medical ವೈದ್ಯಕೀಯ ಕ್ಷೇತ್ರದ ದತ್ತಾಂಶ, ದಾಖಲೆ ಮುದ್ರಣವಾಗಲಿ
medical ಹುಬ್ಬಳ್ಳಿಯ ಕೆಎಂಸಿಆರ್ಐನಲ್ಲಿ ಆಯೋಜಿಸಿದ್ದ ಲ್ಯಾಪ್ರೊ-2026 ಕಾರ್ಯಕ್ರಮದ ಉದ್ಘಾಟನೆಯನ್ನು ಆರ್ಜಿಯುಎಚ್ಎಸ್ ಕುಲಪತಿ ಡಾ. ಬಿ.ಸಿ. ಭಗವಾನ್ ನೆರವೇರಿಸಿದರು. ಡಾ. ಸಿ. ಪಳನಿವೇಲು, ಕೆಎಂಸಿಆರ್ಐ ನಿರ್ದೇಶಕ ಡಾ. ಈಶ್ವರ ಹೊಸಮನಿ, ಡಾ. ಗಡ್ಡಿ ದಿವಾಕರ, ಇತರರು ಇದ್ದರು.
ಕೆಎಂಸಿಆರ್ಐನಲ್ಲಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಡಾ. ಭಗವಾನ್ ಆಶಯ.
ಶಸ್ತ್ರಚಿಕಿತ್ಸೆಯಲ್ಲಿ ಆಧುನಿಕ ತಂತ್ರಜ್ಞಾನದ ಅರಿವು ಇರಬೇಕು.
ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
ನಗರದ ಕೆಎಂಸಿಆರ್ಐ ಆಸ್ಪತ್ರೆ ಸಭಾಂಗಣದಲ್ಲಿ ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಅಸೋಸಿಯೇಷನ್ ಆಫ್ ಮಿನಿಮಲ್ ಅಕ್ಸೆಸ್ ಸರ್ಜನ್ಸ್ ಆಫ್ ಇಂಡಿಯಾ (ಎಎಂಎಎಸ್ಐ) ವತಿಯಿಂದ ಶುಕ್ರವಾರ ಆಯೋಜಿಸಿದ್ದ ಲ್ಯಾಪ್ರೊ 2026-ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ರಾಷ್ಟ್ರೀಯ ಸಮ್ಮೇಳನ ಮತ್ತು ನೇರ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಜನ್ಗಳ ಹೃದಯ ಸಿಂಹದಂತೆ ಇರಬೇಕು. ಶಸ್ತ್ರಚಿಕಿತ್ಸೆಯಲ್ಲಿ ಆಧುನಿಕ ತಂತ್ರಜ್ಞಾನದ ಅರಿವು ಇರಬೇಕು.
ಸಮಾಜಕ್ಕೆ ಮಾದರಿಯಾಗುವಂತಹ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ.
ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗುತ್ತವೆ. ಆದರೆ, ಆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದೇ ಯಶಸ್ಸಿನ ಮೂಲ ಮಂತ್ರ ಎಂದು ಹೇಳಿದರು.
ಪ್ರತಿ ಜಿಲ್ಲಾ ಮಟ್ಟದಲ್ಲಿ ಲ್ಯಾಪ್ರೋಸ್ಕೋಪಿ ಸರ್ಜನ್ಗಳು ಇದ್ದಾರೆ. ವೈದ್ಯರು ತಮ್ಮ ವೃತ್ತಿಯಲ್ಲಿ ಉತ್ತಮ ಸಂವಹನ ಕಲೆ ಹಾಗೂ ವೃತ್ತಿ ಕೌಶಲ ಅಳವಡಿಸಿಕೊಂಡರೆ ಉತ್ತಮ ಹೆಸರು ಗಳಿಸಲು ಸಾಧ್ಯ.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಪ್ರತಿ ಕಾಲೇಜು ಕ್ಯಾಂಪಸ್ ಅನ್ನು ನಶೆಮುಕ್ತ ಮಾಡುವ ಗುರಿ ಹೊಂದಿದ್ದೇವೆ. ಇದರೊಂದಿಗೆ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಎಂಎಎಸ್ಐ ಸಂಸ್ಥಾಪಕ ಅಧ್ಯಕ್ಷ ಡಾ. ಸಿ. ಪಳನಿವೇಲು ಅವರು ರಚಿಸಿದ ‘ಗಟ್ಸ್’ ಕೃತಿಯ ಕನ್ನಡ ಭಾಷಾಂತರ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ನಂತರ ಮಾತನಾಡಿದ ಡಾ. ಸಿ. ಪಳನಿವೇಲು, ಶಸ್ತ್ರಚಿಕಿತ್ಸಕರು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಎಂಸಿಆರ್ಐ ನಿರ್ದೇಶಕ ಡಾ. ಈಶ್ವರ ಹೊಸಮನಿ, ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸಲು ಕೆಎಂಸಿಆರ್ಐ ಶ್ರಮಿಸುತ್ತಿದೆ ಎಂದರು.
ಕೆಎಸ್ಸಿಎಎಸ್ಐ ಚೇರ್ಮನ್ ಡಾ. ನಾಝು ಜಹಾನ್ ಶೇಖ, ಎಎಸ್ಐ ಅಧ್ಯಕ್ಷ ಡಾ. ಡಿ. ಮುರುಥು ಪಾಂಡ್ಯನ್, ಎಎಸ್ಐ ಕಾರ್ಯದರ್ಶಿ ಡಾ. ಗಡ್ಡಿ ದಿವಾಕರ, ಡಾ. ರೋಶನ ಶೆಟ್ಟಿ, ಡಾ. ಕಲ್ಪೇಶ ಜೈನ್, ಡಾ. ಸೂರ್ಯಕಾಂತ ಕೆ., ಡಾ. ಈಶ್ವರ ಹಸಬಿ, ಡಾ. ರಾಜಶಂಕರ ಎಸ್., ಡಾ. ನಾಗರಾಜ ಚಾಂದಿ, ಇತರರು ಇದ್ದರು.