ಧಾರವಾಡ:ಎಲ್ಲ ಭಾಷೆಕ್ಕಿಂತ ಮೀಗಿಲಾಗಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು. ಮಾತೃಭಾಷೆಯ ಸೌಂದರ್ಯವನ್ನು ನಮ್ಮ ಮಕ್ಕಳಿಗೆ ತಿಳಿಸೋಣ, ಮಾತೃಭಾಷೆ ಹೃದಯ ಭಾಷೆಯಾಗಲಿ ಎಂದು ಅಪರ್ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.
ನಗರದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಗುರುವಾರ ನಡೆದ ಧಾರವಾಡ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ತಮಿಳುನಾಡನ್ನು ಹೊರತುಪಡಿಸಿದರೆ, ಭಾರತದ ಬೇರೆ ಯಾವುದೇ ರಾಜ್ಯಕ್ಕಿಂತ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಶಾಸನಗಳು ದೊರೆತಿವೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೀರ್ತಿ ಕನ್ನಡಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ನಾಡ ಧ್ವಜರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕನ್ನಡ ಭಾಷೆಯನ್ನು ಉಳಿಸಬೇಕು ಮತ್ತು ಬೆಳೆಸಬೇಕು. ಕನ್ನಡಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ನಾಡು ನುಡಿಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.
ಪರಿಷತ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ನರೇಗಲ್ಲ, ಕನ್ನಡ ನಾಡು ನುಡಿಯ ಬಗ್ಗೆ ಅಪಾರವಾದ ಅಭಿಮಾನ ಇರಬೇಕು. ಯಾವ ಪ್ರದೇಶದಲ್ಲಿದ್ದರು ನಮ್ಮ ಮಾತೃಭಾಷೆಯನ್ನು ಮರೆಯಬಾರದು ಎಂದರು.
ಸಾಯಿ ಪದವಿ ಪೂರ್ವ ಕಾಲೇಜು ಅಧ್ಯಕ್ಷೆ ವೀಣಾ ಬೀರಾದರ ಮಾತನಾಡಿ, ಕನ್ನಡ ಭಾಷೆ, ನಾಡು ನುಡಿ ಸಂಸ್ಕೃತಿ ಎಂಬುದು ಹೆಮ್ಮೆಯ ವಿಷಯ.ಮನ- ಮನಗಳಿಗೆ, ಮನೆ -ಮನೆಗಳಿಗೆ ಕನ್ನಡದ ಅಕ್ಷರಗಳು ತಲುಪಬೇಕು. ಇದೇ ನಾಡು, ಇದೆ ಭಾಷೆ ಎಂದೆಂದಿಗೂ ನಮ್ಮದಾಗಿರಲಿ ಎಂದರು.
ಬಾಬಾಜಾನ ಮುಲ್ಲಾ ಮಾತನಾಡಿದರು. ಎಸ್.ಎಮ್. ದಾನಪ್ಪಗೌಡರ, ಬಸವರಾಜ ಬಾರ್ಕಿ, ಪ್ರಭು ಕುಂದರಗಿ ಹಾಗೂ ಇತರು ಉಪಸ್ಥಿತರಿದ್ದರು.ಎಫ್.ಬಿ. ಕಣವಿ ನಿರೂಪಿಸಿದರು, ಬಸವರಾಜ ಗೊರವರ ಸ್ವಾಗತಿಸಿದರು. ಭಾರತಿ ಮನ್ನಿಕೇರಿ ನಿರ್ವಹಿಸಿದರು. ಜೆ.ಎಂ. ಗಾಮನಗಟ್ಟಿ ವಂದಿಸಿದರು.