ಧಾರವಾಡ: ಮಕ್ಕಳ ನಾಟಕ ಬರೆಯುವುದು ಪ್ರಯಾಸದಾಯಕ. ಮಕ್ಕಳ ಮನಸ್ಥಿತಿ, ಭಾವನೆ ಅರಿತು ನಾಟಕ ರಚಿಸಬೇಕಾಗುತ್ತದೆ. ಬಾಲ್ಯ ವಿವಾಹ ಸಮಾಜಿಕ ಅನಿಷ್ಟಗಳ ಕುರಿತು ನಾಟಕ ರಚಿಸಿ ಸಮಾಜ ಪರಿವರ್ತನೆಗೆ ಪ್ರಯತ್ನಿಸುತ್ತಿರುವುದು ಅಭಿನಂದನೀಯ ಎಂದು ರಂಗಕರ್ಮಿ ಝಾಕೀರ ನದಾಫ್ ಹೇಳಿದರು.
ಧಾರವಾಡದ ಚಿಲಿಪಿಲಿ ಪ್ರಕಾಶನದ ವತಿಯಿಂದ ಕವಿವ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತಿ ಶ್ರೀಧರ ಗಸ್ತಿ ಅವರ `ದಿ ಕಪ್ ಟಿಚ್ಡ ಬೈ ದೇವಮ್ಮ' ಹಾಗೂ `ಎಳೆಬಾಳೆ ಸುಳಿ ನಾನವ್ವ' ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಕಾಶವಾಣಿಯ ವಿಶ್ರಾಂತ ನಿರ್ದೇಶಕರಾದ ಬಸು ಬೇವಿನಗಿಡದ ಮಾತನಾಡಿ, ಶ್ರೀಧರ ಗಸ್ತಿ ಓರ್ವ ಶಿಕ್ಷಕರಾಗಿ ಮಕ್ಕಳ ಮನಸ್ಸನ್ನು ಅರಳಿಸಿ, ಅವರ ಕಲ್ಪನಾ ಶಕ್ತಿ ವೃದ್ಧಿಸುವ ಕಾರ್ಯವನ್ನು ಮಕ್ಕಳ ಸಾಹಿತ್ಯದ ಮೂಲಕ ಮಾಡಿದ್ದು ಅಭಿನಂದನೀಯ. ಅವರು ಸೃಜನಶೀಲ ಬರಹಗಾರರು ಮಾತ್ರವಲ್ಲ, ಕಥೆಗಾರರು, ಅನುವಾದಕಾರರು ಹೌದು. ಅವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿಗಳು ತಮ್ಮ ಶಾಲಾ ಜೀವನದ ವಾಸ್ತವಿಕ ಅನುಭವಗಳ ಸಾರವಾಗಿವೆ. ಅವರ ಸಾಹಿತ್ಯದಲ್ಲಿ ಬದುಕಿನ ಸತ್ಯಗಳಿವೆ. ಪ್ರಾಚಿನತೆಗಿಂತ ಆಧುನಿಕತೆಯ ವಾಸ್ತವಿಕ ಕಥೆಗಳಿವೆ ಎಂದರು.
ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ ಮಾತನಾಡಿ, ಚಿಲಿಪಿಲಿ ಸಂಸ್ಥೆ ಉದಯೋನ್ಮುಖ ಸಾಹಿತಿಗಳಿಗೊಂದು ವರದಾನ. ಅನೇಕ ಯುವ ಸಾಹಿತಿಗಳನ್ನು ನಿರಂತರವಾಗಿ ಪ್ರೋಹಿಸುತ್ತ ಬಂದಿದೆ. ಗಸ್ತಿಯವರ ಎರಡೂ ಕೃತಿಗಳು ಉತ್ಕೃಷ್ಟವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಮಕ್ಕಳ ಸಾಹಿತಿ ವೈ.ಜಿ. ಭಗವತಿ, ಶ್ರೀಧರ ಗಸ್ತಿ ಮಕ್ಕಳ ಸಾಹಿತ್ಯದ ಕುರಿತು ಮಾತನಾಡಿದರು.
ಡಾ. ಚಂದ್ರಶೇಖರ ರೊಟ್ಟಿಗವಾಡ, ಎನ್.ಜಿ. ಗುರುಪುತ್ರನವರ, ಬಿ.ಬಿ. ಪಾಟೀಲ, ಮೀನಾಕಮಾರಿ ಆಚಾರ್ಯ, ಸುಧಾ ಕಬ್ಬೂರ, ತನುಜಾ ಮುಗದ, ಮಾಧುರಿ ಕುಲಕರ್ಣಿ, ಭಾರತಿ ಬಡಿಗೇರ, ಪ್ರಮೀಳಾ ಜಕ್ಕಣ್ಣನವರ ಇದ್ದರು. ಶ್ರೀಶೈಲ ಸ್ವಾಗತಿಸಿದರು. ಎನ್.ಬಿ. ದ್ಯಾಪೂರ ನಿರ್ವಹಿಸಿದರು. ಅಶೋಕ ಡೊಂಬರಕೊಪ್ಪ ವಂದಿಸಿದರು.