Hiremath property dispute ಕುಂದಗೋಳ ಪಂಚಗೃಹ ಹಿರೇಮಠದ ಆಸ್ತಿ ವಿವಾದ ಸುಖಾಂತ್ಯ

Hiremath property dispute ಕುಂದಗೋಳ ಪಟ್ಟಣದ ಪಂಚಗೃಹ ಹಿರೇಮಠದ ಆವರಣದಲ್ಲಿ ಗುರು-ಶಿಷ್ಯರ ಸಮಾಲೋಚನೆ ಸಭೆ ನಡೆಯಿತು. ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಇದ್ದರು.
Hiremath property dispute ಕುಂದಗೋಳ ಪಟ್ಟಣದ ಪಂಚಗೃಹ ಹಿರೇಮಠದ ಆವರಣದಲ್ಲಿ ಗುರು-ಶಿಷ್ಯರ ಸಮಾಲೋಚನೆ ಸಭೆ ನಡೆಯಿತು. ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಇದ್ದರು.
Published on
  • ಪರಂಪರೆ ಪಾಲಿಸುವುದಾಗಿ ಶಿತಿಕಂಠೇಶ್ವರ ಶ್ರೀಗಳಿಂದ ಲಿಖಿತ ಭರವಸೆ
  • ನಿಯಮ ಮೀರಿ ನಡೆದರೆ ಪೀಠದಿಂದ ಪದಚ್ಯುತಗೊಳಿಸುವುದಾಗಿ ಶಿತಿಕಂಠೇಶ್ವರ ಶ್ರೀಗಳಿಗೆ ಎಚ್ಚರಿಕೆ 
  • ಮಠದ ಪಾರದರ್ಶಕ ಆಡಳಿತಕ್ಕಾಗಿ 15 ಸದಸ್ಯರ ಭಕ್ತರ ಸಮಿತಿ ರಚನೆಗೆ ನಿರ್ಧಾರ
  • ಮಠದ ಅಭಿವೃದ್ಧಿಗೆ ಶಾಸಕ ಎಂ.ಆರ್. ಪಾಟೀಲ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಲಾ 10 ಲಕ್ಷ ರೂ. ಅನುದಾನದ ಭರವಸೆ
ಕುಂದಗೋಳ: ಪಟ್ಟಣದ ಪಂಚಗೃಹ ಹಿರೇಮಠದ ಆಸ್ತಿ (Hiremath property dispute) ಮಾರಾಟ ಮತ್ತು ಮಠದ ಪರಂಪರೆ ಉಲ್ಲಂಘನೆಯ ವಿವಾದವು ಕಾಶಿ ಪೀಠ ಹಾಗೂ ರಂಭಾಪುರಿ ಪೀಠದ ಜಗದ್ಗುರುಗಳು ಕಟ್ಟುನಿಟ್ಟಿನ ಎಚ್ಚರಿಕೆ ಮೂಲಕ ಸುಖಾಂತ್ಯ ಕಂಡಿದೆ.
ಪಂಚಗೃಹ ಹಿರೇಮಠದ ಆಸ್ತಿ ಮಾರಾಟ ಆರೋಪದ ಹಿನ್ನೆಲೆಯಲ್ಲಿ ಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ ವಿರುದ್ಧ ಕಾಶಿ ಹಾಗೂ ರಂಭಾಪುರಿ ಪೀಠದ ಜಗದ್ಗುರುಗಳಿಗೆ ಭಕ್ತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಂಚಗೃಹ ಹಿರೇಮಠದಲ್ಲಿ ಶುಕ್ರವಾರ ಗುರು-ಶಿಷ್ಯರ ಸಮಾಲೋಚನಾ ಸಭೆ ನಡೆಯಿತು.
ಪಂಚಗೃಹ ಹಿರೇಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ ಅವರು ತಮ್ಮಿಂದಾಗಿರುವ ತಪ್ಪು ಒಪ್ಪಿಕೊಂಡರಲ್ಲದೆ, ಮಠದ ಆಸ್ತಿ ಪರಭಾರೆ ಮಾಡುವುದಿಲ್ಲ. ಮಠದ ಪರಂಪರೆಯಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.
ನಂತರ ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಗೃಹ ಹಿರೇಮಠದ ಆಸ್ತಿ ಮಾರಾಟದ ಕುರಿತು ಭಕ್ತರಿಂದ ಬಂದ ದೂರುಗಳನ್ನು ಎಲ್ಲ ರೀತಿಯಲ್ಲಿ ಪರಾಮರ್ಶಿಸಿದ್ದೇವೆ. ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಇನ್ನುಮುಂದೆ ಮಠದ ಆಸ್ತಿಯನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು. ಸನಾತನ ಪರಂಪರೆಯಂತೆ ಧರ್ಮ ಜಾಗೃತಿ ಕೆಲಸ ಮುಂದುವರಿಸುವಂತೆ ತಿಳಿಸಿದ್ದೇವೆ. ಒಂದು ವೇಳೆ ಪರಂಪರೆ, ನಿಯಮ ಪಾಲಿಸದಿದ್ದರೆ ಪೀಠದಿಂದ ಪದಚ್ಯುತಗೊಳಿಸುವ ಕುರಿತು ಛಾಪಾ ಕಾಗದದಲ್ಲಿ (ಬಾಂಡ್ ಪೇಪರ್) ಬರೆಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಬಿಜಾಪುರದ ಆದಿಲ್ ಷಾ ಅವರಿಂದ 96 ಎಕರೆ ಜಮೀನು ಇನಾಂ ಪಡೆದ ಇತಿಹಾಸವಿರುವ ಮಠದ ಶ್ರೀಗಳ ವಿರುದ್ಧ ಭಕ್ತರು ದೂರು ನೀಡುವಂತಾಗಿರುವುದು ವಿಷಾದದ ಸಂಗತಿ. ಶ್ರೀಗಳಿಗೆ ಪ್ರಾಯಶ್ಚಿತ್ತವಾಗಿ 48 ದಿನಗಳ ಕಾಲ ಮಂಡಲ ಪೂಜೆ ನೆರವೇರಿಸಲು ಸೂಚಿಸಲಾಗಿದೆ. ಮಠದ ಅಭಿವೃದ್ಧಿಗೆ ಕೈಜೋಡಿಸಲು 15 ಜನರ ಭಕ್ತರ ಸೇವಾ ಸಮಿತಿ ರಚಿಸಲಾಗುವುದು ಎಂದರು.
ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ಸ್ವಾಮೀಜಿ ಅವರು ಭಕ್ತರ ದೂರುಗಳನ್ನು ವಿವರಿಸಿದರು. ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಎಂ.ಎಸ್. ಅಕ್ಕಿ, ಸೋಮರಾವ್ ದೇಸಾಯಿ, ಶಿವಾನಂದ ಬೆಂತೂರ, ಸತೀಶ ಕೊಬ್ಬಯ್ಯನವರ, ಎ.ಬಿ. ಉಪ್ಪಿನ, ರಮೇಶ ಕೊಪ್ಪದ, ಸುರೇಶ ಸವಣೂರ, ಶಂಕರಗೌಡ ದೊಡಮನಿ, ಫಕೀರೇಶ ನಾವಳ್ಳಿ, ಉಮೇಶ ಹೆಬಸೂರ, ಗುರು ಪಾಟೀಲ, ಶ್ರೀಕಂಠಗೌಡ ಹಿರೇಗೌಡ್ರ, ನಾಗರಾಜ ದೇಶಪಾಂಡೆ, ಬಸವರಾಜ ಕುಂದಗೋಳಮಠ, ಎಸ್.ಎಫ್. ಬೆಂಗೇರಿ, ಅಜ್ಜಯ್ಯ ರಟ್ಟಿಗೇರಮಠ, ನೂರಾರು ಭಕ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net