್ಜನ್ಯಗಳು ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿ ಹೆಚ್ಚಿನ ಅವಧಿಯ ಮುಖ್ಯಮಂತ್ರಿ ಎಂಬ ಸಂಭ್ರಮಾಚಾರಣೆಯಲ್ಲಿ ತೊಡಗಿರುವ ಸಿಎಂ ಸಿದ್ದರಾಮಯ್ಯ ಅವರು ಮಹಿಳೆ ತಾನಾಗಿಯೇ ಬಟ್ಟೆ ಬಿಚ್ಚಿಕೊಂಡಿದ್ದಾಳೆಂಬ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ.
ಗೃಹ ಸಚಿವರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯದ ಮಹಿಳೆಯರು ಕಾನೂನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇಶದ ಆರ್ಥಿಕ ಪರಿಸ್ಥಿತಿ, ಪ್ರಧಾನಿ ಮೋದಿ, ಅಮೆರಿಕೆ ಅಧ್ಯಕ್ಷ ಟ್ರಂಪ್ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ತಮ್ಮ ಜಿಲ್ಲೆಯಲ್ಲಿ ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿರುವುದು ಕಾಣಲಿಲ್ಲವೇ ? ಎಂದು ಪ್ರಶ್ನಿಸಿದರು.
ಸುಜಾತಾ ಹಂಡಿ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಇನ್ಸ್ಪೆಕ್ಟರ್ ಹಟ್ಟಿ ಹಾಗೂ ಇನ್ನಿತರ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಹಟ್ಟಿ ತಮ್ಮ ಸಹೋದರಿಯ ದೇಹ ಮುಟ್ಟಿದ್ದಾರೆಂದು ಸುಜಾತಾಳ ಸಹೋದರ ದೂರಿದ್ದಾರೆ. ಕ್ರಮ ಕೈಗೊಳ್ಳಲಾಗದಿದ್ದರೆ ಪೊಲೀಸ್ ಆಯುಕ್ತ ಶಶಿಕುಮಾರ ಅವರು ಹುಬ್ಬಳ್ಳಿ-ಧಾರವಾಡದಿಂದ ಜಾಗ ಖಾಲಿ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ದುರ್ಯೋಧನ, ದುಶ್ಯಾಸನ ವ್ಯಕ್ತಿತ್ವದ ಸರ್ಕಾರ. ದೌರ್ಜನ್ಯಕ್ಕೆ ಒಳಗಾಗಿರುವ ಸುಜಾತಾ ಹಂಡಿ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಬೇಕು.
ಆಕೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಿ. ಒಟ್ಟಾರೆ ಘಟನೆ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಅವರು ಆದೇಶಿಸಬೇಕು ಎಂದು ಆಗ್ರಹಿಸಿದರು.
ಮೇಯರ್ ಜ್ಯೋತಿ ಪಾಟೀಲ, ಮಾಜಿ ಶಾಸಕಿ ಸೀಮಾ ಮಸೂತಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ, ರೇಖಾ ಹೆಗಡೆ, ಅಕ್ಕಮಹಾದೇವಿ ಹೆಗಡೆ, ರಾಜೇಶ್ವರಿ ಅಳಗವಾಡಿ, ಸಂಗಿತಾ ಬದ್ದಿ, ಸುಮಾ ಶಿವನಗೌಡ್ರ ಸುದ್ದಿಗೋಷ್ಠಿಯಲ್ಲಿ ಇದ್ದರು.