ಹುಬ್ಬಳ್ಳಿ: ಆಸರ ಓಣಿಯ ಶ್ರೀ ಭವಾನಿ ಶಂಕರ ದೇವಸ್ಥಾನ ಆವರಣದಲ್ಲಿ ನಿರ್ಮಿಸಿರುವ ರಸ್ತೆ ಕೆಳಗೆ ಪುಷ್ಕರಣಿ ಇದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್
jagadish shetter
, ದಾಖಲೆಗಳ ಸಮೇತ ಪ್ರತಿಪಾದಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಭವಾನಿಶಂಕರ ನಾರಾಯಣ ದೇವಸ್ಥಾನವು ಹಲವು ಬಾರಿ ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿವಲಿಂಗವಿದೆ. ದೇವಸ್ಥಾನದ ಪಶ್ಚಿಮ ದಿಕ್ಕಿಗೆ ಪಾಣಿಪೀಠದ ಮೇಲೆ ನಾರಾಯಣ ದೇವರು ನೆಲೆ ನಿಂತಿದ್ದಾರೆ. ಅಲ್ಲದೆ, ಒಳಾಂಗಣದಲ್ಲಿ ಪರಿವಾರ ದೇವರಿದ್ದು, ದೇವಸ್ಥಾನದ ಮುಖ್ಯದ್ವಾರದಲ್ಲಿ ವಿಜಯ ನಗರ ಸಾಮ್ರಾಜ್ಯದ ನಾಗರೀಖಾನೆ ಇದೆ. ದೇವಸ್ಥಾನದ ಮುಂಭಾಗದ ಕೂಳತೆ ದೂರದಲ್ಲಿ ಆಯಕಟ್ಟಿನ ಕಲ್ಲುಗಳಿಂದ ನಿರ್ಮಿಸಲಾದ ಪುಷ್ಕರಿಣಿ ಇದೆ ಎಂದು ಪುರಾತತ್ವ ಇಲಾಖೆಯ ದಾಖಲೆಗಳೇ ಹೇಳುತ್ತಿವೆ ಎಂದರು.
ಪುಷ್ಕರಣಿ ಇದೆ ಎನ್ನಲಾದ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಪುರಾತತ್ವ ಇಲಾಖೆಗೆ ಪಾಲಿಕೆ ಮನವಿ ಮಾಡಿತ್ತು. ಹಾಗಾಗಿ 2023 ರಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಆಸರ ಓಣಿ ದೇವಸ್ಥಾನದ ಸ್ಥಳಕ್ಕೆ ಭೇಟಿ ನೀಡಿ, ಪುಷ್ಕರಣಿ ಇರುವ ಬಗ್ಗೆ ಮೇಲ್ನೋಟಕ್ಕೆ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ವರದಿ ಸಲ್ಲಿಸಿದ್ದರು. ಆದರೆ, ಪುಷ್ಕರಣಿ ಬಗ್ಗೆ ಪಾಲಿಕೆ ಅಧಿಕಾರಿಗಳು ದಾಖಲಾತಿ ಕೇಳಲಿಲ್ಲ. ಇದೀಗ ವಿವಾದ ಉಂಟಾದ ಹಿನ್ನೆಲೆಯಲ್ಲಿ ಸ್ವತಃ ನಾನೇ ಪುರಾತತ್ವ ಇಲಾಖೆಯಿಂದ ದಾಖಲಾತಿಗಳನ್ನು ತರೆಸಿಕೊಂಡಾಗ ವಾಸ್ತವ ಬಯಲಿಗೆ ಬಂದಿದೆ ಎಂದರು.
ಈ ದೇವಸ್ಥಾನವು ರಾಜ್ಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭಿರವಾಗಿ
ಪರಿಗಣಿಸಬೇಕು. ತಕ್ಷಣ ನಿರ್ಮಿಸಿರುವ ರಸ್ತೆ ತೆರವುಗೊಳಿಸಬೇಕು. ಪುಷ್ಕರಣಿಯ ಉತ್ಖನನ ಆಗಬೇಕು. ಪುಷ್ಕರಿಣಿಯ ಕುರುಹುಗಳು ಲಭಿಸಿದ ಮೇಲೆ ಸುತ್ತಲೂ 100 ಮೀ. ಪ್ರದೇಶವನ್ನು ನಿಬರ್ಂಧಿತ ಮತ್ತು 200 ಮೀ. ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿ, ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದರೆ ಹಿಂದೂಗಳ ಕೆಂಗಣ್ಣಿಗೆ ಸರ್ಕಾರ ಗುರಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಇತಿಹಾಸದ ಪುಟ ತೆಗೆದು ನೋಡಿದರೆ ಹಿಂದೂಗಳ ದೇವಸ್ಥಾನ, ಧಾರ್ಮಿಕ ಸ್ಥಳಗಳು ಮಣ್ಣಲ್ಲಿ ಹೂತು ಹೋದ ಬಗ್ಗೆ ಸಾಕಷ್ಟು ಕುರುಹುಗಳಿವೆ. ಇದೂ ಒಂದು ಪ್ರಕರಣ. ಈ ಸಂಬಂಧ ನಿಷ್ಪಕ್ಷಪಾತ ಸಂಶೋಧನೆಯಾಗಬೇಕು. ರಾಜ್ಯ ಸರ್ಕಾರ ಈ ವಿಷಯದಲ್ಲಿ ರಾಜಕಾರಣ ಮಾಡದೇ ಭಾರತದ ಇತಿಹಾಸ ಸಾರುವ ಪ್ರಾಚ್ಯವಸ್ತುಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಪುರಾತತ್ವ ಇಲಾಖೆ ನಿಯಮಗಳನ್ನು ಮೀರಿಲ್ಲ. ಪುಷ್ಕರಣಿ ಇರುವ ಜಾಗ ಮತ್ತು ದೇವಸ್ಥಾನದ ಸುತ್ತಲಿನ ಜಾಗದಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡಿಸಿಲ್ಲ ಎಂದು ಕಾಂಗ್ರೆಸ್‌ನವರ ಆರೋಪಕ್ಕೆ ತಿರುಗೇಟು ನೀಡಿದರು.
ರಾಜ್ಯ ಪುರಾತತ್ವ ಇಲಾಖೆಯ ದಾಖಲಾತಿಗಳನ್ನು ಮಾಧ್ಯಮದವರ ಮುಂದೆ ಬಿಡುಗಡೆಗೊಳಿಸಿದರು.