ಹುಬ್ಬಳ್ಳಿ: ಒತ್ತುವರಿ ಜಾಗದಿಂದ ಕಾನೂನು ಸಚಿವ ಎಚ್.ಕೆ. ಪಾಟೀಲ (h.k.patil) ಅವರನ್ನು ಹೊರಹಾಕುವಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ಮಾಡಿದೆ.
ಹುಬ್ಬಳ್ಳಿಯ ಪಿಂಟೋ ಸರ್ಕಲ್ ಬಳಿಯ 15ಗುಂಟೆ ಜಾಗವನ್ನು ಎಚ್.ಕೆ. ಪಾಟೀಲ ಅವರ ಪರಿವಾರ ಕಬಳಿಸಿದೆ ಎಂದು ಆರೋಪಿಸಿ ಜಕ್ಕವ್ವ ಕಂಪ್ಲಿ ಎಂಬ ಅಂಗವಿಕಲ ಮಹಿಳೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು.
ನ್ಯಾಯಮೂರ್ತಿ ಸಂಜಯಕುಮಾರ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ವಿಚಾರಣೆ ನಡೆಸಿದ್ದು, ಕೂಡಲೇ ಎಚ್.ಕೆ. ಪಾಟೀಲ ಅವರನ್ನು ಜಾಗದಿಂದ ಹೊರಹಾಕುವಂತೆ ಆದೇಶ ನೀಡಿದೆ.
ಕಳೆದ 60 ವರ್ಷದಿಂದ ಹುಬ್ಬಳ್ಳಿ ಸ್ಟೇಷನ್ ರಸ್ತೆಯ ಪಿಂಟೂ ಸರ್ಕಲ್‌ನಲ್ಲಿರುವ 15 ಗುಂಟೆ ಜಾಗವನ್ನು ಸಚಿವರು ಒತ್ತು ಮಾಡಿಕೊಂಡಿದ್ದರು. ಬಾಡಿಗೆ ಪಡೆದ ಸಿದ್ಲಿಂಗಪ್ಪ ಬುಳ್ಳಾ ಅವರ ಜಾಗದಲ್ಲಿ ಎಚ್.ಕೆ. ಪಾಟೀಲ ಪರಿವಾರ ಉಪ ಬಾಡಿಗೆದಾರರಾಗಿದ್ದರು.
ಸಿಟಿಎಸ್ ನಂ. 504/ಬಿ ಜಾಗವನ್ನು ತಮ್ಮದೆಂದು ಎಚ್.ಕೆ. ಪಾಟೀಲ ಕೋರ್ಟ್ ಮೊರೆ ಹೋಗಿದ್ದರು. ಕಾನೂನು ಸಚಿವರನ್ನು ಜಾಗದಿಂದ ಉಚ್ಚಾಟನೆ ಮಾಡುವಂತೆ ಜಕ್ಕವ್ವ ಕಂಪ್ಲಿ ಸುಪ್ರೀಂನಲ್ಲಿ ಅರ್ಜಿ ಗುಜರಾಯಿಸಿದ್ದರು.
ವಾದ-ವಿದಾ ಆಲಿಸಿದ ಸುಪ್ರೀಂಕೋರ್ಟ್, ಆಶ್ಚರ್ಯ ಮತ್ತು ದುಃಖ ವ್ಯಕ್ತಪಡಿಸಿ, ಬಾಡಿಗೆದಾರರನ್ನೇ ಹೊರ ಹಾಕಿದ ಮೇಲೆ ಉಪ ಬಾಡಿಗೆದಾರರು ಹೊರ ಹೋಗಬೇಕೆಂದು ಆದೇಶಿಸಿದೆ.
ಜಕ್ಕವ್ವ ಕಂಪ್ಲಿ ಪರ ವಕೀಲರಾದ ಡಿ.ಎಸ್. ನಾಯ್ಡು, ಹಿರಿಯ ವಕೀಲರಾದ ಚಿನ್ಮಯ ದೇಶಪಾಂಡೆ ಹಾಗೂ ಅಭಿಷೇಕ ಕಲ್ಲೇದ ವಾದ ಮಂಡಿಸಿದ್ದರು.