(Innovation) ನಾವಿನ್ಯತೆ ಸೂಚ್ಯಂಕದಲ್ಲಿ ಗಮನಾರ್ಹ ಪ್ರಗತಿ
Innovation ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಇನ್ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ (ಐಐಸಿ) ಪ್ರಾದೇಶಿಕ ಸಮಾವೇಶನವನ್ನು ಕುಲಪತಿ ಡಾ. ಪ್ರಕಾಶ ತೆವರಿ ಉದ್ಘಾಟಿಸಿದರು. ಡಾ. ರವಿ ಗುತ್ತಲ, ಅಖಿಲ್ ಶರ್ಮಾ, ರಂಜನ್ ಕುಮಾರ, ಸ್ಯಾಮ್ ಜೈಕುಮಾರ್, ಜೇಮ್ಸ್ ದೀಪಕ್, ಹರೀಶ್ ಅಗಡಿ ಇತರರು ಇದ್ದರು.
ಹುಬ್ಬಳ್ಳಿ: (innovation) ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಿನಿಸ್ಟ್ರೀ ಆಫ್ ಎಜುಕೇಶನ್ ಇನ್ನೋವೇಶನ್ ಸೆಲ್ ಹಾಗೂ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ವತಿಯಿಂದ ಇನ್ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ (ಐಐಸಿ) ದ್ವಿತೀಯ ಪ್ರಾದೇಶಿಕ ಸಮಾವೇಶ ಆಯೋಜಿಸಲಾಗಿತ್ತು.
ಆತಿಥೇಯವಾಗಿ ಎರಡನೇ ಬಾರಿ ಈ ಸಮಾವೇಶ ಏರ್ಪಡಿಸುವ ಮೂಲಕ ಕೆಎಲ್ಇ ಟೆಕ್ ದೇಶದಲ್ಲಿ ಪ್ರಮುಖ ನಾವೀನ್ಯತೆಯ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ.
ವರ್ಚುವಲ್ ಮೂಲಕ ಐಐಸಿ ಪ್ರಾದೇಶಿಕ ಸಭೆಯನ್ನು ಉದ್ಘಾಟಿಸಿದ ಪ್ರೊ. ಟಿ.ಜಿ. ಸೀತಾರಾಮ್ ಅವರು, ದೇಶಾದ್ಯಂತ ಎಂಟು ಕೇಂದ್ರಗಳನ್ನು ಏಕಕಾಲದಲ್ಲಿ ಸಂಪರ್ಕಿಸಿದರು. ಭಾರತವನ್ನು 2047ರ ವಿಕಸಿತ ಭಾರತ ದೃಷ್ಟಿಕೋನದತ್ತ ಕೊಂಡೊಯ್ಯುವಲ್ಲಿ ಐಐಸಿಗಳು ವಹಿಸಿದ ಪಾತ್ರ ಪ್ರಮುಖವಾಗಿದೆ. ಒಂದು ದಶಕದಲ್ಲಿ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತ ಗಮನಾರ್ಹ ಪ್ರಗತಿ ಕಂಡಿದೆ.
ದಶಕದಲ್ಲಿ 86ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಏರಿದೆ. 2015ರಲ್ಲಿ 400ರಷ್ಟಿದ್ದ ಸ್ಟಾರ್ಟ್ ಅಪ್ಗಳು 2025ರ ವೇಳೆಗೆ 19 ಸಾವಿರಕ್ಕೆ ತಲುಪಿವೆ. ಈ ವೃದ್ಧಿಯು ಭಾರತದ ಇನ್ನೋವೇಶನ್ ಸಂಸ್ಕೃತಿ ಬೆಳವಣಿಗೆಯ ಚಿಹ್ನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸ್ಥಳಿಯವಾಗಿ ಸಮಾವೇಶದ ಸಾಂಕೇತಿಕ ಉದ್ಘಾಟನೆ ನೆರವೇರಿಸಿದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ಪ್ರಕಾಶ ತೆವರಿ, ಎಐಸಿಟಿಇ ಮತ್ತು ಐಐಸಿಯ ಪ್ರಯತ್ನಗಳಿಂದಾಗಿ ಹಾಗೂ ನಿರಂತರ ಬೆಂಬಲ, ಮಾರ್ಗದರ್ಶನದಿಂದ ದೇಶಾದ್ಯಂತ ಅನೇಕ ಸಂಸ್ಥೆಗಳು ಸೃಜನಶೀಲತೆ, ಉದ್ಯಮಶೀಲತಾ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.
ಅತಿಥಿಯಾಗಿದ್ದ ಏಕಸ್ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ರವಿ ಗುತ್ತಲ ಅವರು, ವಿದ್ಯಾರ್ಥಿಗಳು ಕೆಎಲ್ಇ ಟೆಕ್ ಒದಗಿಸಿದ ಅದ್ಭುತ ನಾವೀನ್ಯತೆಯ ಪರಿಸರವನ್ನು ಸಮಗ್ರವಾಗಿ ಬಳಸಿಕೊಂಡು ಏನಾದರೂ ಸಾಧನೆ ಮಾಡಬೇಕು. ತಮ್ಮ ಅಧ್ಯಯನ ಕಾಲವನ್ನು "ಸುವರ್ಣ ಅವಧಿ' ಎಂದು ಪರಿಗಣಿಸಿ ನಿರ್ಭಯವಾಗಿ ವಿಚಾರಗಳನ್ನು ಮಂಡಿಸಬೇಕು. ತಮ್ಮ ವೈಫಲ್ಯಗಳಿಂದಲೇ ಸಾಕಷ್ಟು ಕಲಿಯಬಹುದು. ಹಾಗಾಗಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಹೊಸ ಉದ್ಯಮಗಳನ್ನು ಆರಂಭಿಸುವಾಗ ಉತ್ಸಾಹದಿಂದ ಮುನ್ನುಗ್ಗಬೇಕು. ಪರಿಶ್ರಮದಿಂದ ಕೆಲಸ ಮಾಡಬೇಕು. ಒಂದು ಕಲ್ಪನೆಯ ನಿರೀಕ್ಷಿತ ಫಲಿತಾಂಶ ಬರದೇ ಇದ್ದಾಗಲೂ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಒಂದಿಷ್ಟು ವಿಭಿನ್ನವಾಗಿ ಯೋಚಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಎಐಸಿಟಿಇ ಸಹಾಯಕ ನಿರ್ದೇಶಕ ಅಖಿಲ್ ಶರ್ಮಾ ಮಾತನಾಡಿ, ಭಾರತದ ಅತ್ಯಂತ ಭರವಸೆಯ ಮತ್ತು ಪ್ರಭಾವಶಾಲಿ ನಾವೀನ್ಯತೆಗಳು ಮಹಾನಗರಗಳಿಗಿಂತ ಹೆಚ್ಚಾಗಿ ಹುಬ್ಬಳ್ಳಿಯಂತಹ 2 ಮತ್ತು 3ನೇ ಸ್ತರದ ನಗರಗಳಿಂದ ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ. ಇದು ನಾವೀನ್ಯತೆಯ ಅವಕಾಶಗಳನ್ನು ವಿಕೇಂದ್ರಿಕರಿಸುವ ಮಹತ್ವವನ್ನು ತೋರಿಸುತ್ತದೆ ಎಂದರು.
ನಾವೀನ್ಯತೆ ಅಧಿಕಾರಿ ಅಭಿಷೇಕ್ ರಂಜನ್ ಕುಮಾರ, ಇಂಡೊವೇಷನ್ ಮ್ಯಾನೇಜರ್ ಎಸ್. ಸ್ಯಾಮ್ ಜೈಕುಮಾರ್, ಡಿಸೈನ್ ಥಿಂಕಿಂಗ್ ಶಾಲೆಯ ಪ್ರಾಧ್ಯಾಪಕ ಜೇಮ್ಸ್ ದೀಪಕ್, ಕೆಎಲ್ಇ ಟೆಕ್ ಐಐಸಿ ಅಧ್ಯಕ್ಷ ಹರೀಶ್ ಅಗಡಿ ಇತರರು ಭಾಗವಹಿಸಿದ್ದರು.
150ಕ್ಕೂ ಹೆಚ್ಚು ಐಐಸಿ ಸಂಸ್ಥೆಗಳು ಮತ್ತು 55 ಐಐಸಿಯೇತರ ಸಂಸ್ಥೆಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದವು. ಸುಮಾರು 50 ಯುಕ್ತಿ ತಂಡಗಳು ವೈವಿಧ್ಯಮಯ ನವೀನ ಮಾದರಿಗಳನ್ನು ಪ್ರಸ್ತುತಪಡಿಸಿದವು.
ಒಟ್ಟಾರೆ, ಪ್ರಾದೇಶಿಕ ಸಭೆಯು ವಿದ್ಯಾರ್ಥಿಗಳು, ಅಧ್ಯಾಪಕರು, ನಾವೀನ್ಯಕಾರರು, ಸ್ಟಾರ್ಟ್ಅಪ್ ಸಂಸ್ಥಾಪಕರನ್ನು ಒಳಗೊಂಡ 600ಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು..
ಐಐಸಿಯ ಮಾಜಿ ಸಂಚಾಲಕ ಮತ್ತು ಆಟೊಮೇಷನ್ ಮತ್ತು ರೊಬೊಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.