ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಗಾಳಿಪಟ (Kite) ಉತ್ಸವದ ಫೋಟೊ ಬಿಡುಗಡೆಗೊಳಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ. ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಬಿಜೆಪಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ ನಿಂಗಪ್ಪ ಸುತಗಟ್ಟಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಭಾಗವಹಿಸುವರು.
ಬಾಲಿವುಡ್ ಗಾಯಕ ಸೋನು ನಿಗಮ್ ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
2 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸತತ 7ನೇ ಬಾರಿಗೆ ಆಯೋಜಿಸುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಭಾಗವಹಿಸುವರು ಎಂದು ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಪ್ರದೀಪ ಶೆಟ್ಟರ್, ಎಂ.ಆರ್. ಸಂಕನೂರ, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ ಹಾಗೂ ಇತರರು ಫೆ. 7ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಚಿತ್ರಕಲಾ ಸ್ಪರ್ಧೆ ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದೆ. ಆಹಾರ ಉತ್ಸವದ ಉದ್ಘಾಟನೆ ನಡೆಯಲಿದೆ. 11.30ಕ್ಕೆ ಧಾರವಾಡಸ ಸಂಸದ ಕ್ರೀಡಾ ಮಹೋತ್ಸವ ಲೋಕಸಭಾ ಮಟ್ಟದ ದೇಸಿ ಕ್ರೀಡೆಗಳ ಉದ್ಘಾಟನೆ ನಡೆಯಲಿದ್ದು, ಮಲ್ಲಕಂಬ, ಲಗೋರಿ, ಹಗ್ಗಜಗ್ಗಾಟ, ಗಿಲ್ಲದಾಂಡು, ಯೋಗಾಸನ, ಗೋಲಿ ಆಟಗಳು ನಡೆಯಲಿವೆ.
ಸಂಜೆ 6.30ಕ್ಕೆ ಏರ್ಪಡಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತಗಾರರಾದ ದಿವ್ಯಾ ರಾಮಚಂದ್ರ ಮತ್ತು ಜಸ್ಕರನ್ ಸಿಂಗ್ ಹಾಗೂ ಸುಪ್ರಸಿದ್ಧ ಗಾಯಕ ನಕುಲ್ ಅಭ್ಯಂಕರ ಹಾಗೂ ತಂಡ ಭಾಗವಹಿಸಲಿದೆ ಎಂದು ವಿವರಿಸಿದರು.
8 ರಂದು ಬೆಳಗ್ಗೆ 9.30ಕ್ಕೆ ವಿಶಿಷ್ಟ ಗಾಳಿಪಟ ಹಾರಾಟದ ಪ್ರದರ್ಶನ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಮಕ್ಕಳು ಮತ್ತು ಸಾರ್ವಜನಿಕರಿಗಾಗಿ ದೇಶಿ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಸಂಜೆ 6 ಗಂಟೆಗೆ ಏರ್ಪಡಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ಮಹನ್ಯ ಪಾಟೀಲ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ನಂತರ ಬಾಲಿವುಡ್ನ ಸುಪ್ರಸಿದ್ಧ ಗಾಯಕ ಸೋನು ನಿಗಮ್ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡೂ ದಿನಗಳ ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದರು. ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಸಂಸದರ ಕ್ರೀಡಾ ಮಹೋತ್ಸವಕ್ಕೆ ಉತ್ತಮ ಸ್ಪಂಧನೆ ದೊರೆತಿದೆ. ಎಲ್ಲ ಕ್ರೀಡಾಪಟುಗಳಿಗೆ ಅವಕಾಶ ಸಿಗಬೇಕೆಂಬ ಪ್ರಧಾನಿ ಅವರ ಸೂಚನೆ ಮೇರೆಗೆ ಈ ಬಾರಿ ಆಟಗಳ ಸಂಖ್ಯೆ ಹೆಚ್ಚಿಸಲಾಗಿತ್ತು.
ಕಬಡ್ಡಿಯಲ್ಲಿ 590 ತಂಡ, ಖೋಖೋದಲ್ಲಿ 510 ತಂಡ, ವಾಲಿಬಾಲ್ನಲ್ಲಿ 480 ತಂಡ, ವೈಯಕ್ತಿಕ ಆಟಗಳಲ್ಲಿ 7,010 ಜನ ಭಾಗವಹಿಸಿದ್ದರು ಎಂದು ಹೇಳಿದರು.
ಕ್ರೀಡಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ 7,500 ರೂ. ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನವಾಗಿ 5 ಸಾವಿರ ರೂ. ನೀಡಲಾಗುವುದು ಎಮದು ತಿಳಿಸಿದರು. ಇದೇ ಸಂದರ್ಭದಲ್ಲಿ ಜರ್ಸಿ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಬಿಜೆಪಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.