2,62,101 ವಾಹನಗಗಳಿಗೆ ಎಚ್​ಎಸ್​ಆರ್​ಪಿ ಅಳವಡಿಕೆ ಬಾಕಿ

HSRP
HSRP
Published on
ಮಂಜುನಾಥ ಎಸ್​. ಅಂಗಡಿ ಧಾರವಾಡ
ವಾಹನಗಳಿಗೆ ಅತಿ ಸುರತ ನೋಂದಣಿ ಫಲಕ (ಎಚ್​ಎಸ್​ಆರ್​ಪಿ- ಹೈ ಸೆಕ್ಯುರಿಟಿ ರಿಜಿಸ್ಟ್ರೆಷನ್​ ಪ್ಲೇಟ್​) ಅಳವಡಿಕೆ ನನೆಗುದಿಗೆ ಬಿದ್ದಿದೆ. ಸರ್ಕಾರದಿಂದಲೇ 2- 3 ಬಾರಿ ಗಡುವು ವಿಸ್ತರಣೆ ಆಗಿದ್ದರಿಂದ 2019ರ ಮಾ. 31ಕ್ಕಿಂತ ಮೊದಲಿನ ವಾಹನಗಳ ಮಾಲೀಕರು ಎಚ್​ಎಸ್​ಆರ್​ಪಿ ಅಳವಡಿಸಲು ಉತ್ಸಾಹ ತೋರುತ್ತಿಲ್ಲ.
ಜಿಲ್ಲೆಯ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ- 63) ವ್ಯಾಪ್ತಿಯಲ್ಲಿ ಎಲ್ಲ ವಿಧದ ಸೇರಿ 3,19,579 ವಾಹನಗಳಿವೆ. ಈ ಪೈಕಿ ಎಚ್​ಎಸ್​ಆರ್​ಪಿ ಅಳವಡಿಕೆಯಾಗಿದ್ದು 1,88,937 ವಾಹನಗಳು. ಇನ್ನೂ 1,30,642 ವಾಹನಗಳಿಗೆ ಎಚ್​ಎಸ್​ಆರ್​ಪಿ ಇಲ್ಲ.
ಅದೇರೀತಿ ಧಾರವಾಡ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ- 25) ವ್ಯಾಪ್ತಿಯಲ್ಲಿ ಒಟ್ಟು 21,42,258 ವಾಹನಗಳಿದ್ದು, 82,799 ವಾಹನಗಳಿಗೆ ಎಚ್​ಎಸ್​ಆರ್​ಪಿ ಅಳವಡಿಕೆಯಾಗಿದ್ದು, 1,31,459 ವಾಹನಗಳು ಎಚ್​ಎಸ್​ಆರ್​ಪಿ ಜೋಡಿಸಿಕೊಂಡಿಲ್ಲ.
ನಕಲಿ ಸಂಖ್ಯೆಯ ನೋಂದಣಿ ಫಲಕಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ 2019ರಲ್ಲಿ ಎಚ್​ಎಸ್​ಆರ್​ಪಿ ಅನುಷ್ಠಾನಕ್ಕೆ ತಂದಿದೆ. 2019ರ ಏ. 1ರ ನಂತರದ ವಾಹನಗಳಿಗೆ ನೋಂದಣಿ ಸಮಯದಲ್ಲೇ ಅಳವಡಿಕೆ ಮಾಡಲಾಗುತ್ತಿದೆ. ಅದಕ್ಕಿಂತ ಹಿಂದಿನ ವಾಹನಗಳಿಗೆ ಎಚ್​ಎಸ್​ಆರ್​ಪಿ ಅಳವಡಿಸಿಕೊಳ್ಳಲು ಆಯಾ ರಾಜ್ಯ ಸರ್ಕಾರಗಳೇ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು.
2023ರ ನ. 17ರೊಳಗೆ ಹಳೇ ವಾಹನಗಳು ಎಚ್​ಎಸ್​ಆರ್​ಪಿ ಅಳವಡಿಸಿಕೊಳ್ಳುವಂತೆ ರಾಜ್ಯ ಸಾರಿಗೆ ಇಲಾಖೆ ಕಳೆದ ವರ್ಷ 2023ರ ಆಗಸ್ಟ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಅಳವಡಿಸುವ ಅವಕಾಶವನ್ನು ಕೆಲವೇ ಏಜೆನ್ಸಿಗಳಿಗೆ ನೀಡಿರುವ ಕ್ರಮವನ್ನು ಪ್ರಶ್ನಿಸಿ ಕೆಲವರು ಕೋರ್ಟ್​ ಮೊರೆ ಹೋಗಿದ್ದರು.
ಈ ನಂಬರ್​ ಪ್ಲೇಟ್​ ಅಳವಡಿಕೆ ಕುರಿತು ಮೊದಲಿನಿಂದಲೂ ವಾಹನ ಮಾಲೀಕರಿಂದ ನಿರಾಸಕ್ತಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ 3 ತಿಂಗಳು ಅವಧಿ ವಿಸ್ತರಣೆ ಮಾಡಲಾಗಿತ್ತು. ರಾಜ್ಯ ಸರ್ಕಾರ ಮತ್ತೆ ಅವಧಿ ವಿಸ್ತರಿಸಿ 2024ರ ಮೇ 31ರವರೆಗೆ ಅವಕಾಶ ನೀಡಿತ್ತು. ಇದಾದ ಬಳಿಕವೂ ಮತ್ತೆ ಮತ್ತೆ ಅವಧಿ ವಿಸ್ತರಣೆಯಾಗಿದ್ದರಿಂದ ವಾಹನ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ.
ವ್ಯವಸ್ಥೆ ಸರಳೀಕರಣಗೊಳಿಸಿ:
ಎಚ್​ಎಸ್​ಆರ್​ಪಿ ಅಳವಡಿಸುವ ವ್ಯವಸ್ಥೆ ಸರಳೀಕರಣಗೊಳಿಸುವುದು, ಆಫ್​ಲೈನ್​ನಲ್ಲೂ ವ್ಯವಸ್ಥೆ ಜಾರಿ, ವಾಹನ ಮಾಲೀಕರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಜತೆಗೆ ಆನ್​ಲೈನ್​ ಬುಕ್ಕಿಂಗ್​ ಮಾಡಿದ ಬಳಿಕವೂ ತಿಂಗಳುಗಟ್ಟಲೇ ಕಾಯುವಂತಾಗಬಾರದು. ಆಫ್​ಲೈನ್​ ಮೂಲಕ ನಿದಿರ್ಷ್ಟ ಕೇಂದ್ರದಲ್ಲಿ ನೋಂದಣಿಗೂ ಕ್ರಮ ವಹಿಸಬೇಕು ಎಂಬುದು ವಾಹನ ಮಾಲೀಕರ ಆಗ್ರಹವಾಗಿದೆ.
ದೋಷಪೂರಿತವಿದ್ದರೆ ದಂಡ:
ಎಚ್​ಎಸ್​ಆರ್​ಪಿ ಇಲ್ಲದಿದ್ದರೂ ಸಾರಿಗೆ ಇಲಾಖೆ ಮತ್ತು ಪೊಲೀಸ್​ ಇಲಾಖೆ ರೂಪಿಸಿರುವ ನಿಯಮಾವಳಿಯಂತೆ ನಂಬರ್​ ಪ್ಲೇಟ್​ಗಳಿರಬೇಕು. ದೋಷಪೂರಿತ ಲಕ ಇದ್ದರೆ ದಂಡ ಭರಿಸಬೇಕಾಗುತ್ತದೆ.
"

2019ರಿಂದ ವಾಹನಗಳ ನೊಂದಣಿ ವೇಳೆಯೇ ಎಚ್​ಎಸ್​ಆರ್​ಪಿ ಅಳವಡಿಸಲಾಗುತ್ತಿದೆ. ಎಚ್​ಎಸ್​ಆರ್​ಪಿ ಅಳವಡಿಕೆಯ ಗಡುವು ವಿಸ್ತರಣೆಯಾಗಿದ್ದರಿಂದ ದಂಡ ವಿಧಿಸಲು ಬರುವುದಿಲ್ಲ. ಆದರೆ, ನಿಯಮಾವಳಿ ಮೀರಿದ ಮತ್ತು ದೋಷಪೂರಿತ ನಂಬರ್​ ಪ್ಲೇಟ್​ಗಳನ್ನು ಅಳವಡಿಸಿದ್ದರೆ ದಂಡ ವಿಧಿಸಲಾಗುತ್ತದೆ.

- ಶ್ರೀಕಾಂತ ಬಡಿಗೇರ, ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net