ಭಾರತೀಯ ಸಾಹಿತ್ಯವು ವಿಶ್ವಶಾಂತಿ ಸಂದೇಶ ಸಾರಬಲ್ಲ ಶಕ್ತಿ

ಬಿ.ಟಿ.‌ಲಲಿತಾ ನಾಯಕ
ಬಿ.ಟಿ.‌ಲಲಿತಾ ನಾಯಕ
Published on
ಧಾರವಾಡ: ವಿಶ್ವದಾದ್ಯಂತ ಯುದ್ಧಭೀತಿ ಮತ್ತು ಅಶಾಂತಿಯ ವಾತಾವರಣ ನಿರ್ಮಾಣದ ಇಂದಿನ ಸಂದರ್ಭದಲ್ಲಿ ಭಾರತೀಯ ಸಾಹಿತ್ಯವು ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿ ವಿಶ್ವಶಾಂತಿಯ ಸಂದೇಶ ಸಾರಬಲ್ಲ ಶಕ್ತಿಯಾಗಿದೆ ಎಂದು ಖ್ಯಾತ ಲೇಖಕಿ ಬಿ.ಟಿ. ಲಲಿತಾ ನಾಯಕ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಸಭಾಭವನದಲ್ಲಿ ಹಿಂದಿ ಅಧ್ಯಯನ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ `ವಿಶ್ವಶಾಂತಿಗಾಗಿ ಸಮಕಾಲೀನ ಭಾರತೀಯ ಸಾಹಿತ್ಯ ಹಾಗೂ ಪ್ರವಾಸ ಸಾಹಿತ್ಯದ ಕೊಡುಗೆ' ಎಂಬ ವಿಷಯದ ಎರಡು ದಿನಗಳಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯಕಾರರು ಶಾಂತಿಯ ಪರಿಕಲ್ಪನೆಯನ್ನು ವಿಭಿನ್ನ ರೂಪಗಳಲ್ಲಿ ನಿರೂಪಿಸುತ್ತಾರೆ. ರಾಮಾಯಣ, ಮಹಾಭಾರತದಂತಹ ಪುರಾತನ ಕಾವ್ಯಗಳಿಂದ ಹಿಡಿದು ನವೀನ ಸಾಹಿತ್ಯದವರೆಗೂ ಯುದ್ಧ ಮತ್ತು ಶಾಂತಿಯ ವಿವಿಧ ಆಯಾಮಗಳನ್ನು ಸಾಹಿತ್ಯ ಅನಾವರಣಗೊಳಿಸಿದೆ ಎಂದು ಹೇಳಿದರು.
ಯುದ್ಧವು ಕೇವಲ ಎರಡು ರಾಷ್ಟçಗಳ ನಡುವಿನ ಸಂಘರ್ಷವಲ್ಲ; ಅದು ಜಗತ್ತಿನಾದ್ಯಂತ ಮಾನವ ಸಮಾಜದ ಮೇಲೆ ಪರಿಣಾಮ ಬೀರುವ ದುರಂತ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿನಾಶಕ್ಕಿಂತ ಶಾಂತಿಯ ನಿರ್ಮಾಣಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.
ಉತ್ತರ ಪ್ರದೇಶದ ಅಂತಾರಾಷ್ಟ್ರೀಯ ಸಾಹಿತ್ಯ ಕಲಾ ಮಂಚದ ಸಂಸ್ಥಾಪಕ ಅಧ್ಯಕ್ಷ ಪ್ರೊ. ಮಹೇಶ್ ದಿವಾಕರ್ ದಿಕ್ಸೂಚಿ ಭಾಷಣ ಮಾಡಿ, ಪಾಕಿಸ್ತಾನ, ಬಾಂಗ್ಲಾದೇಶ, ಯುಕ್ರೇನ್, ರಷ್ಯಾ ಹಾಗೂ ಇರಾನ್, ಅಮೆರಿಕಾ ನಡುವಿನ ಸಂಘರ್ಷಗಳು ಜಾಗತಿಕ ಯುದ್ಧಭೀತಿ ಹೆಚ್ಚಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಭಾರತೀಯ ಸಾಹಿತ್ಯ ಮತ್ತು ಪ್ರವಾಸ ಸಾಹಿತ್ಯವು ಮಾನವೀಯ ಸಂಬಂಧಗಳನ್ನು ಬಲಪಡಿಸುವ ಶಕ್ತಿ ಹೊಂದಿದೆ ಎಂದು ತಿಳಿಸಿದರು.
ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಅರ್ಜುನ್ ಚೌವ್ಹಾಣ ಮಾತನಾಡಿದರು. ಪ್ರೊ. ಎಸ್.ಕೆ. ಪವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲೇಖಕರಾದ ಡಾ. ರಾಜೇಶ್ ಶ್ರೀವಾಸ್ತವ, ಸೆಂಟ್ರಲ್ ಸ್ಕೂಲ್‌ನ ಪ್ರಾಚಾರ್ಯ ರಾಕೇಶ್ ಗೋಯಲ್, ಸಿಂಡಿಕೇಟ್ ಸದಸ್ಯ ಡಾ. ಬಿ.ಎಲ್. ಗುಂಡೂರ, ರಾಬರ್ಟ್ ದದ್ದಾಪುರಿ, ಶ್ಯಾಮ ಮಲ್ಲನಗೌಡರ, ಬಸವರಾಜ ಗೊರವರ, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಂಶೋಧಕರು, ಅಧ್ಯಾಪಕರು, ಸಾಹಿತ್ಯಾಸಕ್ತರು ಹಾಗೂ 100ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net