ಧಾರವಾಡ: ಮಹಿಳೆಯರ ಅಭಿವೃದ್ಧಿಗೆ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಕೆಲವು ಯೋಜನೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಇಲಾಖೆಗಳು ಮಹಿಳಾ ಪರ ಕಾರ್ಯಕ್ರಮಗಳನ್ನು ಪರಸ್ಪರ ಸಮನ್ವಯದಿಂದ ಕಾರ್ಯಗತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ಮಹಿಳಾ ಸ್ಪಂದನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಮಹಿಳೆಯರ ಮೇಲಿನ ಕಿರುಕುಳ ಅಥವಾ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಇಲಾಖೆ ಕಾರ್ಯಕ್ರಮಗಳನ್ನು ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಜಿಲ್ಲೆಯ ಎಲ್ಲ ಶಾಲೆ, ಕಾಲೇಜು, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ `ಶೀ ಬಾಕ್ಸ್' ಅಳವಡಿಕೆ ಕಡ್ಡಾಯಗೊಳಿಸಬೇಕು ಎಂದು ಸೂಚಿಸಿದರು.
ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಮ್ ಬಗ್ಗೆ ಅರಿವು ಮೂಡಿಬೇಕು. ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಸಂಖ್ಯೆ, ಪೋಲಿಸ್ ಠಾಣೆ, ಮಹಿಳಾ ಸಹಾಯವಾಣಿ, ಹೆಲ್ಪ್ಲೈನ್ ನಂಬರ್‌ಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾಽಕಾರಿ ಸ್ನೇಹಲ್ ಆರ್. ಮಾತನಾಡಿ, ಮಹಿಳೆಯರ ಸುರಕ್ಷತೆ, ಮಕ್ಕಳ ಕಲ್ಯಾಣ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಸ್ಪಂದನೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆ ಕುರಿತ ಜಾಗೃತಿ ಹಮ್ಮಿಕೊಳ್ಳಲಾಗುತ್ತಿದ್ದು, ಶೀ ಬಾಕ್ಸ್ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಅವಳಿನಗರ ವ್ಯಾಪ್ತಿಯ ವಿವಿಧ ಅಪರಾಧ ಪ್ರಕರಣಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಕಾಣೆಯಾದ ವ್ಯಕ್ತಿಗಳ ಪತ್ತೆ ಕಾರ್ಯವನ್ನು ಪೊಲೀಸ್ ಇಲಾಖೆಯು ಅತ್ಯಂತ ಪರಿಣಾಮಕಾರಿಯಾಗಿ ಪತ್ತೆ ಹಚ್ಚಲಾಗುತ್ತಿದೆ. ಡ್ರಗ್ಸ್ ಜಾಲದ ವಿರುದ್ಧ ನಿರಂತರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತೆ ಶೃತಿ ಎನ್.ಎಸ್. ವೇದಿಕೆಯಲ್ಲಿದ್ದರು.
ಅಹವಾಲು ಸ್ವೀಕಾರ:
ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರಿಂದ 200ಕ್ಕೂ ಹೆಚ್ಚು ವಯಕ್ತಿಕ ಅಹವಾಲುಗಳನ್ನು ಡಾ. ನಾಗಲಕ್ಷ್ಮೀ ಚೌಧರಿ ಸ್ವೀರಿಸಿದರು. ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಪರಿಹರಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ:
ಸರ್ಕಾರಿ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಸಂದರ್ಭದಲ್ಲೇ ವಿದ್ಯುತ್ ಕಡಿತವಾಗಿದೆ. ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮೀ ಚೌಧರಿ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆ ಇಲ್ಲ. ಕ್ರಿಮಿ ಕೀಟಗಳ ತಾಣವಾಗಿದೆ. ತಾಲೂಕು ಆಸ್ಪತ್ರೆಗಳೂ ಕಸದ ತೊಟ್ಟಿಗಳಾಗಿವೆ. ಸರಿಯಾಗಿ ಔಷಧಗಳಿಲ್ಲ, ಇಸಿಜಿ, ಬಿಪಿ ಪರಿಶೀಲಿಸುವ ಮಷಿನ್‌ಗಳಿಲ್ಲ ಎಂದು ಸಾರ್ವಜನಿರು ದೂರು ನೀಡಿದ್ದಾರೆ ಎಂದು ಗರಂ ಆದರು.
ಕೆಎಂಸಿಆರ್‌ಐ ನಲ್ಲಿ ಎರಡುವರೆ ಸಾವಿರದಷ್ಟು ಹೆರಿಗೆ ಆಗುತ್ತವೆ. ಸಮರ್ಪಕವಾದ ಹಾಸಿಗೆ ವ್ಯವಸ್ಥೆ ಇಲ್ಲ. ಒಬ್ಬರು ಮಲಗಿದ ಹಾಸಿಗೆಯನ್ನೇ ಮತ್ತೋಬ್ಬರಿಗೆ ಹಾಸುತ್ತಾರೆ. ಸರಿಯಾದ ವ್ಯವಸ್ಥೆ ಇಲ್ಲ. ಸರಿಪಡಿಸುವಂತೆ ಡಿಎಚ್‌ಒ ಡಾ. ಸತೀಶ್ ಹೊನಕೇರಿ ಸೂಚಿಸಿದರು.
ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಮಕ್ಕಳು ಕುಡಿಯುತ್ತಿದ್ದಾರೆ. ಹೀಗಾಗಿ ಕುಟುಂಬಗಳ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲವಾಗಿದೆ. ಜನರು ಬೀದಿಗಿಳಿಯುವ ಮುನ್ನ ಅಽಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.