ಸ್ವಾವಲಂಬಿ ಸಖಿ ಸಾವಿರಾರು ಕುಟುಂಬ ಸುಖಿ swavalambi

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿರುವ ಅವಸರ ಮಳಿಗೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿರುವ ಅವಸರ ಮಳಿಗೆ.
Published on

ಪ್ರಮುಖ ಮುಖ್ಯಾಂಶಗಳು

  • 50ಕ್ಕೂ ಅಧಿಕ ಸ್ವಸಹಾಯ ಸಂಘ ರಚನೆ
  • ಸಾವಿರಾರು ಮಹಿಳೆಯರು ಸದಸ್ಯತ್ವ
  • ಸಂಘಗಳಿಗೆ ಶಕ್ತಿ ತುಂಬಿದ ನಬಾರ್ಡ್
  • ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮೊದಲ ‘ಅವಸರ’ ಮಳಿಗೆ
ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
‘ಸ್ವಾವಲಂಬಿ ಸಖಿ’ ಪ್ರೊಡ್ಯುಸರ್ ಕಂಪನಿ ಅಡಿ ಉತ್ತರ ಕರ್ನಾಟಕದ 50ಕ್ಕೂ ಅಧಿಕ ಸ್ವಸಹಾಯ ಸಂಘಗಳ ಸಾವಿರಾರು ಸದಸ್ಯೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ನಬಾರ್ಡ್ ವತಿಯಿಂದ ತರಬೇತಿ ಪಡೆದು ತಮಗಿಷ್ಟವಾದ ಕಲೆ ಕಲಿತು ಸ್ವಾವಲಂಬಿಗಳಾಗಿ ಇತರರಿಗೆ ಮಾದರಿಯಾಗಿದ್ದಾರೆ. 
ಮಹಿಳೆಯರಿಗೆ ಸ್ವ ಉದ್ಯೋಗದ ತರಬೇತಿ, ಸಂಘ ರಚನೆ, ನೋಂದಣಿ, ಕಚ್ಚಾ ವಸ್ತು ಖರೀದಿ, ಉತ್ಪನ್ನ ತಯಾರಿ, ಪ್ಯಾಕಿಂಗ್, ಮಾರುಕಟ್ಟೆ ಹೀಗೆ ಪ್ರತಿಯೊಂದರಲ್ಲೂ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ‘ನಬಾರ್ಡ್’ (ಕೃಷಿ ಮತ್ತು ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ಸ್ವಸಹಾಯ ಸಂಘಗಳಿಗೆ ಬೆನ್ನೆಲುಬಾಗಿ ನಿಂತಿದೆ. 
ಧಾರವಾಡ, ಬಾಗಲಕೋಟೆ, ವಿಜಯಪುರ, ಮೈಸೂರು, ಮಂಡ್ಯ, ಚನ್ನಪಟ್ಟಣ ಹೀಗೆ ವಿವಿಧ ಜಿಲ್ಲೆಗಳ ಸ್ಥಳೀಯ ವಿಶೇಷ ವಸ್ತುಗಳನ್ನು ತಮ್ಮದೇಯಾದ ವಿಶೇಷ ಮಳಿಗೆಗಳಲ್ಲಿ ಮಾರಾಟ ಮಾಡಿದ್ದಾರೆ. 
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ‘ಅವಸರ’ ಮಳಿಗೆ, ಅರ್ಬನ್ ಓಯಾಸಿಸ್ ಮಾಲ್, ರೈಲು ನಿಲ್ದಾಣ ಮತ್ತು ವಿದ್ಯಾನಗರ ಶಿರೂರ ಪಾರ್ಕ್‌ನಲ್ಲಿರುವ ಅಥೆಂಟಿಕ್ ಕರ್ನಾಟಕದ ಮಳಿಗೆಗಳಲ್ಲಿ ಸಂಘದ ಸದಸ್ಯೆಯರು ತಯಾರಿಸಿದ್ದ ಉತ್ಪನ್ನಗಳನ್ನು 2021ರಿಂದ ಈವರೆಗೆ ಮಾರಾಟ ಮಾಡಿ ಒಟ್ಟು 2.50 ಕೋಟಿ ರೂ. ವಹಿವಾಟು ಮಾಡಿದ್ದಾರೆ. 
ಹುಬ್ಬಳ್ಳಿಯಲ್ಲೇ ಮೊದಲ ‘ಅವಸರ’ 
ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ದೇಶದ ವಿಮಾನ ನಿಲ್ದಾಣಗಳಲ್ಲಿ ‘ಅವಸರ’ ಹೆಸರಿನಲ್ಲಿ ಮಳಿಗೆ ನಿರ್ಮಿಸಲು 100 ರಿಂದ 200 ಚದರ ಅಡಿ ಜಾಗ ನೀಡುತ್ತದೆ. ಇಲ್ಲಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡುತ್ತದೆ. ಈ ‘ಅವಸರ’ ಯೋಜನೆಯನ್ನು 2022ರ ಏಪ್ರಿಲ್‌ನಲ್ಲಿ ಘೋಷಿಸಲಾಯಿತು.  ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು. ಪ್ರಯಾಣಿಕರನ್ನು ಪ್ರಾದೇಶಿಕ ಪರಂಪರೆ, ಕರಕುಶಲತೆಯೊಂದಿಗೆ ಸಂಪರ್ಕಿಸುವುದು ಇದರ ಉದ್ದೇಶ. ‘ಅವಸರ’ ಮಳಿಗೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 2022ರ ಜುಲೈನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಆರಂಭಿಸಲಾಯಿತು.
1.25 ಕೋ. ರೂ. ವ್ಯಾಪಾರ: 
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿರುವ ‘ಅವಸರ’ ಮಳಿಗೆಯಲ್ಲಿ ಮಹಿಳಾ ಸಂಘದ ಸದಸ್ಯೆಯರು 2022ರಿಂದ ಈವರೆಗೆ ಮಳಿಗೆಯಲ್ಲಿ 1.25 ಕೋಟಿ ರೂ. ವ್ಯವಹಾರ ಮಾಡಿದ್ದಾರೆ. ಸ್ವಸಹಾಯ ಸಂಘದ ಸದಸ್ಯೆಯರು ದೇಶ, ವಿದೇಶಗಳ ಪ್ರಯಾಣಿಕರಿಗೆ ಸ್ಥಳೀಯ ಕಸೂತಿ ಕಲೆ (ಆರಿ ವರ್ಕ್), ಟೆರ‌್ರಾಕೋಟ್ ಜೆವೆಲ್ಲರಿ (ಮಣ್ಣಿನಿಂದ ತಯಾರಿಸಿದ ಆಭರಣ), ಬಟ್ಟೆಗಳನ್ನು ಮಾರಾಟ ಮಾಡಿದ್ದಾರೆ. 
ನಿರ್ವಹಣೆ ವೆಚ್ಚ ನಬಾರ್ಡ್ ಪಾವತಿ:
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿರುವ ಅವಸರ, ಅರ್ಬನ್ ಓಯಾಸೀಸ್ ಮಾಲ್ ಮತ್ತು ಅಥೆಂಟಿಕ್ ಕರ್ನಾಟಕ ಮಳಿಗೆಗಳ ಬಾಡಿಗೆ, ನಿರ್ವಹಣೆ ವೆಚ್ಚವನ್ನು ಪ್ರತಿ ತಿಂಗಳು ನಬಾರ್ಡ್ ಸ್ವಾವಲಂಬಿ ಸಖಿ ಒಕ್ಕೂಟಕ್ಕೆ ಪಾವತಿಸುತ್ತದೆ. 
150ಕ್ಕೂ ಹೆಚ್ಚು ಉತ್ಪನ್ನ: ಸ್ವಾವಲಂಬಿ ಸಖಿ ಪ್ರೊಡ್ಯುಸರ್ ಕಂಪನಿಯಡಿ ಉತ್ತರ ಕರ್ನಾಟಕದಲ್ಲಿ ಅನೇಕ ಸ್ವಸಹಾಯ ಸಂಘಗಳಿವೆ. ಸಂಘದವರು ತಯಾರಿಸಿದ ಮಹಿಳೆಯರು ಮತ್ತು ಮಕ್ಕಳ ಕಾಟನ್ ಉಡುಪುಗಳು, ಬ್ಯಾಗ್, ಕಸೂತಿ ಕಲೆಯ ಬಟ್ಟೆ, ಲೆಹೆಂಗಾ, ಬ್ಲೌಸ್, ಮಾವಿನ ಎಲೆ ತೋರಣ, ಟೆರ‌್ರಾಕೋಟ್ ಜೆವೆಲ್ಲರಿ, ಕುರ್ತಿಸ್, ಚೂಡಿದಾರ, ಜಾಕೆಟ್, ಚನ್ನಪಟ್ಟಣ ಬೊಂಬೆ, ಹೀಗೆ ವಿವಿಧ ಬಗೆಯ 150ಕ್ಕೂ ಹೆಚ್ಚು ವಸ್ತುಗಳನ್ನು ತಯಾರಿಸುತ್ತೇವೆ. ಬಳಿಕ ಹುಬ್ಬಳ್ಳಿಯ ಅಥೆಂಟಿಕ್ ಕರ್ನಾಟಕ ಮಳಿಗೆಗೆ ನೀಡಲಾಗುತ್ತದೆ. ಅಲ್ಲಿ ಗುಣಮಟ್ಟ ಪರೀಕ್ಷಿಸಿ, ಪ್ಯಾಕಿಂಗ್ ಮಾಡಿ, ಅವುಗಳಿಗೆ ಲೇಬಲ್ ಅಂಟಿಸಿ, ಬಾರ್ ಕೋಡ್ ಅಳವಡಿಸಲಾಗುತ್ತದೆ. ಅಲ್ಲಿಂದ ಬೇರೆ ಕಡೆ ಮಾರಾಟಕ್ಕೆ ಕಳುಹಿಸಲಾಗುತ್ತದೆ ಎನ್ನುತ್ತಾರೆ ಸ್ವಾವಲಂಬಿ ಸಖಿ ಕಂಪನಿಯ ಸಂಸ್ಥಾಪಕ ನಿರ್ದೇಶಕಿ ವಿಜಯಾ ಮುದಿಗೌಡ್ರ.   
ಆನ್‌ಲೈನ್ ಮಾರಾಟ ಶೀಘ್ರ: 
ಸಂಘದ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಮಾರ್ಕೆಟ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪುಣೆ, ಗೋವಾ ವಿಮಾನ ನಿಲ್ದಾಣ, ಮುಂಬೈ, ದೆಹಲಿ, ಬೆಂಗಳೂರು ನಗರಗಳಲ್ಲಿ ಮಳಿಗೆ ತೆರೆಯುವ ಕುರಿತು ಮಾತುಕತೆ ನಡೆದಿದೆ. ಜತೆಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸದ್ಯ ವರ್ಷದಲ್ಲಿ 2 ತಿಂಗಳು ಮಾತ್ರ ಅಂಗಡಿ ನೀಡುತ್ತಾರೆ. ಅದರ ಬದಲು ಕಾಯಂ ಆಗಿ ಒಂದು ಮಳಿಗೆ ನೀಡಲು ರೇಲ್ವೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಸಂಘದ ಉತ್ಪನ್ನಗಳನ್ನು ಹೆಚ್ಚು ಮಾರಾಟ ಮಾಡಿ ಆದಷ್ಟು ಬೇಗ ಸಂಘದ ವ್ಯಾಪಾರವನ್ನು 5 ಕೋ.ರೂ. ದಾಟಿಸುವ ಗುರಿ ಇದೆ ಎನ್ನುತ್ತಾರೆ ಸ್ವಾವಲಂಬಿ ಸಖಿ ಕಂಪನಿಯ ಸಂಸ್ಥಾಪಕ ನಿರ್ದೇಶಕಿ ಪುಷ್ಪಲತಾ ನವಲಗುಂದ.   
ರೂಪಾಯಿಯಿಂದ ಡಾಲರ್‌ವರೆಗೆ: 
ವಿಮಾನ ನಿಲ್ದಾಣದ ಅವಸರ ಮಳಿಗೆಯಲ್ಲಿ ಸರದಿ ಪ್ರಕಾರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವ ಅವಕಾಶ ಸಿಗುತ್ತದೆ. ಈ ವೇಳೆ ದೇಶದ ಕರೆನ್ಸಿ ಜತೆಗೆ ವಿದೇಶಗಳ ಡಾಲರ್, ಯೂರೋ ನೋಟುಗಳನ್ನು ವಿದೇಶಗಳ ಗ್ರಾಹಕರು ನೀಡುತ್ತಾರೆ. ಡಾಲರ್ ಮತ್ತು ಯುರೋಗಳನ್ನು ರೂಪಾಯಿಗೆ ಲೆಕ್ಕ ಹಾಕಿ ವಿದೇಶಿ ಪ್ರವಾಸಿಗರ ಜತೆಗೆ ವ್ಯವಹಾರ ಮಾಡುತ್ತೇವೆ. ದೇಶದ ರೂಪಾಯಿ ಜತೆಗೆ ಡಾಲರ್‌ನಲ್ಲಿ ವ್ಯವಹಾರ ಮಾಡುತ್ತಿರುವುದು ತುಂಬಾ ಖುಷಿಯಾಗಿದೆ ಎನ್ನುತ್ತಾರೆ ಹುಬ್ಬಳ್ಳಿ ಸ್ವಾವಲಂಬಿ ಸಖಿ ಕಂಪನಿಯ ಸಂಸ್ಥಾಪಕ ನಿರ್ದೇಶಕಿ ಪ್ರಮೀಳಾ ಪುರಾಣಿಕಮಠ. 
ಮಧುರೈ ಎಕ್ಸ್‌ಪೋಗೆ ಭೇಟಿ
ತಮಿಳುನಾಡಿನ ಮಧುರೈನಲ್ಲಿ ಆಯೋಜಿಸಿದ್ದ ಎಕ್ಸ್‌ಪೋಗೆ ನಬಾರ್ಡ್ ವತಿಯಿಂದ ಭೇಟಿ ನೀಡಲಾಯಿತು. ಅಲ್ಲಿ ಸ್ವಸಹಾಯ ಸಂಘದ  ಸದಸ್ಯೆಯರು ಬಾಳೆ ಗಿಡದ ನಾರಿನಿಂದ ಅಲಂಕಾರಿಕ ವಸ್ತುಗಳನ್ನು ಮಾಡಿ ಬೇರೆ ದೇಶಗಳಿಗೆ ಕಳುಹಿಸುವುದಾಗಿ ಹೇಳಿದರು. ಅದನ್ನು ನೋಡಿದ ಮೇಲೆ ನಾವು ಕೂಡ ಅವರಂತೆ ಹೊಸದನ್ನು ಮಾಡಬೇಕು ಎಂದು ಅಲ್ಲಿಯೇ ನಿರ್ಧಾರ ಮಾಡಿದೆವು ಎನ್ನುತ್ತಾರೆ ಸ್ವಾವಲಂಬಿ ಸಖಿ ಪ್ರೊಡ್ಯುಸರ್ ಕಂಪನಿಯ ಸಿಇಒ ಸಂಜನಾ ಫಾಯದೆ.
ಅತ್ಯುತ್ತಮ ಕಾರ್ಯಕ್ಕೆ ಡಿಡಿಎಂಗೆ ಪ್ರಶಸ್ತಿ
ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘ, ರೈತ ಉತ್ಪಾದಕ ಕಂಪನಿ ಸೇರಿದಂತೆ ಉತ್ತಮ ಕಾರ್ಯನಿರ್ವಹಣೆ ಮತ್ತು ಹೊಸ ಆಲೋಚನೆಗಳಿಂದ ಸಂಘಗಳ ಸದಸ್ಯರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಿದ ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮಯೂರ ಕಾಂಬಳೆ ಅವರಿಗೆ ಜುಲೈ 12ರಂದು ಮುಂಬೈನಲ್ಲಿ ಜರುಗಿದ ನಬಾರ್ಡ್ ಸ್ಥಾಪನಾ ದಿವಸ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ಡಿಡಿಎಂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
"

ನಾಗರಿಕ ವಿಮಾನಯಾನ ಸಚಿವಾಲಯ ಆಯಾ ವಿಮಾನ ನಿಲ್ದಾಣಗಳಲ್ಲಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮಾರಾಟ ಮಾಡಲು ‘ಅವಸರ’ ಹೆಸರಿನಲ್ಲಿ ಮಳಿಗೆ ನೀಡುವ ಯೋಜನೆ ರೂಪಿಸಿದೆ. ಸ್ಥಳೀಯ ಸ್ವಸಹಾಯ ಸಂಘದ ಮಹಿಳೆಯರ ಸಬಲೀಕರಣಕ್ಕಾಗಿ ಈ ಕ್ರಮ ಕೈಗೊಂಡಿದೆ. ನಬಾರ್ಡ್ ಸಹಯೋಗದಲ್ಲಿ ದೇಶದಲ್ಲಿಯೇ ಮೊದಲನೆಯದಾಗಿ ಹುಬ್ಬಳ್ಳಿ ನಿಲ್ದಾಣದಲ್ಲಿ ಮಳಿಗೆ ತೆರೆದಿರುವುದು ಖುಷಿ ತಂದಿದೆ.
ರೂಪೇಶಕುಮಾರ , ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ

"

ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಸದೃಢಗೊಳಿಸುವುದು ಮತ್ತು ಮಹಿಳಾ ಸಬಲೀಕರಣ ಮಾಡುವ ಉದ್ದೇಶದಿಂದ 2017ರಿಂದ ಈವರೆಗೆ ನಬಾರ್ಡ್‌ನಿಂದ ಒಟ್ಟು 60 ಲಕ್ಷ ರೂ. ಅನುದಾನ ನೀಡಲಾಗಿದೆ. ಅನುದಾನದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅಗತ್ಯ ತರಬೇತಿ, ರಾಜ್ಯ ಸೇರಿದಂತೆ ಹೊರರಾಜ್ಯಗಳಲ್ಲಿ ಆಯೋಜಿಸುವ ಎಕ್ಸ್‌ಪೋಗಳಿಗೆ ಭೇಟಿ ನೀಡುವುದು. ಬೇರೆ ಊರುಗಳಿಗೆ ಕರೆದೊಯ್ದರೆ ಅವರಿಗೆ ಪ್ರಯಾಣ, ಊಟ, ಉಪಾಹಾರ, ವಸತಿ ವ್ಯವಸ್ಥೆಯ ಖರ್ಚು ವೆಚ್ಚವನ್ನು ನಬಾರ್ಡ್‌ನಿಂದಲೇ ಪಾವತಿಸುತ್ತೇವೆ. ಒಟ್ಟಿನಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಿವುದು ನಬಾರ್ಡ್ ಗುರಿ.
ಮಯೂರ ಕಾಂಬಳೆ , ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ

"

ನಾನು ಸಂಘಕ್ಕೆ ಬರುವ ಮೊದಲು ಎಲ್ಲ ಖರ್ಚು, ವೆಚ್ಚಗಳಿಗೆ ತಾಯಿ ಬಳಿ ಹಣ ಕೇಳುತ್ತಿದ್ದೆ. ವರ್ಷದ ಹಿಂದೆ ನಾನು ಇಲ್ಲಿ ಬಂದು ಸೀರೆ ಮತ್ತು ಬ್ಲೌಸ್ ಬಟ್ಟೆ ಮೇಲೆ ಕಸೂತಿ ಕಲೆ (ಆರಿ ವರ್ಕ್) ಹಾಕುವುದನ್ನು ಕಲಿತೆ. ಈಗ ತಿಂಗಳಿಗೆ 15 ರಿಂದ 20 ಸಾವಿರ ರೂಪಾಯಿ ಸಂಪಾದಿಸುತ್ತಿದ್ದೇನೆ. ನಾನು ಆರ್ಥಿಕವಾಗಿ ಸದೃಢವಾಗಿದ್ದೇನೆ. ಅಲ್ಲದೆ, ನನ್ನ ಕುಟುಂಬ ಸದಸ್ಯರನ್ನು ಗುಜರಾತ್, ಮಧ್ಯಪ್ರದೇಶ ಮತ್ತಿತರ ಕಡೆ ಇರುವ ಜ್ಯೋತಿರ್ಲಿಂಗಗಳ ದರ್ಶನ ಮಾಡಿಸಿದ್ದೇನೆ. ಸ್ವಾವಲಂಬಿ ಸಖಿ ಒಕ್ಕೂಟದಿಂದ ನಮಗೆ ತುಂಬಾ ಅನುಕೂಲವಾಗಿದೆ.
ಪೂರ್ಣಿಮಾ, ಸ್ವಾವಲಂಬಿ ಸಖಿ ಸಂಘದ ಸದಸ್ಯೆ ಹುಬ್ಬಳ್ಳಿ

"

ನಬಾರ್ಡ್ ವತಿಯಿಂದ ದೊರೆತ ತರಬೇತಿ ಶಿಬಿರದ ಸದುಪಯೋಗ ಪಡೆದೆವು. ನಬಾರ್ಡ್‌ನವರು ಮಹಿಳಾ ಸ್ವಸಹಾಯ ಸಂಘಗಳಿಗೆ ನುರಿತ ತಜ್ಞರು ಮತ್ತು ಯಶಸ್ವಿ ಮಹಿಳಾ ಉದ್ಯಮಿಗಳಿಂದ ಜಿಲ್ಲೆಯ ವಿವಿಧೆಡೆ ತರಬೇತಿ ಕಾರ್ಯಾಗಾರ ನಡೆಸಿದರು. ತರಬೇತಿ ಪಡೆದು ನಾವು ಕೂಡ ಗುಣಮಟ್ಟದ ವಸ್ತುಗಳನ್ನು ತಯಾರಿಸಿ ಸ್ವಂತ ಬ್ರಾೃಂಡ್ ಹೊಂದಿ, ಸಂಘದ ಸದಸ್ಯರು ತಯಾರಿಸಿದ ವಸ್ತುಗಳನ್ನು ದೇಶ-ವಿದೇಶಗಳಿಗೆ ಮಾರಾಟ ಮಾಡುತ್ತಿದ್ದೇವೆ.
ಸರ್ವಮಂಗಳಾ ಮೋತಿ,
ಸ್ವಾವಲಂಬಿ ಸಖಿ ಕಂಪನಿಯ ಸಂಸ್ಥಾಪಕ ನಿರ್ದೇಶಕಿ ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net