gunjan arya ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಉಪ ವಿಭಾಗ ಆರಂಭ
gunjan arya ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ
Published on:
Copied
Follow Us
ಹುಬ್ಬಳ್ಳಿ: ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಈವರೆಗೆ ಒಂದೇ ಪೊಲೀಸ್
gunjan arya
ಉಪವಿಭಾಗವಿತ್ತು. ಇದೀಗ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಉಪವಿಭಾಗವನ್ನು ಹೊಸದಾಗಿ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು.
ಇಲ್ಲಿಯ ಗದಗ ರಸ್ತೆಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೂತನ ಡಿವೈಎಸ್‌ಪಿ ಕಚೇರಿಯನ್ನು ಶನಿವಾರ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು,
ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಕುಂದಗೋಳ ಹಾಗೂ ಗುಡಗೇರಿ ಠಾಣೆಗಳು ಹೊಸ ಉಪವಿಭಾಗದ ವ್ಯಾಪ್ತಿಗೆ ಬರುತ್ತವೆ. ಧಾರವಾಡ ಗ್ರಾಮೀಣ ಉಪವಿಭಾಗದಲ್ಲಿ ಕಲಘಟಗಿ, ಧಾರವಾಡ ಗ್ರಾಮೀಣ ಹಾಗೂ ಗರಗ ಠಾಣೆಗಳು ಮುಂದುವರಿಯಲಿವೆ. ಆಡಳಿತ ವಿಕೇಂದ್ರೀಕರಣದಿಂದ ಜನರಿಗೆ ಶೀಘ್ರ ಪೊಲೀಸ್‌ಸೇವೆ ದೊರೆಯಲಿದೆ. ಗುಡಗೇರಿ ಭಾಗದ ಜನರು ಧಾರವಾಡಕ್ಕೆ ತೆರಳುವ ಬದಲು ಹುಬ್ಬಳ್ಳಿಯ ಉಪವಿಭಾಗ ಕಚೇರಿಗೆ ಬಂದು ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದರು.
ಅಕ್ರಮ ಚಟುವಟಿಕೆಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯಲಿದೆ. ಮಟ್ಕಾ, ಜೂಜಾಟ, ಗಾಂಜಾ ಹಾಗೂ ಅಕ್ರಮ ಮದ್ಯ ಮಾರಾಟ ಸೇರಿದಂತೆ ಸಂಘಟಿತ ಅಪರಾಧಗಳ ವಿರುದ್ಧ ಜಿಲ್ಲೆಯಲ್ಲಿ ಪ್ರತಿ ವಾರ ಸುಮಾರು 20ರಿಂದ 25 ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.
ಆ. 26ರಂದು ಈದ್ ಮಿಲಾದ್ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ವಿವಿಧ ತಾಲೂಕು ಹಾಗೂ ಠಾಣೆಗಳ ಮುಖಂಡರು ಡಿಜೆ ಬಳಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈದ್ ಮಿಲಾದ್ ಬಂದೋಬಸ್ತ್‌ಗೆ ಎರಡು ಕೆಎಸ್‌ಆರ್‌ಪಿ ತುಕಡಿಗಳು ಹೆಚ್ಚುವರಿಯಾಗಿ ಬರಲಿವೆ ಎಂದರು.
ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಗಣೇಶೋತ್ಸವ ಆಯೋಜಕರು, ಏಕಗವಾಕ್ಷಿ ಮೂಲಕ ಅಗತ್ಯ ಅನುಮತಿ ಪಡೆಯಬಹುದು. ಸುಪ್ರೀಂಕೋರ್ಟ್ ಆದೇಶ ಹಾಗೂ ನಿಯಮಾವಳಿಗಳ ಪ್ರಕಾರ ರಾತ್ರಿ 10ರವರೆಗೆ ಡಿಜೆ ಬಳಕೆಗೆ ಅನುಮತಿಸಲಾಗುವುದು ಎಂದರು.
ಡಿವೈಎಸ್‌ಪಿಯಾಗಿ ಅಧಿಕಾರವಹಿಸಿಕೊಂಡಿರುವ ಶಿವಾನಂದ ಕಟಗಿ ಅವರಿಗೆ ಎಸ್‌ಪಿ ಗುಂಜನ್ ಆರ್ಯ ಹೂಗುಚ್ಛ ನೀಡಿ ಶುಭಕೋರಿದರು.
ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಮುರುಗೇಶ ಚೆನ್ನಣ್ಣವರ, ಸಮೀರ ಮುಲ್ಲಾ ಇತರರಿದ್ದರು.