ವಂದೇ ಭಾರತ್ (Vande Bharat) ರೈಲಿಗೆ ಪ್ರಯಾಣಿಕರ ಕೊರತೆ

ವಂದೇ ಭಾರತ್ (Vande Bharat) ರೈಲು.
ವಂದೇ ಭಾರತ್ (Vande Bharat) ರೈಲು.
Published on

ಪ್ರಮುಖ ಮುಖ್ಯಾಂಶಗಳು

  • (Vande Bharat) ಸಮಯದ ಕೊರತೆ.
  • ಆದಾಯದ ಕೊರತೆ ಎದುರಿಸುತ್ತಿದೆ.
  • ಹಸಿರು ನಿಶಾನೆ ಸಿಕ್ಕಿರಲಿಲ್ಲ.
ಈ ರೈಲು ಸಂಚಾರ ಹಲವು ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಆರಂಭಗೊಂಡಾಗಿನಿಂದಲೂ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರದ ಬೇಡಿಕೆಯೂ ಆರಂಭಗೊಂಡಿತ್ತು.
ಆದರೆ, ಪ್ರಯಾಣಿಕರ ಮತ್ತು ಆದಾಯದ ಕೊರತೆ ಉಂಟಾಗಬಹುದೆಂಬ ಉದ್ದೇಶದಿಂದ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿರಲಿಲ್ಲ. ಕೆಲ ತಿಂಗಳುಗಳ ನಂತರ ಈ ನೂತನ ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದ್ದರೂ, ಸಮಯದ ಕೊರತೆಯಿಂದಾಗಿ ಈ ರೈಲು ಸಂಚಾರ ಮತ್ತೆ ವಿಳಂಬವಾಗಿತ್ತು.
ಅಂತೂ, ಇಂತೂ ಕಳೆದ ಆಗಷ್ಟನಲ್ಲಿ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಆರಂಭಗೊಂಡರೂ, ಶೇ. 100ರಷ್ಟು ಪ್ರಯಾಣಿಕರು ಸಂಚರಿಸುತ್ತಿಲ್ಲ.
ಹಾಗೆ ನೋಡಿದರೆ, ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲು ಶೇ. 100ರಷ್ಟು ಪ್ರಯಾಣಿಕರೊಂದಿಗೆ ಆರಂಭದಿಂದಲೂ ಸಂಚರಿಸುತ್ತಿದೆ. ಆದರೆ, ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಶೇ. 70ರಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದು, ಶೆ. 50.99ರಷ್ಟು ಆದಾಯದ ಕೊರತೆ ಎದುರಿಸುತ್ತಿದೆ.
ಅದರಲ್ಲೂ, ಬೆಳಗಾವಿಯಿಂದ ಬೆಂಗಳೂರಿಗೆ ಸಂಚರಿಸುವಾಗ ಅತಿ ಹೆಚ್ಚಿನ ಪ್ರಯಾಣಿಕರ ಕೊರತೆಯನ್ನು ಈ ರೈಲು ಎದುರಿಸುತ್ತಿದೆ. ಇದಕ್ಕೆ ಹೋಲಿಸಿದರೆ ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಪ್ರಯಾಣಿಕರು ಹೆಚ್ಚು ಇರುತ್ತಾರೆ ಎನ್ನುತ್ತವೆ ನೈಋತ್ಯ ರೈಲ್ವೆ ವಲಯದ ಮೂಲಗಳು.
ಬೆಳಗಾವಿಯಿಂದ ಬೆಳಗಿನಜಾವ 5.30ಕ್ಕೆ ಹೊರಡುವ ವಂದೇ ಭಾರತ್ ರೈಲಿನಲ್ಲಿ ಶೇ. 59ರಷ್ಟು ಪ್ರಯಾಣಿಕರಿದ್ದರೆ, ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುವಾಗ ಶೇ. 80ರಷ್ಟು ಪ್ರಯಾಣಿಕರು ಕಳೆದ ಮೂರು ತಿಂಗಳಿನಿಂದ ಸಂಚರಿಸುತ್ತಿದ್ದಾರೆ.
ಹೀಗಾಗಿ, ಬೆಳಗಾವಿಯಿಂದ ಸಂಚರಿಸುವ ಈ ರೈಲಿನ ಅವಧಿಯನ್ನು ಬೆಳಗಿನಜಾವ 5.30ರ ಬದಲು, ಬೆಳಗ್ಗೆ 6 ಗಂಟೆಗೆ ವಿಸ್ತರಿಸುವಂತೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ನೈಋತ್ಯ ರೈಲ್ವೆ ವ್ಯವಸ್ಥಾಪಕರಿಗೆ ಬೇಡಿಕೆಯನ್ನೂ ಸಲ್ಲಿಸಿದ್ದಾರೆ.
ಸಂಚಾರದ ವಿವರ :ಬೆಳಗಾವಿ- ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಆಗಷ್ಟನಲ್ಲಿ ಶೇ. 55.61 ರಷ್ಟು ಪ್ರಯಾಣಿಕರು ಸಂಚರಿಸಿ, ಶೇ. 41.44 ಆದಾಯವಾಗಿತ್ತು. ಸೆಪ್ಟೆಂಬರ್​ನಲ್ಲಿ ಶೇ. 54.36 ರಷ್ಟು ಪ್ರಯಾಣಿಕರು ಸಂಚರಿಸಿ, ಶೇ. 39.83 ಆದಾಯ ಬಂದಿತ್ತು.

ಇನ್ನೂ, ಬೆಂಗಳೂರು- ಬೆಳಗಾವಿ ವಂದೇ ಭಾರತ್ ರೈಲಿನಲ್ಲಿ ಆಗಷ್ಟನಲ್ಲಿ ಶೇ. 83.54ರಷ್ಟು ಪ್ರಯಾಣಿಕರು ಸಂಚರಿಸಿ, ಶೇ. 61.66ರಷ್ಟು ಆದಾಯವಾಗಿತ್ತು.

ಸೆಪ್ಟೆಂಬರ್​ನಲ್ಲಿ ಶೇ. 80.55 ರಷ್ಟು ಪ್ರಯಾಣಿಕರು ಸಂಚರಿಸಿ, ಶೇ. 58.59ರಷ್ಟು ಆದಾಯ ಬಂದಿತ್ತು. ಅಕ್ಟೋಬರ್​ನಲ್ಲಿ ಶೇ. 80.39ರಷ್ಟು ಪ್ರಯಾಣಿಕರು ಸಂಚರಿಸಿ, ಶೇ. 58.88ರಷ್ಟು ಆದಾಯವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net