ಹೆಸ್ಕಾಂಗೆ 8.90 ಕೋಟಿ ರೂ. ಹಾನಿ hescom

ಧಾರವಾಡದಲ್ಲಿ ಭಾರಿ ಗಾಳಿಗೆ ವಿದ್ಯುತ್ ಕಂಬವೊಂದು ಮುರಿದು ರಸ್ತೆಯಲ್ಲಿ ಬಿದ್ದಿರುವುದು.
ಧಾರವಾಡದಲ್ಲಿ ಭಾರಿ ಗಾಳಿಗೆ ವಿದ್ಯುತ್ ಕಂಬವೊಂದು ಮುರಿದು ರಸ್ತೆಯಲ್ಲಿ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಭಾರಿ ಗಾಳಿ, ಮಳೆಯಿಂದ ಧರೆಗುರುಳಿದ 8706 ಕಂಬ, 259 ಟಿಸಿ ಹಾಳು
ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಪ್ರಸಕ್ತ ವರ್ಷದ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆ, ಗಾಳಿಯಿಂದ ವಿದ್ಯುತ್ ಕಂಬ, ಟಿಸಿ, ತಂತಿ ನೆಲಕ್ಕುರುಳಿದ್ದರಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) 8.90 ಕೋಟಿ ರೂಪಾಯಿ ಹಾನಿಯಾಗಿದೆ.
ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಾದ ಧಾರವಾಡ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಹಾವೇರಿಯಲ್ಲಿ 2026ರ ಏಪ್ರಿಲ್‌ನಿಂದ ಜೂನ್ 30ರವರೆಗೆ ಭಾರಿ ಗಾಳಿ, ಮಳೆಗೆ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ (ಟಿಸಿ) ಹಾಗೂ ಲೈನ್ (ತಂತಿ) ಹಾಳಾಗಿವೆ.
8706 ಕಂಬಗಳಿಗೆ ಹಾನಿ: 
ಹೆಸ್ಕಾಂ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿ 1095 ಕಂಬಗಳು ಧರೆಗುರುಳಿವೆ. ಗದಗ-608, ಹಾವೇರಿ-1337, ಉತ್ತರ ಕನ್ನಡ-1410, ಬೆಳಗಾವಿ-1921, ವಿಜಯಪುರ- 1070 ಬಾಗಲಕೋಟೆ- 1265 ಕಂಬಗಳು ನೆಲಕ್ಕುರುಳಿವೆ.
259 ಟಿಸಿ ಹಾಳು: ಧಾರವಾಡ-80, ಗದಗ-4, ಹಾವೇರಿ-1, ಉತ್ತರ ಕನ್ನಡ-20, ಬೆಳಗಾವಿ-93, ವಿಜಯಪುರ-31, ಬಾಗಲಕೋಟೆ-30 ವಿದ್ಯುತ್ ಪರಿವರ್ತಕಗಳು (ಟಿಸಿ) ಹಾನಿಯಾಗಿವೆ.
45.19 ಕಿ.ಮೀ. ವಿದ್ಯುತ್ ತಂತಿ: 
ಧಾರವಾಡ-3.4 ಕಿ.ಮೀ., ಉತ್ತರ ಕನ್ನಡ- 0.22 ಕಿ.ಮೀ., ಬೆಳಗಾವಿ-1.34 ಕಿ.ಮೀ., ಬಾಗಲಕೋಟೆ- 40.23ಕಿಲೋ ಮೀಟರ್‌ನಷ್ಟು ವಿದ್ಯುತ್ ತಂತಿ (ಲೈನ್)ಹಾನಿಯಾಗಿದೆ.
ಬೆಳಗಾವಿಯಲ್ಲಿ ಹೆಚ್ಚು ನಷ್ಟ: ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, 1921 ವಿದ್ಯುತ್ ಕಂಬಗಳು ಬಿದ್ದಿದ್ದು, 93 ಟಿಸಿಗಳು ಹಾನಿಯಾಗಿವೆ. 
24 ತಾಸಿನೊಳಗೆ ದುರಸ್ತಿ
2026ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ಭಾರಿ ಗಾಳಿ ಮತ್ತು ಮಳೆಯಿಂದ ಧಾರವಾಡದ ವಿವಿಧೆಡೆ ಅನೇಕ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. 24 ತಾಸಿನೊಳಗೆ ಅವುಗಳನ್ನು ದುರಸ್ತಿ ಮಾಡಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಧಾರವಾಡ ಶಹರ ಉಪವಿಭಾಗ-2ರ ಕಾರ್ಯ ಮತ್ತು ಪಾಲನೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಸ್ಕಾಂ ದೇವರಾಜ ಹೆಗಡೆ ತಿಳಿಸಿದರು.
"

ಪ್ರಸಕ್ತ ವರ್ಷ ಪೂರ್ವ ಮುಂಗಾರಿನಲ್ಲಿ ಅತಿಯಾಗಿ ಬೀಸಿದ ಗಾಳಿಯಿಂದ 2026ರ ಏಪ್ರಿಲ್‌ನಿಂದ ಜೂನ್ 30ರವರೆಗೆ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 8,706 ವಿದ್ಯುತ್ ಕಂಬಗಳು ಬಿದ್ದಿದ್ದು, 259 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ. 45 ಕಿಲೋ ಮೀಟರ್‌ನಷ್ಟು ವಿದ್ಯುತ್ ತಂತಿ ಹಾಳಾಗಿದ್ದು, ಒಟ್ಟು 8.90 ಕೋಟಿ ರೂ. ನಷ್ಟವಾಗಿದೆ. ನೆಲಕ್ಕುರುಳಿದ ವಿದ್ಯುತ್ ಕಂಬಗಳು, ಟಿಸಿ ಮತ್ತು ವಯರ್‌ಗಳನ್ನು ಹೊಸದಾಗಿ ಅಳವಡಿಸಲಾಗಿದೆ. 

 ವೈಶಾಲಿ ಎಂ.ಎಲ್.ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ

"

ಈ ಬಾರಿ ಮುಂಗಾರು ಮಳೆ ವಾಡಿಕೆಗಿಂದ ಕಡಿಮೆ ಆಗಿದೆ. ಆದರೂ ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಭಾರಿ ಗಾಳಿ ಮತ್ತು ಸಿಡಿಲು ಬಡಿದು ಅನೇಕ ಗಿಡ, ಮರಗಳು ಮುರಿದು ಕಂಬಗಳ ಮೇಲೆ ಮತ್ತು ರಸ್ತೆಯಲ್ಲಿ ಬಿದ್ದಿವೆ. ಇದರಿಂದ ಹೆಸ್ಕಾಂಗೆ ಕೋಟ್ಯಂತರ ರೂಪಾಯಿ ಹಾನಿಯಾಗಿದೆ. ಹೆಸ್ಕಾಂ ಸಿಬ್ಬಂದಿ ಹಗಲು-ರಾತ್ರಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ದುರಸ್ತಿ ಕಾರ್ಯ ಕೈಗೊಂಡು ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಸಲಾಗಿದೆ. 

 ಅಜೀಂಪೀರ್ ಖಾದ್ರಿಹೆಸ್ಕಾಂ ಅಧ್ಯಕ್ಷ

"

ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನಲ್ಲಿ ಮುಂಗಾರಿನಲ್ಲಿ ಭಾರಿ ಗಾಳಿಗೆ ಹೊಗಳಲ್ಲಿ ನೂರಾರು ವಿದ್ಯುತ್ ಕಂಬಗಳು ಬಿದ್ದಿದ್ದವು. ಹೆಸ್ಕಾಂ ಸಿಬ್ಬಂದಿ ಎರಡು ದಿನಗಳಲ್ಲಿ ಅವುಗಳ ದುರಸ್ತಿ ಮಾಡಿ, ರೈತರಿಗೆ ಅನುಕೂಲ ಮಾಡಿದ್ದಾರೆ. 

ಮಹಾಂತೇಶ ತೋಟಗಿ ಕೃಷಿಕ ಸಮಾಜದ ಯುವ ಘಟಕದ ಅಧ್ಯಕ್ಷ, ಯರಗಟ್ಟಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net