ಮನೆ ಹಾನಿ ಪರಿಹಾರ ಸಾಲಕ್ಕೆ ಜಮೆ

ಮಹೇಶ ಪಟ್ಟಣಶೆಟ್ಟಿ
ಮಹೇಶ ಪಟ್ಟಣಶೆಟ್ಟಿ
Published on
ಮಂಜುನಾಥ ಎಸ್​. ಅಂಗಡಿ ಧಾರವಾಡ
ನೈಸರ್ಗಿಕ ವಿಕೋಪಗಳಿಂದಾಗುವ ಹಾನಿಯ ಪರಿಹಾರವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುವಂತಿಲ್ಲ. ಹೀಗಂತ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಪ್ರತಿ ಸಭೆಯಲ್ಲೂ ಬ್ಯಾಂಕ್​ ಅಧಿಕಾರಿಗಳು ಸೂಚಿಸುತ್ತಾರೆ. ಆದರೂ ರೈತರು ಮತ್ತು ಇತರ ಲಾನುಭವಿಗಳ ಖಾತೆಗೆ ಜಮೆಯಾಗುವ ಹಾನಿ ಪರಿಹಾರವನ್ನು ಸಾಲಕ್ಕೆ ಹೊಂದಾಣಿಕೆ ಮಾಡುವುದು ಮಾತ್ರ ನಿಂತಿಲ್ಲ. ತಾಲೂಕಿನ ಯಾದವಾಡ ಗ್ರಾಮದ ಕೆನರಾ ಬ್ಯಾಂಕ್​ ಇದಕ್ಕೆ ನಿದರ್ಶನ.
2023- 24ನೇ ಸಾಲಿನಲ್ಲಿ ಅತಿಯಾದ ಮಳೆಯಿಂದ ಯಾದವಾಡ ಗ್ರಾಮದ ಗಿರಿಜವ್ವ ಪಟ್ಟಣಶೆಟ್ಟಿ ಎಂಬುವರ ಮನೆ ಬಿದ್ದಿತ್ತು. ಕಂದಾಯ ಸೇರಿ ಇತರ ಇಲಾಖೆಗಳ ಜಂಟಿ ಪರಿಶೀಲನೆಯ ಬಳಿಕ 5 ಲಕ್ಷ ರೂಪಾಯಿ ಪರಿಹಾರಕ್ಕೆ ಅರ್ಹಗೊಳಿಸಲಾಗಿತ್ತು. ಮನೆ ನಿರ್ಮಾಣದ ಹಂತಗಳಿಗೆ ಅನುಗುಣವಾಗಿ 2 ಕಂತುಗಳ 2 ಲಕ್ಷ ರೂ. ಸಕಾಲಕ್ಕೆ ಜಮೆಯಾಯಿತು. ನಂತರದ ಕಂತುಗಳ ಹಣ ಜಮೆ ಆಗಲಿಲ್ಲ. ಈ ಮಧ್ಯೆ ಮನೆ ನಿರ್ಮಾಣ ಹಂತದಲ್ಲಿ ಗಿರಿಜವ್ವ ಪಟ್ಟಣಶೆಟ್ಟಿ ನಿಧನ ಹೊಂದಿದ್ದರು. ಅವರ ಮಗ ಮಹೇಶ ಪಟ್ಟಣಶೆಟ್ಟಿ ತಹಸೀಲ್ದಾರ್​ ಕಚೇರಿಗೆ ವಾರಸುದಾರ ಪ್ರಮಾಣಪತ್ರ ಸೇರಿ ಇತರ ದಾಖಲೆಗಳನ್ನು ನೀಡಿದ್ದರು. ಮನೆ ನಿರ್ಮಾಣ ಮುಂದುವರಿಸುವಂತೆ ಅಧಿಕಾರಿಗಳು ತಿಳಿಸಿದ್ದರು.
ರಾಜ್ಯ ಸರ್ಕಾರ ಇತ್ತೀಚೆಗೆ ಮನೆ ಹಾನಿ ಸಂತ್ರಸ್ತರ ಬಾಕಿ ಕಂತುಗಳ ಹಣ ಬಿಡುಗಡೆ ಮಾಡಿದೆ. ಮಹೇಶ ಪಟ್ಟಣಶೆಟ್ಟಿ ತಾಯಿ ನಿಧನರಾಗಿದ್ದರಿಂದ ತನ್ನ ವಾರಸಾ ಪ್ರಮಾಣಪತ್ರ ಮತ್ತು ಬ್ಯಾಂಕ್​ ಖಾತೆ ನೀಡಿದ್ದರು. ತಹಸೀಲ್ದಾರ್​ ಕಚೇರಿಯ ಸಿಬ್ಬಂದಿ ದಾಖಲೆಗಳನ್ನು ಸರಿಪಡಿಸದ ಕಾರಣ ಮೃತ ಗಿರಿಜಾ ಅವರ ಖಾತೆಗೆ ಪರಿಹಾರದ ಹಣ ಜಮೆಯಾಗಿದೆ.
ಮೃತ ಗಿರಿಜಾ ಯಾದವಾಡದ ಕೆನರಾ ಬ್ಯಾಂಕ್​ನಲ್ಲಿ ಬೆಳೆ ಸಾಲ ಪಡೆದಿದ್ದರು. ಕಾರಣಾಂತರಗಳಿಂದ ಸಾಲ ಮರುಪಾವತಿ ಮಾಡಿಲ್ಲ. ಅಲ್ಲದೆ, ಮೃತಳ ಬ್ಯಾಂಕ್​ ಖಾತೆಯನ್ನೂ ಬಂದ್​ ಮಾಡಿಸಿರಲಿಲ್ಲ. ತಹಸೀಲ್ದಾರ್​ ಕಚೇರಿ ಸಿಬ್ಬಂದಿ ಮೃತಳ ಖಾತೆಗೆ ಹಣ ಜಮೆ ಮಾಡಿದ್ದು, ಬ್ಯಾಂಕ್​ನವರು 1,45,552 ರೂ.ಗಳನ್ನು ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರೆ.
ಲಾನುಭವಿ ಕಚೇರಿಗೆ ಅಲೆದಾಟ:
ವರ್ಷಗಟ್ಟಲೇ ಬಾರದ ಮನೆ ಹಾನಿ ಪರಿಹಾರ ಜಮೆಯಾಗಿರುವುದು ಮಹೇಶ ಪಟ್ಟಣಶೆಟ್ಟಿಗೆ ಇತ್ತೀಚೆಗೆ ಗೊತ್ತಾಗಿದೆ. ಬ್ಯಾಂಕ್​ ಖಾತೆ ಬದಲಾವಣೆ ಮಾಡಿದ್ದರಿಂದ ತನ್ನ ಖಾತೆಯ ಪರಿಶೀಲಿಸಿದಾಗ ಹಣ ಜಮೆಯಾಗಿರಲಿಲ್ಲ. ತನ್ನ ತಾಯಿಯ ಖಾತೆ ನೋಡಿದಾಗ ಜಮೆಯಾಗಿದ್ದ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಕುರಿತು ಬ್ಯಾಂಕ್​ ಅಧಿಕಾರಿಗಳನ್ನು ಕೇಳಿದರೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಆತ ತಹಸೀಲ್ದಾರ್​ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುವಂತಾಗಿದೆ.
"

ತಹಸೀಲ್ದಾರ್​ ಕಚೇರಿಗೆ ದಾಖಲೆ ನೀಡಿದ್ದರೂ ನನ್ನ ಮೃತ ತಾಯಿಯ ಬ್ಯಾಂಕ್​ ಖಾತೆಗೆ ಹಣ ಜಮಾ ಮಾಡಿದ್ದಾರೆ. ಬ್ಯಾಂಕ್​ನವರು ಹಳೇ ಬೆಳೆ ಸಾಲಕ್ಕೆ ಪರಿಹಾರದ ಹಣ ಜಮೆ ಮಾಡಿಕೊಂಡಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿದ ಕುರಿತು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದೇನೆ.

— ಮಹೇಶ ಪಟ್ಟಣಶೆಟ್ಟಿ, ಮನೆ ಹಾನಿ ಫಲಾನುಭವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net