rain ಬಿರುಗಾಳಿ ಹಾಗೂ ಧಾರಾಕಾರ ಮಳೆಯಿಂದಾಗಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಕಾರುಗಳ ಮೇಲೆ ಬಿದ್ದಿರುವ ಮರ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮರ ಬಿದ್ದಿದ್ದರಿಂದ ಮುರಿದಿರುವ ವಿದ್ಯುತ್ ಕಂಬ.
ಕೆರೆಯಂತಾದ ರಸ್ತೆಗಳು
ವಾಹನಗಳು ಜಖಂ
ಹುಬ್ಬಳ್ಳಿ :
ಹುಬ್ಬಳ್ಳಿಯಲ್ಲಿ ಸಂಜೆ ಸುಮಾರು 4.30ರ ನಂತರ ಸುರಿದ ಮಳೆ ಹಾಗೂ ಬಿರುಗಾಳಿಯಿಂದಾಗಿ 150ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ.
ವಿದ್ಯಾನಗರ, ನಾಗಶೆಟ್ಟಿಕೊಪ್ಪ, ಬೆಂಗೇರಿ, ಉಣಕಲ್, ಅಮರಗೋಳದಲ್ಲಿ ಹೆಚ್ಚಿನ ಮರಗಳು ಬಿದ್ದಿರುವ ವರದಿಯಾಗಿದೆ.
ರಸ್ತೆ ಬದಿ ನಿಲ್ಲಿಸಿದ್ದ ಅನೇಕ ಕಾರು, ಬೈಕ್ಗಳ ಮೇಲೆ ಮರಗಳು ಬಿದ್ದಿವೆ. ಹಲವಾರು ಮನೆಗಳ ಕಂಪೌಂಡ್ ಗೋಡೆ ಮೇಲೆಯೂ ಮರಗಳು ಬಿದ್ದಿದ್ದರಿಂದ ಗೋಡೆ ನೆಲಕ್ಕೊರಗಿದ ಘಟನೆಗಳೂ ನಡೆದಿವೆ.
ಹಲವೆಡೆ ವಿದ್ಯುತ್ ಕಂಬವೂ ಮುರಿದಿರುವ ಘಟನೆ ನಡೆದಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.
ಗುಡುಗು, ಮಿಂಚು ಮಿಶ್ರಿತ ಧಾರಾಕಾರ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ಅಪಾರ್ಟ್ವೆುಂಟ್ ಹಾಗೂ ಆನಂದ ನಗರ, ಅಯೋಧ್ಯಾ ನಗರ ಸೇರಿದಂತೆ ಇನ್ನಿತರ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದೆ.
ಬಿರುಗಾಳಿಯ ರಭಸಕ್ಕೆ ಗೋಕುಲ ರಸ್ತೆಯ ವಾಣಿಜ್ಯ ಮಳಿಗೆಯೊಂದರ ಕಟ್ಟಡದ ಗಾಜುಗಳು ಒಡೆದಿವೆ. ವಿನಾಯಕ ನಗರದಲ್ಲಿ ಕಾರ್ಯಕ್ರಮವೊಂದಕ್ಕೆ ಹಾಕಿದ್ದ ಪೆಂಡಾಲ್ ಹಾರಿಹೋಗಿದೆ.
ಗಟಾರುಗಳೆಲ್ಲ ತುಂಬಿ, ಮಳೆ ನೀರು ರಸ್ತೆ ಮೇಲೆ ಹರಿದಿದೆ. ಶಿರೂರ ಪಾರ್ಕ್ನ ಟೆಂಡರ್ಶ್ಯೂರ್ ರಸ್ತೆಯಂತೂ ಸಂಪೂರ್ಣ ಕೆರೆಯಂತೆ ಭಾಸವಾಗುತ್ತಿತ್ತು.
ಉಣಕಲ್ನ ಸಾಯಿನಗರ ಸರ್ಕಲ್ ದನದ ಕೊಟ್ಟಿಗೆ ಮೇಲೆ ಮರ ಬಿದ್ದಿದ್ದರಿಂದ ಕೊಟ್ಟಿಗೆ ಗೋಡೆಗಳು ಬಿದ್ದಿವೆ. ಆದರೆ, ಜಾನುವಾರುಗಳಿಗೆ ಯಾವುದೇ ಹಾನಿ ಆಗಿಲ್ಲ ಎಂದು ತಾಲೂಕು ಆಡಳಿತದ ಮೂಲಗಳು ತಿಳಿಸಿವೆ.
ಮಳೆಯಿಂದಾಗಿ ಜನರು ತೊಂದರೆಗೀಡಾಗಿದ್ದು, ಅನೇಕರು ಮಹಾನಗರ ಪಾಲಿಕೆಯ ಕಂಪ್ಲೆಂಟ್ ನಂಬರ್ಗೆ ಕರೆ ಮಾಡಿ ದೂರು ಕೊಡುತ್ತಿದ್ದರು. ಹೀಗಾಗಿ, ಕಂಪ್ಲೆಂಟ್ ನಂಬರ್ ಬಹಳ ಹೊತ್ತಿನವರೆಗೂ ಬ್ಯೂಸಿ ಬರುತ್ತಿತ್ತು.
ಹುಬ್ಬಳ್ಳಿ ಶಹರ ತಹಸೀಲ್ದಾರ ಮಹೇಶ ಗಸ್ತಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ರಸ್ತೆ ಮೇಲೆ ಬಿದ್ದಿರುವ ಮರಗಳನ್ನು ತಕ್ಷಣ ಕಟಾವು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.