ಧಾರವಾಡ ಪ್ರತ್ಯೇಕ ಮಹಾನಗರ' ಪಾಲಿಕೆ ಮಾಡಬೇಕು ಎಂದು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿ ಧಾರವಾಡ ಸ್ವಾಭಿಮಾನಿ ಹೋರಾಟಗಾರರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರನ್ನು ಭೇಟಿಯಾಗಿ ಮನವಿ ಮಾಡಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿದ್ದ ಸಚಿವರೊಂದಿಗೆ ಸಭೆ ನಡೆಸಿದ ಹೋರಾಟಗಾರು, ಧಾರವಾಡಕ್ಕೆ ಸರ್ಕಾರ ಈಗಾಗಲೇ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಿಸಿದೆ. ರಾಜ್ಯಪಾಲರು ಈವರೆಗೂ ಪ್ರತ್ಯೇಕ ಪಾಲಿಕೆಗೆ ಅಂಕಿತ ಹಾಕಿಲ್ಲ. ಇದರಲ್ಲಿ ರಾಜಕೀಯ ಒತ್ತಡ ಇದೆ. ಈ ಒತ್ತಡವನ್ನು ಬಗೆಹರಿಸಿ ಪ್ರತ್ಯೇಕ ಪಾಲಿಕೆ ಮಾಡುವಲ್ಲಿ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮನೋಜಕುಮಾರ ಪಾಟೀಲ ಮಾತನಾಡಿ, ಪ್ರತ್ಯೇಕ ಪಾಲಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಏನಾದರೂ ತಪ್ಪುಗಳಾಗಿದ್ದರೆ ಸರಿಪಡಿಸಲು ತಿಳಿಸಬೇಕು. ಇಲ್ಲವಾದರೆ ರಾಜ್ಯಪಾಲರ ಬಳಿ ಅಂಕಿತಕ್ಕೆ ಹೋಗಿರುವ ಕಡತಕ್ಕೆ ತಡೆ ಬಿದ್ದಿರುವುದಕ್ಕೆ ತಾಂತ್ರಿಕ ಕಾರಣ ನೀಡಬೇಕು ಎಂದು ಆಗ್ರಹಿಸಿದರು.
ಬಿ.ಡಿ. ಹಿರೇಗೌಡರ ಮಾತನಾಡಿ, ರಾಜ್ಯಪಾಲರ ಭೇಟಿಗೆ ನಾವು ಅನುಮತಿ ಕೇಳಿದರೂ ಅವರು ಸಮಯ ಕೊಟ್ಟಿಲ್ಲ. ರಾಜ್ಯಪಾಲರು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಾರಣದಿಂದಲೇ ರಾಜ್ಯಪಾಲರು ಪ್ರತ್ಯೇಕ ಪಾಲಿಕೆಯಾಗುವುದನ್ನು ತಡೆ ಹಿಡಿದಿದ್ದಾರೆ ಎನ್ನುವ ಆರೋಪಗಳು ಗೊತ್ತಾದ ಮೇಲೆಯೂ ಜೋಶಿ ಅವರು ಸುಮ್ಮನೆ ಕುಳಿತುಕೊಳ್ಳುವುದು ತಪ್ಪು ಎಂದು ಅಭಿಪ್ರಾಯಪಟ್ಟರು.
ಈ ವಿಷಯದಲ್ಲಿ ಎಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡುವ ಅಗತ್ಯವಿದೆ. ಪಾಲಿಕೆ ಸಭೆಯಲ್ಲಿ ಪಾಸ್ ಮಾಡಿದ ೨ನೇ ಠರಾವ್ ಅನ್ನು ರದ್ದುಪಡಿಸುವ ಅಽಕಾರ ಸರ್ಕಾರಕ್ಕಿದೆ. ಪಾಲಿಕೆ ಆಡಳಿತ ವಿಕೇಂದ್ರಿಕರಣವಾಗಬೇಕು ಎಂದರು.
ಶಿವಶಂಕರ ಹಂಪಣ್ಣವರ ಮಾತನಾಡಿ, ಪ್ರತ್ಯೇಕ ಪಾಲಿಕೆಗಾಗಿ ಈಗಾಗಲೇ ಹೋರಾಟಗಳು ನಡೆದಿವೆ. ನಮ್ಮ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಈಗಾಗಲೇ ಸ್ಪಷ್ಟ ರೂಪುರೇಷೆ ಹಾಕಿಕೊಂಡಿದ್ದೇವೆ. ನಮ್ಮ ಹೋರಾಟಕ್ಕೆ ಸಚಿವರು ಬೆಂಬಲ ನೀಡಬೇಕು ಮತ್ತು ಪ್ರತ್ಯೇಕ ಪಾಲಿಕೆ ಮಾಡುವುದಕ್ಕೆ ಮುತುವರ್ಜಿ ವಹಿಸಬೇಕು. ಈ ಬೇಡಿಕೆ ನಿಮ್ಮ ಅವಽಯಲ್ಲಿ ಈಡೇರಿದರೆ ನಿಮ್ಮ ಮತ್ತು ಸರ್ಕಾರದ ಹೆಸರು ಉಳಿಯುತ್ತದೆ ಎಂದು ಮನವಿ ಮಾಡಿದರು.
ದೀಪಕ ಚಿಂಚೋರೆ ಮಾತನಾಡಿ, ಪಾಲಿಕೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಠರಾವ್ ಇರಲೇ ಇಲ್ಲ. ಹೆಚ್ಚುವರಿಯಾಗಿ ಅದನ್ನು ಸೇರಿಸಿ ತರಾತುರಿಯಲ್ಲಿ ಪಾಸ್ ಮಾಡಲಾಗಿದೆ. ಪ್ರತ್ಯೇಕ ಪಾಲಿಕೆಗೆ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಳಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿ, ಪ್ರತ್ಯೇಕ ಪಾಲಿಕೆಗಾಗಿ ಸರ್ಕಾರಕ್ಕೆ ನಾನೂ ಮನವಿ ಮಾಡಿದ್ದೇನೆ. ಸಚಿವ ಸಂಪುಟದಲ್ಲಿ ಪಾಸ್ ಮಾಡಿ, ರಾಜ್ಯ ಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲರು ಕಡತ ಇಟ್ಟುಕೊಂಡು ಕುಳಿತಿದ್ದಾರೆ. ಇದೊಂದೇ ಅಲ್ಲ ಇಂತಹ ಹಲವು ಮಸೂಧೆಗಳು ರಾಜ್ಯಪಾಲರ ಬಳಿ ಹಾಗೆ ಇವೆ. ಸಚಿವ ಸಂಪುಟದಲ್ಲಿ ಈ ಬಗ್ಗೆ ನಾನು ಮಾತನಾಡುತ್ತೇನೆ. ಜತೆಗೆ ಸಚಿವರಾದ ಎಚ್.ಕೆ. ಪಾಟೀಲ, ಭೈರತಿ ಸುರೇಶ ಅವರೊಂದಿಗೆ ಚರ್ಚಿಸಿ ರಾಜ್ಯಪಾಲರ ಭೇಟಿಗೆ ಸಮಯ ಕೇಳುತ್ತೇವೆ. ಶಾಸಕ ಪ್ರಸಾದ ಅಬ್ಬಯ್ಯ, ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುತ್ತೇವೆ ಎಂದರು.
ಸರ್ಕಾರದ ಮಟ್ಟದಲ್ಲಿ ನನ್ನ ಹೋರಾಟವನ್ನು ನಾನು ಮಾಡುತ್ತೇನೆ. ನೀವು ನಿಮ್ಮ ಹೋರಾಟವನ್ನು ಮುಂದುವರಿಸಿ ಎಂದು ಹೋರಾಟಗಾರರಿಗೆ ಸಚಿವರು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ವೆಂಕಟೇಶ ಮಾಚಕನೂರ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ನೇಗಿನಹಾಳ, ಈಶ್ವರ ಶಿವಳ್ಳಿ, ಮಹಾದೇವ ಹೊರಟ್ಟಿ, ನಾಗರಾಜ ಗುರಿಕಾರ, ಅರವಿಂದ ಏಗನಗೌಡರ ಇತರರರಿದ್ದರು.