ಜನಸಾಮಾನ್ಯರ ವೇದಿಕೆ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಆಯೋಜನೆ
ರಾಜ್ಯದ ವಿವಿಧ ಕಡೆಗಳಿಂದ ಸುಮಾರು 30 ಸಾವಿರ ಜನ ಭಾಗಿ
ರಾಜ್ಯ ಸರ್ಕಾರದಲ್ಲಿ 2.84 ಲಕ್ಷ ಹುದ್ದೆ ಖಾಲಿ
ಹುಬ್ಬಳ್ಳಿ: (Rally) ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ಜನಸಾಮಾನ್ಯರ ವೇದಿಕೆ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ಡಿ. 1ರಂದು ಧಾರವಾಡ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಸಂಚಾಲಕ ಯಲ್ಲಪ್ಪ ಹೆಗಡೆ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಲ್ಲಿ 10 ಲಕ್ಷ ಹಾಗೂ ರಾಜ್ಯ ಸರ್ಕಾರದಲ್ಲಿ 2.84 ಲಕ್ಷ ಹುದ್ದೆಗಳು ವಿವಿಧ ಇಲಾಖೆಯಲ್ಲಿ ಖಾಲಿ ಇವೆ ಎಂಬ ಅಂದಾಜಿದೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ಮೊದಲು ತಮ್ಮ ಪ್ರಣಾಳಿಕೆಯಲ್ಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡುತ್ತವೆ. ಆದರೆ, ನಂತರದಲ್ಲಿ ಮರೆತು ಬಿಡುತ್ತವೆ. ಈ ದಿಸೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಹೋರಾಟ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಯುವಕರು ಉದ್ಯೋಗ ಇಲ್ಲದೇ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತ ಅವರ ವಯೋಮಿತಿ ಮೀರಿ ಹೋಗುತ್ತಿದೆ. ಇದಕ್ಕಾಗಿ ಸರ್ಕಾರಗಳು ಅವರಿಗೆ ಉದ್ಯೋಗ ನೀಡಬೇಕು. ವಯೋಮಿತಿಯನ್ನು ಕನಿಷ್ಠ ಆರು ವರ್ಷ ಸಡಿಲಿಕೆ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉಚಿತವಾಗಿ ನಡೆಸಬೇಕು. ಪರೀಕ್ಷೆ ಕೇಂದ್ರಕ್ಕೆ ಹೋಗಿ ಬರಲು ಸಾರಿಗೆ ಉಚಿತವಾಗಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸ್ಪಷ್ಟ ಭರವಸೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ. ಧಾರವಾಡ ಚಲೋ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಸುಮಾರು 30 ಸಾವಿರ ಜನರು ಆಗಮಿಸಲಿದ್ದಾರೆ ಎಂದರು.
ಸಮಿತಿ ಸಂಚಾಲಕ ಸಿದ್ದಲಿಂಗ ಬಾಗೇವಾಡಿ, ವಿವಿಧ ಸಂಘಟನೆಯ ಭವಾನಿಶಂಕರ ಗೌಡ, ನಾಗರಾಜ ಛಲವಾದಿ, ಅಭಿ ಗೌಡ, ಸಂಜೀವ ಧುಮಕನಾಳ ಗೋಷ್ಠಿಯಲ್ಲಿದ್ದರು.