kcci program ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ 98ನೇ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಗೋವಿಂದ ಜೋಶಿ, ರಾಜಶೇಖರ ಮಾಗನೂರ, ಎಂ.ಬಿ. ಹಂಗರಗಿ, ಶಾಂತಿಲಾಲ ಓಸ್ತವಾಲ, ಕಾಂತಿಲಾಲ ಪುರೋಹಿತ, ಸುಮಂತ ಸಿಂಧೂರ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ, ರವೀಂದ್ರನಾಥ ಗುಮಾಸ್ತೆ, ಜಿ.ಕೆ. ಆದಪ್ಪಗೌಡರ, ಶಂಕರಣ್ಣ ಮುನವಳ್ಳಿ ಇತರರು ಇದ್ದರು.
ಕೆಸಿಸಿಐ ಸಂಸ್ಥಾಪನ ದಿನಾಚರಣೆಯಲ್ಲಿ ಸಾಧಕರಿಗೆ ವಾಣಿಜ್ಯ ರತ್ನ ಪ್ರದಾನ
ಹುಬ್ಬಳ್ಳಿ: kcci program ಮಹಾರಾಷ್ಟ್ರದ ವಿದರ್ಭ ಯಾವುದೇ ಸಂಪನ್ಮೂಲ ಇಲ್ಲದಿದ್ದರೂ ಅಲ್ಲಿನ ನಾಯಕರು ಅದನ್ನು ಹೂಡಿಕೆಯ ತಾಣವನ್ನಾಗಿಸಿದ್ದಾರೆ, ಅನೇಕ ಕೈಗಾರಿಕೆಗಳು ಅಲ್ಲಿಗೆ ಬಂದಿವೆ. ಉತ್ತರ ಕರ್ನಾಟಕ ಎಲ್ಲ ಸಂಪನ್ಮೂಲಗಳನ್ನು ಹೊಂದಿದ್ದರೂ ಬಹಳಷ್ಟು ಹಿಂದುಳಿದಿದೆ. ಇದರ ಬಗ್ಗೆ ನಮ್ಮ ನಾಯಕರು, ಇಲ್ಲಿನ ಉದ್ಯಮಪತಿಗಳು ಗಮನ ಹರಿಸಬೇಕಾಗಿದೆ ಎಂದು ಹೊಸಪೇಟೆಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಎಂಡಿ ರವೀಂದ್ರನಾಥ ಗುಮಾಸ್ತೆ ಅಭಿಪ್ರಾಯಪಟ್ಟರು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ 98ನೇ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಉತ್ತರ ಕರ್ನಾಟಕದಲ್ಲಿ ಬಹುದೊಡ್ಡ ನಗರಗಳು ಇವೆ. ವ್ಯಾಪಾರ, ಉದ್ಯಮ ಬೆಳೆಸಲು ಎಲ್ಲ ಅವಕಾಶಗಳು ಇವೆ. ಗಟ್ಟಿ ಮನಸ್ಸು ಮಾಡಬೇಕಾಗಿದೆ ಅಷ್ಟೆ. ಕೆಸಿಸಿಐ ವತಿಯಿಂದ ನಿಯೋಗ ಕೊಂಡೊಯ್ದು ವಿದರ್ಭ ನೋಡಿ ಬರಬೇಕು ಎಂದು ಸಲಹೆ ನೀಡಿದರು.
ಕಾರವಾರ ಹಾಗೂ ಬಳ್ಳಾರಿ ಮಧ್ಯೆ ಇಂಡಸ್ಟ್ರಿಯಲ್ ಕಾರಿಡಾರ್ ಮಾಡಿದರೆ ಬಹುದೊಡ್ಡ ಬದಲಾವಣೆ ತರಬಹುದು. ಮುಖ್ಯವಾಗಿ ಈ ಭಾಗದಲ್ಲಿ ಉತ್ಪಾದನೆ ಯುನಿಟ್ಗಳನ್ನು ಹಾಕಬೇಕು. ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕು ಎಂದು ಗುಮಾಸ್ತೆ ಅವರು ಹೇಳಿದರು.
ಕನಿಷ್ಠ ವೇತನದ ಬಗ್ಗೆ ಚರ್ಚೆ
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಯಾವುದೇ ಒಂದು ಸಂಸ್ಥೆಯನ್ನು ಕಟ್ಟುವುದು ಬಹಳ ಸುಲಭ. ಆದರೆ, ಅದನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸ. ವಾಣಿಜ್ಯೋದ್ಯಮ ಸಂಸ್ಥೆಯು ಶತಮಾನೋತ್ಸವದತ್ತ ದಾಪುಗಾಲು ಇಟ್ಟಿರುವುದಕ್ಕೆ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿರುವುದರಿಂದ ಸಾಧ್ಯವಾಗಿದೆ ಎಂದರು.
ವರ್ತಕರು, ಉದ್ಯಮಿಗಳು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸದ್ಯ ಕನಿಷ್ಠ ವೇತನದ ಬಗ್ಗೆ ಅನೇಕರು ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.
ಸಂಸ್ಥಾಪಕರ ದಿನಾಚರಣೆ ಸಮಿತಿ ಚೇರ್ಮನ್ ಶಂಕರಣ್ಣ ಮುನವಳ್ಳಿ ಮಾತನಾಡಿ, ಸಂಸ್ಥೆಯು ಇಂದು ಬಹಳ ದೊಡ್ಡದಾಗಿ ಬೆಳೆದಿದೆ. ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ. ವ್ಯಾಪಾರ, ಉದ್ಯಮದಲ್ಲಿ ಇರುವವರಿಗೆ ಯಾವುದಕ್ಕೂ ಸಮಯ ಸಾಕಾಗುವುದಿಲ್ಲ. ಇಂತಹ ಕಾರ್ಯಕ್ರಮದ ಮೂಲಕ ಒಂದಿಷ್ಟು ಸಮಾಧಾನ, ಸಂತೋಷ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಾಣಿಜ್ಯ ರತ್ನ ಪ್ರದಾನ
ಉದ್ಯಮದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗೋವಿಂದ ಜೋಶಿ, ರಾಜಶೇಖರ ಮಾಗನೂರ, ಎಂ.ಬಿ. ಹಂಗರಗಿ, ಶಾಂತಿಲಾಲ ಓಸ್ತವಾಲ, ಕಾಂತಿಲಾಲ ಪುರೋಹಿತ, ಸುಮಂತ ಸಿಂಧೂರ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕರ ದಿನಾಚರಣೆ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.
ಪದಾಧಿಕಾರಿಗಳಾದ ಪ್ರವಿಣ ಅಗಡಿ, ಪ್ರಕಾಶ ಶೃಂಗೇರಿ, ಮಾಜಿ ಅಧ್ಯಕ್ಷರಾದ ವಿ.ಪಿ. ಲಿಂಗನಗೌಡರ, ಎಂ.ಸಿ. ಹಿರೇಮಠ, ಮಹೇಂದ್ರ ಲದ್ದಡ, ವಿನಯ ಜವಳಿ, ಎಸ್.ಪಿ. ಸಂಶಿಮಠ, ಇತರರು ಇದ್ದರು.