

ಪ್ರಮುಖ ಮುಖ್ಯಾಂಶಗಳು
ಮಂಜುನಾಥ ಗದಗಿನ ಹುಬ್ಬಳ್ಳಿ
ಸಾಮಾನ್ಯವಾಗಿ ಬರಗಾಲ ಎಂದರೆ ಮಳೆಯಾಗದೆ, ನೀರಿಲ್ಲದೆ, ಒಣ ಹವೆಯಿಂದ ಬೆಳೆಗಳು ಸಂಪೂರ್ಣ ಒಣಗುತ್ತವೆ. ಆದರೆ ‘ಹಸಿ ಬರ’ ಎಂಬುದು ಇದಕ್ಕಿಂತ ಭಿನ್ನವಾಗಿದೆ. ಮಳೆಗಾಲದ ಆರಂಭದಲ್ಲಿ ಅಥವಾ ಮುಂಗಾರಿನಲ್ಲಿ ಅತಿ ಹೆಚ್ಚು ಮಳೆಯಾಗಿ ಹೊಲಗಳಲ್ಲಿ ಬೆಳೆಗಳು ಸೊಂಪಾಗಿ ಬೆಳೆದು ನಿಂತಿರುತ್ತವೆ (ಹಸಿಯಾಗಿರುತ್ತವೆ). ಆದರೆ ಬೆಳೆ ಕಟಾವಿಗೆ ಬರುವ ಅಥವಾ ಕಾಳು ಕಟ್ಟುವ ನಿರ್ಣಾಯಕ ಹಂತದಲ್ಲಿ ಬೆಳೆಗೆ ಬೇಕಾದಷ್ಟು ಮಳೆಯಾಗದೆ ಇರುವುದು, ನಿರಂತರ ಮಳೆ, ಅತಿವೃಷ್ಟಿ, ಇಲ್ಲವೇ ಹಠಾತ್ ಮಳೆ ನಿಂತು ಹೋಗುವುದು ಅಥವಾ ತೀವ್ರವಾದ ತೇವಾಂಶದ ಕೊರತೆಯಿಂದ ಹೊಲದಲ್ಲಿ ಬೆಳೆ ಇದ್ದರೂ ನಿರೀಕ್ಷಿತ ಸಲು (ಇಳುವರಿ) ಬರದೆ ಇರುವುದು ಹಸಿ ಬರ ಸೂಚಿಸ್ತುತದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸದ್ಯ ಹಸಿ ಬರ ರೈತರನ್ನು ಹೈರಾಣಾಗಿಸಿದೆ.
ಕಳೆದ ಎರಡು ದಶಕಗಳಲ್ಲಿ 2002, 2003, 2004, 2006, 2011, 2012, 2014, 2015-16, 2017, 2018, 2023 ಬರ ಬಿದ್ದಿದೆ. ಇತ್ತೀಚಿನ ವರ್ಷಗಳಲ್ಲಿ ಅಂದರೆ 2023 ಮತ್ತು 2025ರ ಮುಂಗಾರಿನ ಅಸಮರ್ಪಕ ಹಂಚಿಕೆಯಿಂದಾಗಿ ರಾಜ್ಯದಲ್ಲಿ ಹಸಿ ಬರದ ಪರಿಸ್ಥಿತಿ ಉಂಟಾಗುತ್ತಿದೆ. ರಾಜ್ಯದಲ್ಲಿ ಜೂನ್‌ನಿಂದ ಆಗಸ್ಟ್ 9ರವರೆಗೂ ಶೇ.21ರಷ್ಟು ಮಳೆ ಕೊರತೆಯಾಗಿದೆ. ಬೆಳಗಾವಿಯಲ್ಲಿ ಶೇ.22ರಷ್ಟು ಅಧಿಕಯಾದರೆ, ವಿಜಯನಗರದಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ.
ಧಾರವಾಡ ಜಿಲ್ಲೆಯಲ್ಲಿ 2.85 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು. ಅದರಲ್ಲಿ ಶೇ.50ಕ್ಕಿಂತ ಅಧಿಕವಾಗಿ ಬೆಳೆ ಹಾನಿಯಾಗಿದೆ ಎಂಬ ಅಂದಾಜಿದೆ. ಧಾರವಾಡ, ಹುಬ್ಬಳ್ಳಿ, ನವಲಗುಂದ, ಕಲಘಟಗಿ, ಕುಂದಗೋಳ, ಅಳ್ನಾವರ, ಅಣ್ಣಿಗೇರಿಯಲ್ಲಿ ಹಸಿ ಬರ ಆವರಿಸಿ ಸಲು ನಾಶವಾಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ 40 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಅದರಲ್ಲಿ 36 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಆದರೆ, ಮಳೆ ಹಂಚಿಕೆ ಸರಿಯಾಗಿ ಆಗದೆ ಇರುವ ಕಾರಣಕ್ಕೆ 20-25 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅದರಲ್ಲಿ ಹೆಸರು ಸಂಪೂರ್ಣ ನಲುಗಿ ಹೋಗಿದೆ. ಹತ್ತಿ, ಉದ್ದು, ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಮಳೆ ಕೊರತೆಯಿಂದ ಶಿರಗುಪ್ಪಿಯಲ್ಲಿ ಬಿತ್ತನೆ ಆಗಿಲ್ಲ ಎಂದು ಕೃಷಿ ಅಕಾರಿಗಳು ಹೇಳುತ್ತಿದ್ದಾರೆ. ಇನ್ನೂ ರಾಜ್ಯದ ಕಲಬುರ್ಗಿ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಇತರ ಕಡೆಗಳಲ್ಲಿ ಹಸಿ ಬರ ಉಂಟಾಗಿದ್ದು, ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ.
ಬತ್ತಕ್ಕೆ ಅಧಿಕ ನೀರು ಬೇಕಾಗಿರುವ ಕಾರಣಕ್ಕೆ ಮಳೆ ಕೊರತೆಯಿಂದ ರಾಜ್ಯದಲ್ಲಿ ಬತ್ತ ಬಿತ್ತನೆ ಕುಂಠಿತವಾಗಿದೆ. ರಾಜ್ಯದಲ್ಲಿ ಪ್ರತಿವರ್ಷ ಅಂದಾಜು 10 ಲಕ್ಷ ಹೆಕ್ಟೇರ್ ಬತ್ತ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈ ಸಾರಿ 2 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ ಎನ್ನಲಾಗುತ್ತಿದೆ. ಇದರಿಂದ ಅಧಿಕ ನೀರಿನಡಿ ಬೆಳೆಯುವ ಬೆಳೆಗೆ ರೈತರು ಮುಂದಾದರೂ ಅದಕ್ಕೂ ಮಳೆ ಹಂಚಿಕೆ ಸರಿಯಾಗಿ ಆಗದೆ, ಬೆಳೆ ಇದ್ದರೂ ಫಸಲು ಬರುವ ಹಂತಕ್ಕೆ ತಲುಪಿಲ್ಲ.
ಬೆಳೆ ಪರಿಹಾರಕ್ಕೆ ಆಗ್ರಹ
ಹುಬ್ಬಳ್ಳಿ ತಾಲೂಕಿನಲ್ಲಿ 36 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಅದರಲ್ಲಿ 20-25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇನ್ನಷ್ಟು ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ವರದಿ ನೀಡಲಾಗುವುದು.
— ಸೋಮಲಿಂಗಪ್ಪ ಸಹಾಯಕ ಕೃಷಿ ನಿದೇರ್ಶಕ ಹುಬ್ಬಳ್ಳಿ