ಜ್ಯುವೆಲರಿ ಮಾಲೀಕನಿಂದ ಮೂವರ ಮೇಲೆ ಫೈರಿಂಗ್​

ನಿಂಗಪ್ಪ, ಸಿದ್ದಪ್ಪ, ಶ್ರದ್ಧಾ
ನಿಂಗಪ್ಪ, ಸಿದ್ದಪ್ಪ, ಶ್ರದ್ಧಾ
Published on
ಧಾರವಾಡ: ಗಿರವಿ ಇಟ್ಟಿದ್ದ ಚಿನ್ನ ಬಿಡಿಸಿಕೊಳ್ಳಲು ಹೋಗಿದ್ದ ಇಬ್ಬರು ಸೇರಿ ಬಾಲಕಿಯ ಮೇಲೆ ಜ್ಯುವೆಲರಿ ಮಾಲೀಕ ಗುಂಡು ಹಾರಿಸಿದ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಜೀರಿಗವಾಡ ಗ್ರಾಮದ ನಿಂಗಪ್ಪ ಹೊರಕೇರಿ ಹಾಗೂ ಸಿದ್ದಪ್ಪ ಹೊರಕೇರಿ ಎಂಬುವರು ಗರಗ ಗ್ರಾಮದ ಮೌನೇಶ ಬಡಿಗೇರ ಎಂಬುವರ ಚಿನ್ನದ ಅಂಗಡಿಯಲ್ಲಿ ಸುಮಾರು 40 ಗ್ರಾಂ ಚಿನ್ನವನ್ನು ಗಿರವಿ ಇಟ್ಟಿದ್ದರು. 4 ವರ್ಷಗಳ ಹಿಂದೆ 60 ಸಾವಿರ ರೂಪಾಯಿಗೆ ಗಿರವಿ ಇಟ್ಟಿದ್ದ ಚಿನ್ನವನ್ನು ಬಿಡಿಸಿಕೊಳ್ಳಲು ಇಬ್ಬರೂ ಹೋಗಿದ್ದರು. ಈ ವೇಳೆ ಜ್ಯುವೆಲರಿ ಮಾಲೀಕ ಮೌನೇಶ ಬಡಿಗೇರ ಎಂಬುವರೊಂದಿಗೆ ಮಾತನಾಡಿದ್ದಾರೆ. ಗಿರವಿ ಇಟ್ಟಿದ್ದ ಅವಧಿ ಮುಗಿದಿದೆ ಎಂದ ಮೌನೇಶ, ಚಿನ್ನ ಕೊಡುವುದಿಲ್ಲ ಎಂದಿದ್ದಾನೆ. ಈ ವೇಳೆ ಮೂವರ ಮಧ್ಯೆ ಚಕಮಕಿ ನಡೆದಿದೆ. ಸಿಟ್ಟಿಗೆದ್ದ ಮೌನೇಶ ತನ್ನ ಬಳಿ ಇದ್ದ ಪಿಸ್ತೂಲ್​ನಿಂದ 7 ಸುತ್ತು ಗುಂಡು ಹಾರಿಸಿದ್ದಾನೆ.
ಗಾಬರಿಗೊಂಡ ನಿಂಗಪ್ಪ ಮತ್ತು ಸಿದ್ದಪ್ಪ ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದಾರೆ. ಈ ವೇಳೆ ನಿಂಗಪ್ಪನ ಬಲ ತೊಡೆಗೆ 2 ಗುಂಡ ಹಾಗೂ ಸಿದ್ದಪ್ಪನ ಹೊಟ್ಟೆಗೆ 1 ಹಾಗೂ ಎಡಗಾಲಿಗೆ 2 ಗುಂಡು ತಗುಲಿವೆ.
ಇದೇವೇಳೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ಗರಗ ಗ್ರಾಮದ ಬಾಲಕಿ ಶ್ರದ್ಧಾ ಪಾಯಪ್ಪನವರ ಎಂಬುವಳ ಕಾಲಿಗೆ ಗುಂಡು ತಗುಲಿದೆ. ಮಾರುಕಟ್ಟೆ ಪ್ರದೇಶವಾಗಿದ್ದರಿಂದ ಜನರ ಗುಂಪು ಸ್ಥಳಕ್ಕೆ ದೌಡಾಯಿಸಿ ಜಗಳ ಬಿಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಗರಗ ಠಾಣೆ ಪೊಲೀಸರು ಆರೋಪಿ ಮೌನೇಶನನ್ನು ವಶಕ್ಕೆ ಪಡೆದಿದ್ದಾರೆ.
ಮೂವರು ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಎಸ್​ಪಿ ಗುಂಜನ್​ ಆರ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net