ಹುಬ್ಬಳ್ಳಿ: housing plan ಹೆಚ್ಚುತ್ತಿರುವ ಜನರ ವಸತಿ ಬೇಡಿಕೆ ಈಡೇರಿಸಲು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು (ಹುಡಾ) ರೈತರ ಸಹಭಾಗಿತ್ವದಲ್ಲಿ ವಸತಿ ಯೋಜನೆ ರೂಪಿಸಲು ಬಹಳ ಉತ್ಸುಕವಾಗಿದೆ.
ಜಮೀನು ನೀಡುವ ರೈತರಿಗೆ ಹೆಚ್ಚಿನ ಲಾಭ ಹಾಗೂ ಪ್ರಯೋಜನ ಮಾಡಿಕೊಡುವ ಆಶಯ ಹೊಂದಿರುವ ಹುಡಾ ಇದಕ್ಕಾಗಿ ಅವರ ಮನವೊಲಿಕೆ ಪ್ರಯತ್ನಗಳನ್ನು ಮುಂದುವರಿಸಿದೆ.
ಈ ಮೊದಲು ರೈತರ ಜಮೀನು ಖರೀದಿಸಿ ಅದನ್ನು ಅಭಿವೃದ್ಧಿ ಪಡಿಸಿ ನಿವೇಶನಗಳನ್ನು ಸರ್ಕಾರಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಜಮೀನಿನ ಬೆಲೆ ಹೆಚ್ಚಾಗಿರುವುದು ಹಾಗೂ ಜಮೀನು ನೀಡಲು ಹೆಚ್ಚಿನ ರೈತರು ಮುಂದೆ ಬರದೇ ಇರುವ ಹಿನ್ನೆಲೆಯಲ್ಲಿ ಸರ್ಕಾರದ ಫಿಫ್ಟಿ- ಫಿಫ್ಟಿ ಸ್ಕೀಂ ಅಡಿಯಲ್ಲಿ ವಸತಿ ಯೋಜನೆ ರೂಪಿಸಲು ಮುಂದಾಗಿದೆ.
ರೈತರಿಗೆ ಏನು ಅನುಕೂಲ
ರೈತರ ಜಮೀನಿನಲ್ಲಿ ಸಿದ್ಧವಾಗುವ ಲೇಔಟ್ಗಳಲ್ಲಿ ಅರ್ಧದಷ್ಟು ನಿವೇಶನ ರೈತರಿಗೆ ಇನ್ನರ್ಧ ಹುಡಾ ಇಟ್ಟುಕೊಳ್ಳುವ ಯೋಜನೆಯನ್ನು ಸರ್ಕಾರದ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲಗಳಿವೆ. ಹಾಗಾಗಿ ಈ ಯೋಜನೆಯಡಿ ರೈತರು ತಮ್ಮ ಜಮೀನು ನೀಡಬೇಕು ಎಂಬುದು ಹುಡಾ ಅಧ್ಯಕ್ಷ ಶಾಕೀರ್ ಸನದಿ ಅವರ ಮನವಿ.
ರೈತರು ತಮ್ಮ ಜಮೀನು ನೀಡಿದರೆ ಇದು ಸರ್ಕಾರದ ಯೋಜನೆಯಾಗಿರುವುದರಿಂದ ಯಾವುದೇ ಮೋಸ, ವಂಚನೆ ಇರುವುದಿಲ್ಲ. ಭದ್ರತೆ ಇರುತ್ತದೆ. ರೈತರೆಲ್ಲ ಒಂದಾಗಿ ಹೆಚ್ಚು ಜಮೀನು ನೀಡಿದರೆ ಅದರಲ್ಲಿ ಬೃಹತ್ ವಸತಿ ಯೋಜನೆ ರೂಪಿಸಿ, ಟೌನ್ ಶಿಪ್ ನಿರ್ಮಾಣ ಮಾಡಬಹುದಾಗಿದೆ. ಇದರಿಂದ ಸುಸಜ್ಜಿತ ನಗರ ಸಿದ್ಧಗೊಳ್ಳಲಿದೆ.
ರೈತರಿಗೆ ಸದ್ಯದ ಹಣಕಾಸಿನ ಅನುಕೂಲಗಳ ಜತೆಗೆ ಭವಿಷ್ಯತ್ತಿಗಾಗಿಯೂ ಒಂದಷ್ಟು ನಿವೇಶನಗಳನ್ನು ಇಟ್ಟುಕೊಂಡು ಅಗತ್ಯ ಬಿದ್ದಾಗ ಮಾರಾಟ ಮಾಡಿ ಹಣ ಗಳಿಸಬಹುದು. ಇಲ್ಲವೇ ನಗರಾಭಿವೃದ್ಧಿ ಪ್ರಾಧಿಕಾರವೇ ನಿವೇಶನ ಮಾರಾಟ ಮಾಡಿ ನಮಗೆ ಹಣ ಕೊಡಬೇಕು ಎಂದರೆ ಅದಕ್ಕೂ ಅವಕಾಶ ಇದೆ ಎನ್ನುತ್ತಾರೆ ಹುಡಾ ಅಧಿಕಾರಿಗಳು.
ಹಾಗಾಗಿ ರೈತರಿಗೆ ಯಾವುದೇ ತೊಂದರೆ, ತಾಪತ್ರಯ ಇಲ್ಲದೇ ಮಹತ್ವದ ವಸತಿ ಯೋಜನೆಯಲ್ಲಿ ಭಾಗಿಯಾಗಬಹುದು. ಇದಕ್ಕಾಗಿ ಹಲವಾರು ಬಾರಿ ರೈತರೊಂದಿಗೆ ಸಭೆಗಳನ್ನು ನಡೆಸಲಾಗಿದೆ. ರೈತರು ಇದರ ಬಗ್ಗೆ ಆಸಕ್ತಿ ವಹಿಸಬೇಕು ಎಂಬುದು ಹುಡಾ ಆಶಯ.
ಹೊಸ ಪ್ರಯತ್ನ
ಹೊಸ ವಸತಿ ಯೋಜನೆ ಇಲ್ಲದೇ ಹುಡಾ ತನ್ನ ನಿಗದಿತ ಉದ್ದೇಶ ಈಡೇರಿಸುವಲ್ಲಿ ಹಿಂದೆ ಬಿದ್ದಿದೆ. ಕಚೇರಿಗೆ ಬರುವ ಖಾಸಗಿ ಲೇಔಟ್ಗಳಿಗೆ ಅನುಮತಿ ನೀಡುವುದು ಇದರ ಕೆಲಸವಾಗಿದೆ. ಈ ಮಧ್ಯೆ ದಶಕದಿಂದ ಅನೇಕ ಜನರು ಹುಡಾದ ಹೊಸ ಲೇಔಟ್ಗಳಲ್ಲಿ ನಿವೇಶನಕ್ಕಾಗಿ ಕಾಯುತ್ತಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಇದುವರೆಗೂ ಸುಮಾರು 34 ಲೇಔಟ್ ಅಭಿವೃದ್ಧಿ ಪಡಿಸಲಾಗಿದೆ. 1978ರಿಂದ ನಗರಾಭಿವೃದ್ಧಿ ಪ್ರಾಧಿಕಾರ ವಸತಿ ಯೋಜನೆಗಳನ್ನು ನಿರ್ಮಾಣ ಮಾಡುತ್ತ ಬಂದಿದೆ. ಧಾರವಾಡದ ಸಪ್ತಾಪುರದ ಆರು ಎಕರೆ ಲೇಔಟ್ಗೆ ಮೊದಲ ಬಾರಿ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಅವಳಿನಗರದ ವಿವಿಧೆಡೆ ರೈತರಿಂದ ಜಮೀನು ಪಡೆದುಕೊಂಡು 34 ಲೇಔಟ್ ನಿರ್ಮಾಣ ಮಾಡಿದೆ.
"
ಹುಡಾ ವಸತಿ ಯೋಜನೆಗಳಲ್ಲಿ ನಿವೇಶನ ಹೊಂದಬೇಕೆಂಬ ಬೇಡಿಕೆ ಬಹಳಷ್ಟಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಜಮೀನು ನೀಡುವ ರೈತರಿಗೆ ಶೇ. 50- 50 ಅನುಪಾತದಲ್ಲಿ ವಸತಿ ಯೋಜನೆ ರೂಪಿಸಲು ಅವಕಾಶ ನೀಡಿದೆ. ಈ ದಿಸೆಯಲ್ಲಿ ರೈತರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ.