ಗೋದಾಮಿನಿಂದ ಅನ್ನಭಾಗ್ಯ ಯೋಜನೆಯ ಆಹಾರ ಧಾನ್ಯಗಳನ್ನು ಹೊತ್ತು ಹೊರಟಿದ್ದ ವಾಹನಕ್ಕೆ ಕನಿಷ್ಠ ತಾಡಪತ್ರಿ ಕೂಡ ಹೊದಿಸದೆ ಅತ್ಯಂತ ನಿರ್ಲಕ್ಷ್ಯದಿಂದ ಧಾನ್ಯಗಳನ್ನು ಸಾಗಿಸಲಾಗಿದೆ. ಪರಿಣಾಮ, ಪ್ರಯಾಣದ ಮಧ್ಯೆ ರಸ್ತೆಯುದ್ದಕ್ಕೂ 50 ಕೆಜಿಯ 30 ಜೋಳದ ಚೀಲಗಳು ಬಿದ್ದು, ಧಾನ್ಯವೆಲ್ಲ ಮಣ್ಣು ಪಾಲಾಗಿದೆ. ಒಂದೆಡೆ ಮಳೆ ಅಭಾವದಿಂದ ಗ್ರಾಮೀಣ ಭಾಗದ ಬಡವರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದರೆ, ಇನ್ನೊಂದೆಡೆ ಸರ್ಕಾರದ ನೀಡುವ ಧಾನ್ಯಗಳು ಹೀಗೆ ರಸ್ತೆಯಲ್ಲಿ ಚೆಲ್ಲಿ ಹಾಳಾಗಿರುವುದು ತಾಲೂಕು ಆಹಾರ ಇಲಾಖೆಯ ಹೊಣೆಗೇಡಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಕುರಿತು ತಾಲೂಕು ಆಹಾರ ನಿರೀಕ್ಷಕರಾದ ಬಸವರಾಜ ಸಂಶಿ ಪ್ರತಿಕ್ರಿಯಿಸಿ, ರಸ್ತೆಯಲ್ಲಿ ಬಿದ್ದು ಹಾಳಾದ ಜೋಳವನ್ನು ತಕ್ಷಣವೇ ವಾಪಸ್ ಪಡೆಯಲಾಗುವುದು. ಫಲಾನುಭವಿಗಳಿಗೆ ತೊಂದರೆಯಾಗದಂತೆ ಉತ್ತಮ ಗುಣಮಟ್ಟದ ಧಾನ್ಯವನ್ನು ಪುನಃ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಕೇವಲ ಭರವಸೆಗಳಿಂದ ಬಡವರ ಹೊಟ್ಟೆ ತುಂಬುವುದಿಲ್ಲ. ಈ ಕಳಪೆ ಸಾಗಾಣಿಕೆ ಮತ್ತು ಇಲಾಖೆಯ ಕರ್ತವ್ಯಲೋಪದ ವಿರುದ್ಧ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.