

ಹುಬ್ಬಳ್ಳಿ: ರಂಗಭೂಮಿ ಕಲಾವಿದರೇ ಸೇರಿ ಮೊದಲ ಬಾರಿ ಮಾಡಿರುವ ಕನ್ನಡದ ಸಿನೆಮಾ ಕಲ್ಯಾಣಿ ನವೆಂಬರ್ ಅಂತ್ಯಕ್ಕೆ ಎಲ್ಲೆಡೆ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಬಿ.ಎಂ. ಗಿರಿರಾಜ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀನಾಸಂ ಪದವೀಧರ ಸಾಮ್ರಾಟ ಶೆಟ್ಟಿ ನಾಯಕನಟ, ಸಿಮ್ರಾನ್ ಕೌರ್ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ, ಹಿಂದಿ ಭಾಷೆ, ಸಂಸ್ಕೃತಿಯ ನಡುವಿನ ಸಂಘರ್ಷ, ಒಡನಾಟ, ಬಾಂಧವ್ಯ, ಪ್ರೀತಿ, ಸ್ನೇಹದ ಕಥೆಯನ್ನು ನವಿರಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಬಸವರೆಡ್ಡಿ ಅವರು ಬರೆದ ಕಥೆಯನ್ನು ತೆರೆಯ ಮೇಲೆ ತರಲಾಗಿದೆ ಎಂದರು.
ವರಕವಿ ದ.ರಾ. ಬೇಂದ್ರೆ ಅವರ ಹಾಡುಗಳನ್ನು ಬಳಸಿಕೊಳ್ಳಲಾಗಿದ್ದು, ಸಂಪೂರ್ಣ ಕರಾವಳಿ ಪ್ರದೇಶ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಜಟ್ಟಾ, ಅಮರಾವತಿ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ದೇಶಕರು ಈ ಚಿತ್ರದಲ್ಲಿ ಎಲ್ಲ ಹೊಸಬರನ್ನು ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದಾರೆ.
ಸವದತ್ತಿಯ ಯಲ್ಲಮ್ಮದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಟೀಸರ್ ಹಾಗೂ ಒಂದು ಹಾಡನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಲ್ಕು ಹಾಡುಗಳು, ಸನ್ನಿವೇಶಕ್ಕೆ ತಕ್ಕಂತೆ ಫೈಟ್ಗಳಿವೆ ಎಂದು ನಿರ್ದೇಶಕರು ತಿಳಿಸಿದರು.
ನಿರ್ಮಾಪಕ ಕುಮಾರಸ್ವಾಮಿ ಆರ್, ಛಾಯಾಗ್ರಾಹಕ ಪ್ರಶಾಂತ ಸಾಗರ, ಶಮಂತರಾವ್ ಇತರರು ಗೋಷ್ಠಿಯಲ್ಲಿದ್ದರು.