law vv program ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನ್ಯಾ. ಎಚ್. ಬಿಳ್ಳಪ್ಪ, ಡಾ. ಸಿ. ಬಸವರಾಜು, ಡಾ. ದಯಾನಂದ, ಡಾ. ರತ್ನಾ ಭರಮಗೌಡರ, ಇತರರು ಇದ್ದರು.
ಹುಬ್ಬಳ್ಳಿ: law vv program ವಕೀಲ ವೃತ್ತಿಯು ಉದಾತ್ತವಾಗಿದ್ದು, ವಕೀಲರಾಗಿ ಅಪಾರ ಕಲಿಕೆ ಹಾಗೂ ಕಾನೂನು ತಿಳಿವಳಿಕೆ ಮೂಲಕ ಪಡೆದ ಜ್ಞಾನವನ್ನು ಸಮಾಜ ಸೇವೆಗೆ ಸಮರ್ಪಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಾಧೀಶ ಎಚ್. ಬಿಳ್ಳಪ್ಪ ಹೇಳಿದರು.
ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾನೂನು ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಎರಡು ದಿನಗಳ 12ನೇ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಸಮಾರೋಪದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ವಕೀಲರು ಜಾತಿ, ಧರ್ಮ, ಲಿಂಗಗಳ ಪಕ್ಷಪಾತ ಮಾಡದೇ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸಬೇಕು. ಯಾವುದೇ ಲಾಭದಾಯಕ ಮನೋಭಾವನೆ ಇಟ್ಟುಕೊಳ್ಳದೇ ನಂಬಿ ಬರುವ ಕಕ್ಷಿದಾರನ ಸಲುವಾಗಿ ಕೆಲಸ ಮಾಡಬೇಕು. ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದರು.
ವಿಶಾಕಪಟ್ಟಣದ ದಾಮೋದರಂ ಸಂಜೀವಯ್ಯ ನ್ಯಾಷನಲ್ ಲಾ ವಿವಿ ಅಸೋಸಿಯೇಟ್ ಪ್ರೊ. ಡಾ. ದಯಾನಂದ ಮೂರ್ತಿ, ಕಾನೂನು ವಿದ್ಯಾರ್ಥಿಗಳಿಗೆ ಧೈರ್ಯ, ಭಾಷಾ ಸಂವಹನ, ವಾದ ಮಂಡನೆ ಮತ್ತು ನಂಬಿಕೆ ವಿಶ್ವಾಸ ಮುಂತಾದ ವೃತ್ತಿ ಗುಣಲಕ್ಷಣಗಳು ಬಹಳ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಇಂದಿನ ಯುವ ವಕೀಲರು ಸಮಾಜಿಕ ಕಳಕಳಿ ಇಟ್ಟುಕೊಂಡು ವೃತ್ತಿಯಲ್ಲಿ ತೊಡಗಬೇಕು ಹಾಗೂ ಪ್ರತಿಯೊಬ್ಬ ನಾಗರಿಕನು ಸಂವಿಧಾನದ ಮೌಲ್ಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಿಂದ ಆರೋಗ್ಯಕರ ಸಮಾಜ ಸೃಷ್ಟಿಯಾಗಬಲ್ಲದು ಎಂದರು.
ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ್, ಹಿರಿಯ ವಕೀಲ ಕೆ.ಎಲ್. ಪಾಟೀಲ್ ಉಪಸ್ಥಿತರಿದ್ದರು.