ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸಲಿ: Guru Vandana

ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಶತಮಾನ ಕಂಡ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಭಾನುವಾರ 1994ರಿಂದ 2004 ರವರೆಗಿನ ಬ್ಯಾಚ್ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಲಾಯಿತು. ಡಾ.ಲಿಂಗರಾಜ ಅಂಗಡಿ, ಅಡಿವೆಪ್ಪ ಗಾಣಿಗೇರ, ಬಿಇಒ ವಿ.ಎನ್. ಕಂಬೋಗಿ ಇತರರಿದ್ದರು.
ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಶತಮಾನ ಕಂಡ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಭಾನುವಾರ 1994ರಿಂದ 2004 ರವರೆಗಿನ ಬ್ಯಾಚ್ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಲಾಯಿತು. ಡಾ.ಲಿಂಗರಾಜ ಅಂಗಡಿ, ಅಡಿವೆಪ್ಪ ಗಾಣಿಗೇರ, ಬಿಇಒ ವಿ.ಎನ್. ಕಂಬೋಗಿ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ನವಲಗುಂದ

ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬ ಭ್ರಮೆಯಲ್ಲಿ ಪಾಲಕರು ಇದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕೆಂಬ ಸುಗ್ರಿವಾಜ್ಞೆ ಹೊರಡಿಸಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.
ತಾಲೂಕಿನ ಶಿರಕೋಳ ಗ್ರಾಮದ ಶತಮಾನ ಕಂಡ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಭಾನುವಾರ 1994ರಿಂದ 2004 ರವರೆಗಿನ ಬ್ಯಾಚ್ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕೆಂಬ ನಿಯಮವಿದ್ದರೂ ಅದನ್ನು ಜಾರಿಗೊಳಿಸಲು ಸರ್ಕಾರಗಳು ಅಸಡ್ಡೆ ತೋರುತ್ತಿವೆ. ಮಾತೃ ಭಾಷೆ ಮಾಧ್ಯಮದಲ್ಲಿ ಓದುವುದರಿಂದ ಸಂವಹನ ಶಕ್ತಿ, ಸೃಜನಶೀಲತೆ, ಆತ್ಮ ವಿಶ್ವಾಸ ಮತ್ತು ವಿಷಯದ ತಿಳಿವಳಿಕೆ ಹೆಚ್ಚುತ್ತದೆ ಎಂದರು.
ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಶಿಕ್ಷಕರಿಗೆ ಬಹಳ ಉನ್ನತ ಗೌರವವಿದೆ. ತಾಯಿಯು ಮಗುವಿಗೆ ಮೊದಲ ಗುರುವಾದರೆ, ಮಗುವಿನ ಭವಿಷ್ಯ, ವ್ಯಕ್ತಿತ್ವ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಪ್ರಮುಖ. ಜ್ಞಾನದ ಬೆಳಕನ್ನು ನೀಡಿ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಮಕ್ಕಳಲ್ಲಿ ಆದರ್ಶ ಗುಣಗಳನ್ನು ಬಿತ್ತಿ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರೇಪಿಸುವವನೇ ಶಿಕ್ಷಕ ಎಂದು ಹೇಳಿದರು.
ವ್ಯಕ್ತಿತ್ವ ನಿರ್ಮಾಣ ಕೇವಲ ಪಠ್ಯಪುಸ್ತಕದ ಜ್ಞಾನದಿಂದ ದೊರೆಯಲಾರದು. ಅದರ ಜತೆಗೆ ಶಿಕ್ಷಕನು ವಿದ್ಯಾರ್ಥಿಗೆ ಅಕ್ಷರ ಜ್ಞಾನ ನೀಡುವುದಲ್ಲದೇ ಆತನಲ್ಲಿ ನೈತಿಕ ಮೌಲ್ಯಗಳನ್ನು, ಕರುಣೆ, ದಯೆ, ಕರುಣೆ ಮುಂತಾದ ಉತ್ತಮ ಸಂಸ್ಕಾರಗಳನ್ನು ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾನೆ. ವಿದ್ಯಾರ್ಥಿಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಅವರ ಸೇವೆ, ತ್ಯಾಗ, ಸಮರ್ಪಣಾ ಭಾವಕ್ಕೆ ಬೆಲೆ ಕಟ್ಟಲಾಗದು ಎಂದರು.
ನಿವೃತ್ತ ಮುಖ್ಯಗುರುಮಾತೆ ಲೂಸಿ ಸಾಲ್ಡಾನಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಡಿವೆಪ್ಪ ಗಾಣಿಗೇರ, ಬಿಇಒ ವಿ.ಎನ್. ಕಂಬೋಗಿ, ಆರ್.ಬಿ. ಮುರನಾಳ, ಎಚ್.ಬಿ. ಗೋಕುಲ, ಪ್ರೇಮಾ ಉಕ್ಕಲಿ ಹಾಗೂ ಗುರುವಂದನೆ ಸಮಿತಿಯ ಡಾ.ಬಸವರಾಜ ಅಂಗಡಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶಿಕ್ಷಕರನ್ನು ಸಾರೋಟದಲ್ಲಿ ಮೆರವಣಿಗೆ ಮಾಡಿ ವೇದಿಕೆಗೆ ಕರೆತಂದರು. ಅಗಲಿದ ಶಿಕ್ಷಕರ ನೆನಪಿನಲಿ ಸಸಿ ನೆಡಲಾಯಿತು.
ಕಲ್ಲಮ್ಮ ಯಕ್ಕುಂಡಿ ಪ್ರಾರ್ಥಿಸಿದರು. ಸದು ಶಲವಡಿ ಸ್ವಾಗತಿಸಿದರು. ನಾಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಕುಂಬಾರ ವಂದಿಸಿದರು. ಪ್ರಮೋದ ರಡ್ಡೇರ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net