ವಿದ್ಯಾರ್ಥಿಗಳು ಉತ್ತಮ ಹವ್ಯಾಸ ಬೆಳೆಸಿಕೊಳ್ಳಲಿ

ಕೆಎಸ್​ಎಸ್​ ಕಾಲೇಜಿನಿಂದ ನಶಾಮುಕ್ತ ಭಾರತ ಜಾಗೃತಿ
ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಕೆಎಸ್​ಎಸ್​ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಶಾ ಮುಕ್ತ ಭಾರತ ಜಾಗೃತಿ ಜಾಥಾ ನಡೆಸಿದರು.
ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಕೆಎಸ್​ಎಸ್​ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಶಾ ಮುಕ್ತ ಭಾರತ ಜಾಗೃತಿ ಜಾಥಾ ನಡೆಸಿದರು.
Published on: 

ಹುಬ್ಬಳ್ಳಿ: ವಿದ್ಯಾರ್ಥಿ ಜೀವನವು ಸಾಧನೆ ಮತ್ತು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿ ವೀಣಾ ಎನ್​. ಹೇಳಿದರು.

ನಗರದ ಕೆಎಸ್​ಎಸ್​ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ "ನಶಾ ಮುಕ್ತ ಯುವ ಫಾರ್​ ವಿಕಸಿತ ಭಾರತ' ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ನೇಹಿತರ ಒತ್ತಡ, ಕುತೂಹಲ, ಅನುಕರಣೆಯ ಮನೋಭಾವ ಹಾಗೂ ಕ್ಷಣಿಕ ಸಂತೋಷದ ಆಸೆಯಿಂದ ಕೆಲವರು ತಂಬಾಕು ಮತ್ತು ಇತರ ಮಾದಕ ವಸ್ತುಗಳ ಬಳಕೆಗೆ ಮುಂದಾಗುತ್ತಾರೆ. ಆರಂಭದಲ್ಲಿ ಸಣ್ಣದೆಂದು ಕಾಣಿಸುವ ಇಂತಹ ದುಶ್ಚಟಗಳು ಕ್ರಮೇಣ ವ್ಯಸನವಾಗಿ ಬದಲಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಇಂತಹ ದುರಭ್ಯಾಸಗಳಿಂದ ದೂರವಿರಬೇಕು ಎಂದರು.

ಯುವಕರು ಜೀವನದಲ್ಲಿ ದೊಡ್ಡ ಕನಸುಗಳನ್ನು ಹೊಂದಿ ಅದರ ಸಾಕಾರಕ್ಕೆ ಪ್ರಯತ್ನಿಸಬೇಕು. ಕುಟುಂಬಕ್ಕೆ ಆಸರೆಯಾಗುವುದು ಮತ್ತು ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳುವುದು ಪ್ರಮುಖ ಗುರಿಯಾಗಿರಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಸ್​ಎಸ್​ ಸಂಸ್ಥೆಯ ಅಧ್ಯಕ್ಷ ರವೀಂದ್ರನಾಥ ದಂಡಿನ ಮಾತನಾಡಿ, ಯುವಜನರು ದೇಶದ ಅಮೂಲ್ಯ ಸಂಪತ್ತಾಗಿದ್ದು, ಅವರ ಶಕ್ತಿ, ಪ್ರತಿಭೆ ಮತ್ತು ಪರಿಶ್ರಮವು ರಾಷ್ಟ್ರದ ಭವಿಷ್ಯ ಉಜ್ವಲಗೊಳಿಸುವತ್ತ ಬಳಕೆಯಾಗಲಿ ಎಂದರು.

ಯುವಜನರು ಆರೋಗ್ಯವಂತರಾಗಿ ಬೆಳೆದಾಗ ಮಾತ್ರ ಕುಟುಂಬ, ಸಮಾಜ ಮತ್ತು ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ನಶೆಯು ಕುಟುಂಬದ ನೆಮ್ಮದಿ ಮತ್ತು ಸಮಾಜದ ಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಜೀವನದಲ್ಲಿ ಶಿಸ್ತು, ಸಮಯಪಾಲನೆ, ಆತ್ಮವಿಶ್ವಾಸ ಮತ್ತು ಉತ್ತಮ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಪದವಿ ವಿಭಾಗದ ಪ್ರಾಚಾರ್ಯ ಡಾ. ಬಿ.ಜಿ. ಮಡ್ಲಿ, ಪದವಿಪೂರ್ವ ವಿಭಾಗದ ಪ್ರಾಚಾರ್ಯ ಸಂದೀಪ ಬೂದಿಹಾಳ, ಉದ್ಯಮಿ ಗೌತಮ್​ ಬಾಣಾ, ಬಿ.ಎಸ್​.ಡಬ್ಲ್ಯೂ. ವಿಭಾಗದ ಪ್ರಾಚಾರ್ಯ ಮಹೇಶ ಗೌಡಪ್ಪಗೌಡರ ಉಪಸ್ಥಿತರಿದ್ದರು.

ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು , ಸ್ವಯಂ ಸೇವಕರು ನಗರದಲ್ಲಿ ಜಾಗೃತಿ ಜಾಥಾ ನಡೆಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಬೀರೇಶ ತಿರಕಪ್ಪನವರ ಕಾರ್ಯಕ್ರಮ ಸಂಯೋಜಿಸಿದರು. ರಾಜೇಶ್ವರಿ ಮಡಿವಾಳರ ಪ್ರಾರ್ಥಿಸಿದರು. ಉಪನ್ಯಾಸಕಿ ಗಾಯತ್ರಿ ರಾಮನಗೌಡ್ರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net