ನವಲಗುಂದ: ಮೆಕ್ಕೆಜೋಳ (Maize) ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಯುಥ್ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಸೀಲ್ದಾರ್ ಸುಧೀರ ಸಾಹುಕಾರ ಮೂಲಕ ಮನವಿ ಸಲ್ಲಿಸಲಾಯಿತು.
ಯುಥ್ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೆವಾಡಿ ಮಾತನಾಡಿ, ಮೆಕ್ಕೆಜೋಳ ಖರೀದಿಸಿ ಪಡಿತರ ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ. ಆದರೆ, ಗೋವಿನಜೋಳ ಕೇವಲ ಕೋಳಿ, ಕುರಿ, ಜಾನುವಾರುಗಳ ಆಹಾರ ಪದಾರ್ಥಕ್ಕೆ ಉಪಯೋಗಿಸುತ್ತಾರೆ ಹೊರತು ಜನ ತಿನ್ನಲಿಕ್ಕೆ ಅಲ್ಲ ಎಂಬುದನ್ನು ಕೇಂದ್ರ ಮನವರಿಕೆ ಮಾಡಿಕೊಳ್ಳಬೇಕು ಎಂದರು.
ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಗೋವಿನಜೋಳ (ಮೆಕ್ಕೆಜೋಳ) ಬೆಳೆದಿದ್ದು, ರೈತರಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆಯುತ್ತಿಲ್ಲ. ಹೀಗಾಗಿ, ಖರೀದಿ ಕೇಂದ್ರ ಪ್ರಾರಂಭಿಸಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿ ಮಾಡಿ ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಮಲಪ್ರಭಾ ಮಹಾಮಂಡಳ ಅಧ್ಯಕ್ಷ ಸದುಗೌಡ ಪಾಟೀಲ ಮಾತನಾಡಿ, ಈಗಾಗಲೇ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಲು ಅನುಮತಿ ನೀಡಿದ್ದು, ಖರೀದಿ ಕೇಂದ್ರ ಆರಂಭಿಸಲಾಗಿದೆ. ಆದರೆ, ಗುಣಮಟ್ಟದ ಹೆಸರು ಕಾಳು ಇದ್ದರೆ ಮಾತ್ರ ಖರೀದಿಸುತ್ತಿದ್ದಾರೆ. ಇದನ್ನು ವರ್ಗೀಕರಣ ಮಾಡಿ ಖರೀದಿ ಮಾಡಲು ರೈತರಿಗೆ ಅನಕೂಲ ಮಾಡಿಕೊಡಬೇಕು. ಅಲ್ಲದೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಧಾರವಾಡ ಜಿಲ್ಲೆಗೆ ಕೇವಲ 12 ಕೋಟಿ ರೂ. ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದ್ದು, ಇದನ್ನು ಯಾವ ಮಾನದಂಡದ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಮರು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.