Muscat ಮಸ್ಕತ್​ನಲ್ಲಿ ಜವಾರಿ ಜನಪದ ಜಾತ್ರೆ

ಓಮಾನ್ ದೇಶದ ಮಸ್ಕತ್​ನಲ್ಲಿ (MuscatMuscat) ಚಾಲುಕ್ಯ ಕೂಟದಿಂದ ಆಯೋಜಿಸಿದ್ದ ಜನಪದ ಜಾತ್ರೆಯಲ್ಲಿ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ ಹಾಗೂ ಬಸವರಾಜ ಮಹಾಮನೆ ಅವರನ್ನು ಸನ್ಮಾನಿಸಲಾಯಿತು.
ಓಮಾನ್ ದೇಶದ ಮಸ್ಕತ್​ನಲ್ಲಿ (MuscatMuscat) ಚಾಲುಕ್ಯ ಕೂಟದಿಂದ ಆಯೋಜಿಸಿದ್ದ ಜನಪದ ಜಾತ್ರೆಯಲ್ಲಿ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ ಹಾಗೂ ಬಸವರಾಜ ಮಹಾಮನೆ ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಭೀಕರನ್ನು ನಗೆಗಡಲಲ್ಲಿ ತೇಲಿಸಿದರು.
  • ನಿತ್ಯ ಜೀವನದಲ್ಲಿ ನಡೆಯುವ ಹಾಸ್ಯ ಪ್ರಸಂಗ.
  • ಸಂತೆಯಲ್ಲಿ ಉತ್ತರ ಕರ್ನಾಟಕದ ಸೀರೆ, ಮಸಾಲೆ ಪದಾರ್ಥಗಳು ಆಕರ್ಷಿಸಿದವು.
ಉತ್ತರ ಕರ್ನಾಟಕದ ಸಾಹಿತ್ಯ, ಕಲೆ, ಉಡುಗೆ, ಆಹಾರ ಪದ್ಧತಿ ಹಾಗೂ ಸಂಸ್ಕೃತಿಯನ್ನು ವಿದೇಶದಲ್ಲಿ ಪ್ರದರ್ಶಿಸುವ ಉದ್ದೇಶದೊಂದಿಗೆ ಹಮ್ಮಿಕೊಂಡಿದ್ದ ಈ ಜಾತ್ರೆ ಕನ್ನಡಿಗರ ಮನ ಗೆದ್ದಿತು.
ಜಾತ್ರೆಯಲ್ಲಿ ರಂಗೋಲಿ, ಚಿತ್ರಕಲೆ, ಗ್ರಾಮೀಣ ಕ್ರೀಡೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗ್ರಾಮೀಣ ಕ್ರೀಡೆಗಳಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ತರ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕವಿಗಳ ಭಾವಚಿತ್ರಗಳಿಗೆ ಬಣ್ಣ ತುಂಬಿದರು.
ಅತಿಥಿಗಳಾಗಿದ್ದ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ ಹಾಗೂ ಬಸವರಾಜ ಮಹಾಮನೆ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಸಂತೆಯ ಮಳಿಗೆಗಳನ್ನು ಉದ್ಘಾಟಿಸಿದರು.
ನಿತ್ಯ ಜೀವನದಲ್ಲಿ ನಡೆಯುವ ಹಾಸ್ಯ ಪ್ರಸಂಗಗಳನ್ನು, ಜನಸಾಮಾನ್ಯರ ಬದುಕಿನ ಅನುಭವಗಳನ್ನು ಮತ್ತು ಕೆಲ ಊರುಗಳ ಹೆಸರುಗಳಲ್ಲಿ ಅಡಗಿರುವ ಹಾಸ್ಯವನ್ನು ಉತ್ತರ ಕರ್ನಾಟಕದ ಭಾಷೆ ಶೈಲಿಯಲ್ಲಿ ಹೇಳಿದ ಗಂಗಾವತಿ ಪ್ರಾಣೇಶ ಹಾಗೂ ಬಸವರಾಜ ಮಹಾಮನೆ, ಸಭೀಕರನ್ನು ನಗೆಗಡಲಲ್ಲಿ ತೇಲಿಸಿದರು.
ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ನಮ್ಮೂರ ಸಂತೆಯಲ್ಲಿ ಉತ್ತರ ಕರ್ನಾಟಕದ ಸೀರೆ, ಖಣ, ಆಭರಣಗಳು, ಸಿರಿಧಾನ್ಯ ಉತ್ಪನ್ನಗಳು, ಬಿದರಿ ಕಲೆ ವಸ್ತುಗಳು, ಮನೆಯಲ್ಲಿ ತಯಾರಿಸಿದ ತಿನಿಸುಗಳು ಹಾಗೂ ಮಸಾಲೆ ಪದಾರ್ಥಗಳು ಜನರನ್ನು ಆಕರ್ಷಿಸಿದವು.
ಜಾತ್ರೆ ಮುಗಿಸಿ ಹೊರಡುವ ಮಹಿಳೆಯರಿಗೆ ಅರಿಶಿಣ ಕುಂಕುಮ ಮತ್ತು ಉಡಕ್ಕಿ ನೀಡಿ ವಿದಾಯ ಹೇಳುವ ದೃಶ್ಯ ತವರು ಮನೆಗೆ ಬಂದ ಹೆಣ್ಣು ಮಗಳನ್ನು ಕಳುಹಿಸುವಂತಿತ್ತು.
ಮಹಿಳೆಯರು ಇಳಕಲ್ ಸೀರೆಯಲ್ಲಿ, ನತ್ತು, ಬುಗಡಿ, ಬೋರ್ಮಳ, ಕಾಸಿನ ಸರ, ಬಳೆಗಳೊಂದಿಗೆ ಮಿಂಚುತ್ತಿದ್ದರೆ, ಪುರುಷರು ಧೋತಿ, ಕೋಟು, ಟೋಪಿಯಲ್ಲಿ ಕಂಗೊಳಿಸುತ್ತಿದ್ದರು.
ಮಕ್ಕಳು ಲಂಗಾದಾವಣಿ, ಕುರ್ತಾ, ಪೈಜಾಮ ಧರಿಸಿ ಗಾಳಿಪಟ, ಬುಗರಿ, ಪುಗ್ಗಾ ಆಟ ಆಡಿದ ದೃಶ್ಯಗಳು ತಾಯ್ನಾಡಿನ ಜಾತ್ರೆಯನ್ನು ನೆನಪಿಸಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net