ಸುಖ ಸಮೃದ್ಧಿ ಕರುಣಿಸುವ ಜೋಕುಮಾರ

Jokumara visiting houses in Uppinabetageri village on Sunday.
ಉಪ್ಪಿನಬೆಟಗೇರಿ ಗ್ರಾಮದಲ್ಲಿ ಭಾನುವಾರ ಮನೆ ಮನೆಗೆ ತೆರಳುತ್ತಿರುವ ಜೋಕುಮಾರ.
Published on

ಉಪ್ಪಿನಬೆಟಗೇರಿ: ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯೊಂದಿಗೆ ಹಲವು ಆಚರಣೆಗಳು ಗರಿಗೆದರುತ್ತವೆ. ಅಂತಹ ಆಚರಣೆಗಳಲ್ಲಿ ಒಂದು ಜೋಕುಮಾರಸ್ವಾಮಿಯ ಪೂಜೆ. ಗಣೇಶ ಹೋದ ನಂತರ ಹುಟ್ಟುವ ಜೋಕುಮಾರಸ್ವಾಮಿ ಮಳೆ ತರುವುದರ ಜತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿ ಕರುಣಿಸುತ್ತಾನೆಂಬುದು ಜನರ ನಂಬಿಕೆ.

ಸುಣಗಾರರ ಮನೆತನದಲ್ಲಿ ಭಾದ್ರಪದ ಶುಕ್ಲದ ಅಷ್ಟಮಿ ದಿನದಂದು ಜನಿಸಿದ ಜೋಕುಮಾರ ಗ್ರಾಮದ ಪ್ರತಿ ಓಣಿಯಲ್ಲೂ ಸಂಚರಿಸುತ್ತಿದ್ದಾನೆ. ಸುಣಗಾರ ಮನೆತನದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಕೂಡಿಸಿ, ಕಣ್ಣರಳಿಸಿದ ದುಂಡು ಮುಖ ದೊಡ್ಡ ಕಣ್ಣು, ವಿಭೂತಿ, ಹುರಿಕಟ್ಟಾದ ದೊಡ್ಡ ಮೀಸೆ, ತೆರೆದ ಬಾಯಿಗೆ ಬೆಣ್ಣೆ ಹಚ್ಚಿ, ಗಿಡ್ಡ ಕಾಲುಗಳು, ಕೈಯಲ್ಲಿ ಸಣ್ಣದಾದ ಕತ್ತಿಯುಳ್ಳ ಮಣ್ಣಿನ ಮೂರ್ತಿಯನ್ನು ಬೇವಿನ ತಪ್ಪಲಲ್ಲಿ ಮುಚ್ಚಿಕೊಂಡು ಹೊತ್ತು ತರುತ್ತಾರೆ. ಕಣ್ಣಿಗೆ ಶಕ್ತಿ ಅಥವಾ ಕವಡಿಯನ್ನು ಚುಚ್ಚಿ ಅವು ಎದ್ದು ಕಾಣುವಂತೆ ಮಾಡಿರುತ್ತಾರೆ.

ಹುಟ್ಟಿದ ಏಳು ದಿನ ಮಹಿಳೆಯರಿಗೆ ಕಾಟ ಕೊಡುತ್ತ ಮೆರೆದಾಡುವ ಜೋಕುಮಾರ ಮನೆ ಬಾಗಿಲಿಗೆ ಬಂದಾಗ, ಊರ ಮಹಿಳೆಯರು ಮರದ ತುಂಬ ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚು ಹಾಗೂ ಬೇವಿನ ಎಲೆಯಲ್ಲಿ ಕಾಡಿಗೆ (ಕಪ್ಪು) ನೀಡುತ್ತಾರೆ.

ಜೋಳದ ಕಾಳು ಹಾಗೂ ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವ ನಂಬಿಕೆ ರೈತರದು. ಇನ್ನು ಕಪ್ಪನ್ನು ಮಕ್ಕಳ ಹಣೆಗೆ ಹಚ್ಚಿದರೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬುದು ಮತ್ತೊಂದು ನಂಬಿಕೆ.

ಜತೆಗೆ, ಜೋಕುಮಾರನ ಸುತ್ತಲೂ ಮುಳ್ಳು ಹಾಕಿ ಹೆಣ್ಣುಮಕ್ಕಳು ಸುತ್ತುತ್ತ ಹಾಡುತ್ತಾರೆ. ಈ ವೇಳೆ ಹೆಣ್ಣು ಮಕ್ಕಳ ಸೆರಗು ಮುಳ್ಳಿಗೆ ತಾಗುತ್ತದೆ. ಜೋಕುಮಾರನೇ ಸೀರೆ ಎಳೆದನೆಂದು ಗಂಡಸರು ಆತನನ್ನು ಒನಕೆಯಿಂದ ಹೊಡೆಯುತ್ತಾರೆ. ಆಗ ಆತನ ರುಂಡ ಅಂಗಾತ ಬಿದ್ದರೆ ‘ಉತ್ತಮ ಮಳೆಗಾಲ’ವೆಂದು, ಬೋರಲು ಬಿದ್ದರೆ ‘ಬರಗಾಲ’ ಎಂದೂ ನಂಬುತ್ತಾರೆ. ನಂತರ ರುಂಡ ಮುಂಡಗಳನ್ನು ಊರ ಮುಂದಿನ ಹಳ್ಳ ಅಥವಾ ಕೆರೆಗೆ ತಂದು ಬಟ್ಟೆ ತೊಳೆಯುವ ಕಲ್ಲಿನ ಕೆಳಗೆ ಮುಚ್ಚಿ ಬರುತ್ತಾರೆ.

ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಸಿಂಗರಿಸಿರುವುದು. ಮನೆಯಲ್ಲಿರುವ ಸೊಳ್ಳೆ, ತಿಗಣೆಗಳು ಕ್ರಿಮಿಕೀಟಗಳು ಜೋಕುಮಾರನೊಂದಿಗೆ ಹೊರಟು ಹೋಗಲಿ ಎಂದು ಉಪ್ಪ್ಪು, ಮೆಣಸಿನಕಾಯಿ, ಎಣ್ಣೆ- ಬೆಣ್ಣೆ ಅಂಬಲಿ (ಹುಳಿನುಚ್ಚು) ನೀಡುವುದು ಮೊದಲಿನಿಂದಲೂ ಬಂದಿರುವ ಸಂಪ್ರದಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net