hindu ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಗುರುವಾರ ಏರ್ಪಡಿಸಿದ್ದ ಅಯ್ಯಪ್ಪ ಮಹಾಸಂಗಮದಲ್ಲಿ ಪ್ರಮೋದ ಮುತಾಲಿಕ್, ಡಾ. ವಿಶ್ವಸಂತೋಷ ಭಾರತಿ ಸ್ವಾಮೀಜಿ, ಡಾ. ವಿ.ಎಸ್.ವಿ. ಪ್ರಸಾದ, ಮುತ್ತುಸ್ವಾಮಿ, ಆನಂದ ಗುರುಸ್ವಾಮಿ, ಮೋಹನ ಗುರುಸ್ವಾಮಿ, ಶಿವಪ್ಪ, ಇತರರು ಇದ್ದರು.
ಹುಬ್ಬಳ್ಳಿ: hindu ಭಾರತವು ದೇವಸ್ಥಾನಗಳು, ಆಧ್ಯಾತ್ಮಿಕ ಹಾಗೂ ಭಕ್ತಿ ಭಾವನೆಗಳ ದೇಶವಾಗಿದೆ. ಇಲ್ಲಿ ಹಿಂದು ಎಂಬುದು ವೈಜ್ಞಾನಿಕ, ಶಾಸ್ತ್ರೋಕ್ತ ಧರ್ಮವಾಗಿದೆ. ಈ ಧರ್ಮದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ, ಸೌಭಾಗ್ಯ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ನಗರದ ಭೈರಿದೇವರಕೊಪ್ಪ ಎಪಿಎಂಸಿ ಎರಡನೇ ಗೇಟ್ ಬಳಿ ಗುರುವಾರ ಏರ್ಪಡಿಸಿದ್ದ ಮುತ್ತುಸ್ವಾಮಿ ಅವರ 18ನೇ ವರ್ಷದ ಸಂಭ್ರಮ ಹಾಗೂ ಅಯ್ಯಪ್ಪ ಮಹಾಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಶ್ರೇಷ್ಠ ಧರ್ಮವು ಸಾವಿರಾರು ವರ್ಷದಿಂದ ನಿರಂತರ ನಡೆದುಕೊಂಡು ಬಂದಿದೆ, ಮುಂದೆಯೂ ನಡೆಯಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರ ಅಲಕ್ಷ್ಯ ಹಾಗೂ ಅಸಂಘಟನೆಯಿಂದಾಗಿ ಧಾರ್ಮಿಕತೆ ಮೇಲೆ ಆಘಾತಗಳು ಉಂಟಾಗುತ್ತಿವೆ. ಶಿವ, ರಾಮ, ಕೃಷ್ಣ ಹೀಗೆ ಎಲ್ಲರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ನಮ್ಮ ದೇವರನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಇದರ ವಿರುದ್ಧ ಹಿಂದುಗಳು ಒಟ್ಟಾಗಿ ಧ್ವನಿ ಎತ್ತಬೇಕು. ದೇವರ ದುಡ್ಡು ದೇವಸ್ಥಾನ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಕೋರ್ಟ್ ಸಹ ಹೇಳಿದೆ. ಈ ದೇವಸ್ಥಾನವನ್ನು ಕೇಂದ್ರಾಡಳಿತ ದೇವಸ್ಥಾನ ಮಾಡಿ ಎಂದು ಪ್ರಧಾನಿಗೆ ಎಲ್ಲರೂ ಒಟ್ಟಾಗಿ ಕೇಳೋಣ ಎಂದು ಮುತಾಲಿಕ್ ಹೇಳಿದರು.
ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಹಿಂದು ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೆಲವು ಮತಗಳ ಪ್ರಭಾವದಿಂದ ಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ಮತ್ತೆ ಪುನರುಜ್ಜೀವನ ಗೊಳ್ಳುತ್ತಿದೆ. ಎಲ್ಲ ಧರ್ಮಗಳಿಗೆ ಗೌರವ ಕೊಡುವುದು ಹಿಂದು ಧರ್ಮದ ವಿಶಿಷ್ಟತೆಯಾಗಿದೆ. ಇಡೀ ಪ್ರಪಂಚವೇ ಇದನ್ನು ಮನಗಂಡಿದೆ ಎಂದರು.
ತೀರ್ಥಹಳ್ಳಿ ಶ್ರೀಹರಿಹರಾತ್ಮಜ ಪೀಠದ ಡಾ. ವಿಶ್ವಸಂತೋಷ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಆನಂದ ಗುರುಸ್ವಾಮಿ, ಗೋಕುಲದ ಮೋಹನ ಗುರುಸ್ವಾಮಿ, ಸಂಪತ್ ಕುಮಾರ ಗುರುಸ್ವಾಮಿ, ನಾರಾಯಣ ಜಾಧವ ಗುರುಸ್ವಾಮಿ, ಮಣಿಸ್ವಾಮಿ, ಬಸವರಾಜ ಮಾಯಕಾರ, ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಶರಣಪ್ಪ ಕೊಟಗಿ, ಇತರರು ಇದ್ದರು.
ಶಿವಪುತ್ರ ಮಠಪತಿ ಸ್ವಾಗತಿಸಿದರು. ಭಾರತೀಯ ಅಯ್ಯಪ್ಪ ಸಂಘದ ಶಿವಾನಂದ ಪ್ರಾಸ್ತಾವಿಕ ಮಾತನಾಡಿದರು.