ಗೃಹಜ್ಯೋತಿ 27 ಲಕ್ಷ ದಾಖಲೆ ಪರಿಷ್ಕರಣೆ gruhjyothi

ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಗ್ರಾಹಕರ ಮನೆಯಲ್ಲಿ ಹೆಸ್ಕಾಂ ಸಿಬ್ಬಂದಿ ಗೃಹಜ್ಯೋತಿ ಯೋಜನೆ ದಾಖಲೆ ಪರಿಷ್ಕರಣೆಯಲ್ಲಿ ಪಾಲ್ಗೊಂಡಿರುವುದು.
ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಗ್ರಾಹಕರ ಮನೆಯಲ್ಲಿ ಹೆಸ್ಕಾಂ ಸಿಬ್ಬಂದಿ ಗೃಹಜ್ಯೋತಿ ಯೋಜನೆ ದಾಖಲೆ ಪರಿಷ್ಕರಣೆಯಲ್ಲಿ ಪಾಲ್ಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹೆಸ್ಕಾಂ ವ್ಯಾಪ್ತಿಯಲ್ಲಿ 34.36 ಲಕ್ಷ ಫಲಾನುಭವಿಗಳು

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ

ಹೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯಡಿ ಒಟ್ಟು 34.36 ಲಕ್ಷ ಫಲಾನುಭವಿಗಳು ನೋಂದಾಯಿಸಿ ಕೊಂಡಿದ್ದಾರೆ. ಈ ಪೈಕಿ 27.15 ಲಕ್ಷ ಗ್ರಾಹಕರು ದಾಖಲೆಗಳ ಪರಿಷ್ಕರಣೆಗೆ ಒಳಪಟ್ಟಿದ್ದು, 7.20 ಲಕ್ಷ ಫಲಾನುಭವಿಗಳು ಬಾಕಿ ಉಳಿದಿದ್ದಾರೆ. ಜುಲೈ 1ರಂದು ಪರಿಷ್ಕರಣೆ ಪ್ರಕ್ರಿಯೆ ಶುರುವಾಗಿದ್ದು, ಧಾರವಾಡ ಜಿಲ್ಲೆಯಲ್ಲಿ 360 ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ಶೇ. 94ರಷ್ಟು ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. 
ಏಳು ಜಿಲ್ಲೆ ಹೆಸ್ಕಾಂ ವ್ಯಾಪ್ತಿಗೆ: 
ಹೆಸ್ಕಾಂ ವ್ಯಾಪ್ತಿಗೆ ಧಾರವಾಡ, ಹಾವೇರಿ, ಗದಗ, ಉತ್ತರಕನ್ನಡ, ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳು ಒಳಪಡುತ್ತಿದ್ದು, ಆ. 31ರೊಳಗೆ ಗೃಹಜ್ಯೋತಿ ಫಲಾನುಭವಿಗಳು ದಾಖಲೆ ಪರಿಷ್ಕರಣೆ ಮಾಡಿಸಿಕೊಳ್ಳಲು ಅವಕಾಶವಿದೆ.
ಪರಿಷ್ಕರಣೆಗೆ ಬೇಕಾದ ದಾಖಲೆಗಳು:
ಗ್ರಾಹಕರು ತಮ್ಮ ಮನೆಯ ವಿದ್ಯುತ್ ಬಿಲ್ (ಆರ್‌ಆರ್ ಸಂಖ್ಯೆ ಇರುವ), ಬಾಡಿಗೆದಾರರಾದರೆ ಬಾಡಿಗೆ ಕರಾರು ಪತ್ರ, ಮೊಬೈಲ್ ಫೋನ್ ಸಂಖ್ಯೆ ಜೋಡಣೆ ಇರುವ ಆಧಾರ ಕಾರ್ಡ್, ಪಾನ್ ಕಾರ್ಡ್, ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ತೆಗೆದುಕೊಂಡು ನಗರದ ಗ್ರಾಹಕರು ಸಂಬಂಧಿಸಿದ ಹೆಸ್ಕಾಂ ಶಾಖಾ ಕಚೇರಿ, ಉಪವಿಭಾಗ ಕಚೇರಿ ಹಾಗೂ ಗ್ರಾಮೀಣ ಪ್ರದೇಶಗಳ ಗ್ರಾಹಕರು ಗ್ರಾಮ ವಿದ್ಯುತ್ ಪ್ರತಿನಿಧಿಗಳ ಬಳಿ ತಮ್ಮ ದಾಖಲೆಗಳನ್ನು ನೀಡಿ ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಮಾಡಿಸಬೇಕು. 

ಮೊಬೈಲ್ ಫೋನ್ ಜತೆಗಿರಲಿ

ಪರಿಷ್ಕರಣೆ ಸಮಯದಲ್ಲಿ ಗ್ರಾಹಕರು ತಮ್ಮ ಆಧಾರ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಫೋನ್‌ನ್ನು ಜತೆಗೆ ಇಟ್ಟುಕೊಳ್ಳಬೇಕು. ದಾಖಲೆಗಳ ಪರಿಶೀಲನೆ ವೇಳೆ ಒಟಿಪಿ ಬರುತ್ತದೆ. ಒಟಿಪಿ ನಮೂದಿಸಿದರೆ ಮುಂದಿನ ಪ್ರಕ್ರಿಯೆಗಳು ಸುಲಭವಾಗಿ ಆಗುತ್ತವೆ. ಹೀಗಾಗಿ, ಗ್ರಾಹಕರು ಮೊಬೈಲ್ ಫೋನ್ ಇಟ್ಟುಕೊಳ್ಳಬೇಕು ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.
ಇನ್ನುಳಿದವರ ಪರಿಷ್ಕರಣೆ ಸವಾಲಿನದು
ಈವರೆಗೆ ಹೆಸ್ಕಾಂ ಸಿಬ್ಬಂದಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳಿಗೆ ತೆರಳಿ ದಾಖಲೆ ಪಡೆದು ಪರಿಷ್ಕರಣೆ ಮಾಡಿದ್ದಾರೆ. ಕೆಲ ಗ್ರಾಹಕರು ಮನೆ ಬೀಗ ಹಾಕಿರುವುದು, ಮನೆ ಬಿಟ್ಟು ಬೇರೆಡೆ ಸ್ಥಳಾಂತರಗೊಂಡವರು, ಮನೆ ಮಾಲೀಕರು ಬೇರೆ ರಾಜ್ಯ ಅಥವಾ ವಿದೇಶಗಳಲ್ಲಿರುವುದು ಕಂಡು ಬಂದಿದೆ. ಅಂಥ ಕೆಲ ಮನೆಗಳಿದ್ದು, ಆ ಮನೆಗಳ ಮಾಲೀಕರನ್ನು ಹುಡುಕಿ ಪರಿಷ್ಕರಣೆ ಮಾಡುವ ಕೆಲಸ ಸವಾಲಿನಿಂದ ಕೂಡಿದೆ ಎಂದು ಸಮೀಕ್ಷೆಗೆ ನಿಯೋಜನೆಗೊಂಡ ಹೆಸ್ಕಾಂ ನೌಕರ ವಿಜಯವಾಣಿಗೆ ತಿಳಿಸಿದರು.
"

ಹೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಫಲಾನುಭವಿಗಳು ಪರಿಷ್ಕರಣೆ ಕಾರ್ಯಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಇದೇ ವೇಳೆ ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳ ಫಲಾನುಭವಿಗಳ ಮಾಹಿತಿ ಕೂಡ ಪಡೆಯಲಾಗಿದೆ. ಆ. 31ರೊಳಗೆ ಇನ್ನುಳಿದ ಫಲಾನುಭವಿಗಳ ಮಾಹಿತಿ ಸಂಗ್ರಹ ಕಾರ್ಯ ಪೂರ್ಣಗೊಳಿಸಲಾಗುವುದು. ಗ್ರಾಹಕರು ಕೂಡ 31ರೊಳಗೆ ತಮಗೆ ಸಂಬಂಧಿಸಿದ ಹೆಸ್ಕಾಂ ಶಾಖಾ ಕಚೇರಿ ಅಥವಾ ಉಪವಿಭಾಗ ಕಚೇರಿಗೆ ತೆರಳಿ ದಾಖಲೆಗಳ ಪರಿಷ್ಕರಣೆ ಮಾಡಿಸಬೇಕು. ವೈಶಾಲಿ ಎಂ. ಎಲ್., ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಹುಬ್ಬಳ್ಳಿ

ಜಿಲ್ಲಾವಾರು ಗೃಹಜ್ಯೋತಿ ಪರಿಷ್ಕರಣೆ ಮಾಹಿತಿ    

(2026ರ ಆ. 20ರವರೆಗಿನ ವಿವರ)
ಜಿಲ್ಲೆ---             ಗ್ರಾಹಕರು-       ಪರಿಶೀಲನೆ -  ಬಾಕಿ
ಬಾಗಲಕೋಟೆ    423318--       330828--   92490
ಬೆಳಗಾವಿ          1009262--     774000--   235262
ಗದಗ              273597--       199941--   73656
ಹಾವೇರಿ          394073--        299938--   94135
ಉತ್ತರಕನ್ನಡ     386580--        318872--   67708
ವಿಜಯಪುರ     441124--          341987--   99137
ಧಾರವಾಡ       508371--         450415--  57956
(ಧಾರವಾಡ ಜಿಲ್ಲೆಯ 2026ರ ಆ. 23ರವರೆಗಿನ ವಿವರ)
ಒಟ್ಟು -- 34,36,325-- 27,15,981- 7,20,344
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net