ಪಟ್ಟಣದ ಹೊರಕೇರಿ ಓಣಿ ಮತ್ತು ಹೊಸಪೇಟೆ ಓಣಿ ಗಳಲ್ಲಿ ವಿಶಿಷ್ಟವಾಗಿ ಚಕ್ಕಡಿ ಬಂಡಿ ತಯಾರಿಸಿ ಹುಲುಗಾಮನನ್ನು ನಿರ್ಮಿಸಲಾಗುತ್ತದೆ. ಹುಲುಗಾಮನಿಗೆ ವಿವಿಧ ವಸ್ತುಗಳಿಂದ ಸಿಂಗರಿಸಿ 40ಕ್ಕೂ ಹೆಚ್ಚು ಸಿಂಗಾರಗೊಂಡ ಜೋಡೆತ್ತುಗಳ ಮಧ್ಯೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಹುಲುಗಾಮನನ್ನು ಜೋಳದ ದಂಟು, ತೊಗರಿ ಕಟ್ಟಿಗೆ, ಭತ್ತದ ಹುಲ್ಲನ್ನು ಬಳಸಿಕೊಂಡು ಎದೆ, ಹೊಟ್ಟೆ, ಕೈ, ಕಾಲು ನಿರ್ಮಿಸಲಾಗುತ್ತದೆ, ನಂತರ ಕಾಮಣ್ಣ ( ಮನ್ಮಥನ) ಮುಖವಾಡ ಹಾಕಲಾಗುತ್ತದೆ. ನಂತರ ಕಾಮಣ್ಣನನ್ನು ಪೂಜಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮರಳಿ ಪ್ರತಿಷ್ಠಾಪಿಸಿದ ಸ್ಥಳಕ್ಕೆ ಕಾಮಣ್ಣನ ಬಂಡಿ ಬಂದ ನಂತರ ಪಟ್ಟಣದಲ್ಲಿ ಬಣ್ಣವಾಡಲು ಪ್ರಾರಂಭಿಸುತ್ತಾರೆ. ಕೊನೆಗೆ ಯುವಕರು ಕದ್ದು ತಂದ ಕುಳ್ಳು, ಕಟ್ಟಿಗೆಗೆಳನ್ನು ರಾಶಿ ಹಾಕಿ ಮನ್ಮಥರ ಭಾವಚಿತ್ರವಿಟ್ಟು ಅಗ್ನಿ ಸ್ಪರ್ಷ ಮಾಡಲಾಗುತ್ತದೆ.