ಕೈವಲ್ಯ ಸಾಹಿತ್ಯ ಪಸರಿಸಲು ಸ್ಪರ್ಧೆ ಸಹಕಾರಿ kaivalya

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ 11ನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಯನ್ನು ಶಾಮಾನಂದ ಪೂಜೇರಿ ಉದ್ಘಾಟಿಸಿದರು. ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಆತ್ಮಾನಂದ ಸ್ವಾಮೀಜಿ, ಚನ್ನವೀರ ಮುಂಗರವಾಡಿ, ಬಸವರಾಜ ಕಲ್ಯಾಣಶೆಟ್ಟರ, ಮಂಜುನಾಥ ಮುನವಳ್ಳಿ, ವಿನಾಯಕ ಘೋಡಕೆ, ಡಾ. ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕ, ಗೀತಾ ಕಲಬುರಗಿ ಇದ್ದರು.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ 11ನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಯನ್ನು ಶಾಮಾನಂದ ಪೂಜೇರಿ ಉದ್ಘಾಟಿಸಿದರು. ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಆತ್ಮಾನಂದ ಸ್ವಾಮೀಜಿ, ಚನ್ನವೀರ ಮುಂಗರವಾಡಿ, ಬಸವರಾಜ ಕಲ್ಯಾಣಶೆಟ್ಟರ, ಮಂಜುನಾಥ ಮುನವಳ್ಳಿ, ವಿನಾಯಕ ಘೋಡಕೆ, ಡಾ. ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕ, ಗೀತಾ ಕಲಬುರಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಣ್ಣಿಗೇರಿ ದಾಸೋಹಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಚನ
  • ರಾಜ್ಯಮಟ್ಟದ ಭಜನಾ ಕಾರ್ಯಕ್ರಮ ಉದ್ಘಾಟನೆ
ಹುಬ್ಬಳ್ಳಿ: ಶ್ರೀಮನ್ನಿಜಗುಣ ಶಿವಯೋಗಿಗಳ ಕೈವಲ್ಯ ಸಾಹಿತ್ಯವನ್ನು ನಾಡಿನಾದ್ಯಂತ ಪಸರಿಸುವುದು, ಅದರಲ್ಲಿರುವ ಮೌಲ್ಯಗಳನ್ನು ಜನರಿಗೆ ತಿಳಿಸುವುದು ಮತ್ತು ಆ ಸಾಹಿತ್ಯವನ್ನು ಉಳಿಸಿ-ಬೆಳೆಸಲು ಭಜನಾ ಸ್ಪರ್ಧೆಗಳು ತುಂಬಾ ಸಹಕಾರಿಯಾಗುತ್ತವೆ ಎಂದು ಅಣ್ಣಿಗೇರಿ ದಾಸೋಹಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಇಲ್ಲಿನ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ಆವರಣದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ ಜಯಂತಿ ನಿಮಿತ್ತ ಭಾನುವಾರ ಏರ್ಪಡಿಸಿದ್ದ 11ನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ರಾಜ್ಯದ ಎಲ್ಲ ಜಿಲ್ಲೆಗಳ ಭಜನಾ ಮಂಡಳಿಗಳು ಭಾಗವಹಿಸುವ ಸ್ಪರ್ಧೆ ಇದ್ದರೆ ಅದು ಶ್ರೀ ಸಿದ್ಧಾರೂಢಮಠದಲ್ಲಿ ನಡೆಯುವ ರಾಜ್ಯಮಟ್ಟದ ಭಜನಾ ಸ್ಪರ್ಧೆಯಾಗಿದೆ. ಇಲ್ಲಿ ಎಲ್ಲ ಜಿಲ್ಲೆಗಳಿಂದ ಒಂದು ತಂಡವಾದರೂ ಭಾಗವಹಿಸುತ್ತಿರುವುದು ಸಂತಸದ ಸಂಗತಿ ಎಂದರು.
ಇಲ್ಲಿ ವಿಜೇತರಾಗಿ ಬಹುಮಾನ ಪಡೆಯುವುದಕ್ಕಿಂತ ಶ್ರೀ ಸಿದ್ಧಾರೂಢರ ಸನ್ನಿಧಿಯಲ್ಲಿ ಭಜನೆ ಮಾಡಲು ಅವಕಾಶ ಸಿಕ್ಕಿರುವುದೇ ಮಹಾ ಪುಣ್ಯ. ಹೀಗಾಗಿ, ಎಲ್ಲ ಭಜನಾ ತಂಡಗಳು ಉತ್ತಮ ಪ್ರದರ್ಶನ ನೀಡಬೇಕು. ಭಜನಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರೀ ಸಿದ್ಧಾರೂಢಸ್ವಾಮಿ ಟ್ರಸ್ಟ್ ಧರ್ಮದರ್ಶಿಗಳ ಕಾರ್ಯ ಶ್ಲಾಘನೀಯ ಎಂದರು.
ರಾಜ್ಯಮಟ್ಟದ ಭಜನಾ ಸ್ಪರ್ಧೆ ಸಮಿತಿ ಅಧ್ಯಕ್ಷ ಶಾಮಾನಂದ ಪೂಜೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಜಗುಣ ಶಿವಯೋಗಿಗಳ ಕೈವಲ್ಯ ಸಾಹಿತ್ಯ ಯಾವುದೇ ಜಾತಿ, ಮತ, ಪಂಥಗಳಿಗೆ ಸೀಮಿತವಾಗಿಲ್ಲ. ಇಡೀ ಮಾನವ ಕುಲದ ಒಳಿತನ್ನು ಒಳಗೊಂಡಿದೆ ಎಂದರು.
ಭಜನೆ, ಸಂಗೀತವೆಂದರೆ ಶ್ರೀ ಸಿದ್ಧಾರೂಢರಿಗೆ ಅಚ್ಚುಮೆಚ್ಚಾಗಿತ್ತು. ಭಜನೆ ಒಂದು ಕಲೆ, ಸಾಹಿತ್ಯ, ಸಂಸ್ಕೃತಿ ಆಗಿದೆ. ಕೈವಲ್ಯ ಸಾಹಿತ್ಯವನ್ನು ಎಲ್ಲ ಭಕ್ತರಿಗೂ ತಲುಪಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಸ್ಪರ್ಧೆಯ ಮೊದಲ ವರ್ಷ ಮೈಸೂರು, ರಾಮನಗರ, ಬಳ್ಳಾರಿ, ರಾಯಚೂರು ಹೀಗೆ ವಿವಿಧೆಡೆ ತೆರಳಿ ಮಾಹಿತಿ ನೀಡಲಾಯಿತು. ಅಲ್ಲಿಂದ ಈವರೆಗೆ ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ತಂಡಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಚೇರಮನ್ ಚನ್ನವೀರ ಮುಂಗರವಾಡಿ ಮಾತನಾಡಿ, ಈವರೆಗೆ 150ಕ್ಕೂ ಅಧಿಕ ಭಜನಾ ತಂಡಗಳು ಹೆಸರು ನೋಂದಾಯಿಸಿವೆ. ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ 25ರಿಂದ 30 ತಂಡಗಳು ಸ್ಪರ್ಧೆಯಲ್ಲಿ ಪ್ರದರ್ಶನ ನೀಡಲಿವೆ. ಭಾನುವಾರದಿಂದ 5 ದಿನಗಳ ಕಾಲ ಸ್ಪರ್ಧೆ ನಡೆಯಲಿದೆ. ಏ. 2ರಂದು ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಏ. 3ರಂದು ಬೆಳಗ್ಗೆ 11ಕ್ಕೆ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.
ಧರ್ಮದರ್ಶಿ ಬಸವರಾಜ ಕಲ್ಯಾಣಶೆಟ್ಟರ ಮಾತನಾಡಿ, ಸ್ಪರ್ಧೆಯಲ್ಲಿ ರಾಜ್ಯವಲ್ಲದೆ, ಪಕ್ಕದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ತಂಡಗಳೂ ಭಾಗವಹಿಸಲಿವೆ. ಸ್ಪರ್ಧೆ ಆಯೋಜನೆಗೆ ಭಜನಾ ಸಮಿತಿ ಮೂರು ತಿಂಗಳಿಂದ ಅವಿರತವಾಗಿ ಶ್ರಮಿಸುತ್ತಿದೆ ಎಂದರು.
ತಲಕಟ್ನಾಳ ಶ್ರೀ ಸಿದ್ಧಾರೂಢಮಠದ ಶ್ರೀ ಆತ್ಮಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಆರಂಭದಲ್ಲಿ ಮುಧೋಳ ತಾಲೂಕಿನ ಕುಳಲಿಯ ಲಕ್ಷ್ಮೀದೇವಿ ಗಾಜಿ ನೇತೃತ್ವದ ತಂಡ ಸಿದ್ಧಾರೂಢರ ಕುರಿತು ಭಜನೆ ಪ್ರಸ್ತುತಪಡಿಸಿದರು.
ಭಜನಾ ಸ್ಪರ್ಧೆ ಸಮಿತಿ ಉಪಾಧ್ಯಕ್ಷ ಡಾ. ಗೋವಿಂದ ಮಣ್ಣೂರ, ಕಾರ್ಯದರ್ಶಿ ಉದಯಕುಮಾರ ನಾಯ್ಕ, ಧರ್ಮದರ್ಶಿಗಳಾದ ಮಂಜುನಾಥ ಮುನವಳ್ಳಿ, ವಿನಾಯಕ ಘೋಡಕೆ, ಬಾಳು ಮಗಜಿಕೊಂಡಿ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ, ಸಿಬ್ಬಂದಿ ಇದ್ದರು. ಧರ್ಮದರ್ಶಿ ಗೀತಾ ಕಲಬುರಗಿ ಕಾರ್ಯಕ್ರಮ ನಿರ್ವಹಿಸಿದರು.
ಭಾಗವಹಿಸಿದ ತಂಡಗಳು
ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಹಾಸನ, ರಾಮನಗರ, ಬಳ್ಳಾರಿ, ರಾಯಚೂರ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net