ಇಸ್ಕಾನ್ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜಿವ ಲೋಚನದಾಸ, ಜೂನ್ 18ರಿಂದ 5 ದಿನಗಳವರೆಗೆ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ.
ಈ ಅವಧಿಯಲ್ಲಿ ನೂತನ ಮಂದಿರಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಇಲ್ಲ. ಈ ಮೊದಲಿನ ಮಂದಿರದಲ್ಲಿಯೇ ಭಕ್ತರು ಶ್ರೀಕೃಷ್ಣ ಬಲರಾಮ ಮೂರ್ತಿ ದರ್ಶನ ಮಾಡಬಹುದು ಎಂದರು.
ನೂತನ ದೇವಾಲಯ ನೆಲ ಮಟ್ಟದಿಂದ ಸುಮಾರು 110 ಅಡಿ ಎತ್ತರ ಇದೆ. ದೇವಸ್ಥಾನದ ಮೇಲೆ 90 ಅಡಿ ಎತ್ತರದ ಗೋಪುರ ನಿರ್ವಣಗೊಳ್ಳಲಿದೆ.
ಜೈಪುರದ ಗರ್ಭಗೃಹ ಶೈಲಿಯ ರಾಧಾಗೋವಿಂದ ಮೂರ್ತಿ, ಶ್ರೀಕೃಷ್ಣ ಬಲರಾಮ, ಚೈತನ್ಯ ಮಹಾಪ್ರಭು ಹಾಗೂ ನಿತ್ಯಾನಂದರ 4 ಅಡಿ ಎತ್ತರದ ಮೂರ್ತಿಗಳು ಈಗಾಗಲೇ ಬಂದಿವೆ ಎಂದು ತಿಳಿಸಿದರು.
ನೂತನ ಮುಖ್ಯ ದೇವಾಲಯ 4 ಮಹಡಿಗಳು ಮತ್ತು ಒಂದು ಮೇಲ್ಛಾವಣಿಯನ್ನು ಒಳಗೊಂಡಿದ್ದು, ಪ್ರಧಾನ ದೇವಾಲಯ ಸಭಾಂಗಣ 2ನೇ ಮಹಡಿಯಲ್ಲಿದೆ.
ಉತ್ತರ ಭಾರತದ ನಾಗರ ಶೈಲಿ ಮತ್ತು ದಕ್ಷಿಣ ಭಾರತದ ದ್ರಾವಿಡ ಶೈಲಿಗಳ ಸುಂದರ ಸಮನ್ವಯವಾದ ವೇಶರ ವಾಸ್ತುಶಿಲ್ಪಿ ಶೈಲಿಯಲ್ಲಿ ನಿರ್ವಿುಸಲಾಗಿದೆ ಎಂದು ಹೇಳಿದರು.
ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ವಿುಸಲಾಗುತ್ತಿದೆ. ಮೊದಲ ಹಂತದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ವಿುಸಲಾಗಿದೆ.
2ನೇ ಹಂತದಲ್ಲಿ ಯಾತ್ರಿ ನಿವಾಸ ಹಾಗೂ ಇನ್ನಿತರ ಸೌಲಭ್ಯಗಳ ನಿರ್ಮಾಣ ಕಾಮಗಾರಿ ಇನ್ನೂ 3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ದೇವಾಲಯ ಸಂಕೀರ್ಣವು ಸುಮಾರು 2 ಲಕ್ಷ ಚದರ ಅಡಿ ವಿಸ್ತೀರ್ಣಕ್ಕೆ ವಿಸ್ತರಿಸಲಿದೆ.
ವೈದಿಕ ಮತ್ತು ಆಧ್ಯಾತ್ಮಿಕ ಗ್ರಂಥಗಳನ್ನು ಒಳಗೊಂಡ ಸಮಗ್ರ ಗ್ರಂಥಾಲಯ, ಆಧ್ಯಾತ್ಮಿಕ ಪ್ರವಚನಗಳು ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಿಗೆ ವಿಶಾಲ ಉಪನ್ಯಾಸ ಸಭಾಂಗಣಗಳು, ವಿಗ್ರಹಗಳ ಅಲಂಕಾರ, ಆಭರಣ ಸಂಗ್ರಹ ಮತ್ತು ಉತ್ಸವ ಸಿದ್ಧತೆಗಾಗಿ ವಿಶೇಷ ಕೊಠಡಿಗಳು ನಿರ್ವಣಗೊಂಡಿವೆ.
ಮಂಡಲ ಪೂಜೆ ಪೂರ್ಣಗೊಂಡ ನಂತರ, ಶ್ರೀ ಕೃಷ್ಣಬಲರಾಮರ ವಿಗ್ರಹಗಳನ್ನು ವಿಧಿವತ್ತಾಗಿ ಹೊಸ ದೇವಾಲಯದ ಗರ್ಭಗುಡಿಗೆ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದರು.
ಹು-ಧಾ ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ, ಕಾರ್ಯದರ್ಶಿ ರಾಮಗೋಪಾಲ ದಾಸ ಸುದ್ದಿಗೋಷ್ಠಿಯಲ್ಲಿ ಇದ್ದರು.