

ಹುಬ್ಬಳ್ಳಿ: ಜೀವನದಲ್ಲಿ ಯಶಸ್ಸು ಸಾಧಿಸಲು ಯಾವುದೇ ಅಡ್ಡದಾರಿಗಳಿಲ್ಲ. ಸಾಧನೆಯ ಶಿಖರವೇರಲು ನಿರಂತರ ಪರಿಶ್ರಮ, ಶಿಸ್ತು ಹಾಗೂ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮನೋಭಾವ ಅಗತ್ಯ ಎಂದು ಶಾಸಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟರು.
ನಗರದ ಬ್ರೈಟ್ ಬಿಜಿನೆಸ್ ಸ್ಕೂಲ್ ನಲ್ಲಿ ನೂತನ ಎಂಬಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉಡಾನ್- 2ಕೆ26 ಸ್ವಾಗತ ಹಾಗೂ ದೀಕ್ಷಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಕೇವಲ ಬುದ್ಧಿವಂತಿಕೆ ಇದ್ದರೆ ಸಾಲದು, ಇತರರೊಂದಿಗೆ ಬೆರೆಯುವುದರಿಂದ ಹಾಗೂ ಅವರ ಅನುಭವಗಳನ್ನು ಗಮನಿಸುವುದರಿಂದ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. ಇದಕ್ಕಾಗಿ ನಮ್ಮ ಕಣ್ಣು ಮತ್ತು ಕಿವಿಗಳನ್ನು ಸದಾ ತೆರೆದಿಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದರು.
ಮುಂಬೈನ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಘಣಾಟೆ ಅವರು ಮಾತನಾಡಿ, ನೀವು ಭವಿಷ್ಯದ ಮ್ಯಾನೇಜರ್ಗಳು ಹಾಗೂ ನಾಯಕರು. ನಿಮ್ಮ ವೃತ್ತೀಜಿವನವನ್ನು ರೂಪಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಮುಂದಿನ ಎರಡು ವರ್ಷಗಳು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿವೆ. ಈ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ಕಠಿಣ ಪರಿಶ್ರಮದಿಂದ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಬ್ರೈಟ್ ಬಿಜಿನೆಸ್ ಸ್ಕೂಲ್ ನಿರ್ದೇಶಕ ಡಾ. ಪ್ರಸಾದ ರೂಡಗಿ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣ ಮತ್ತು ವೃತ್ತೀಜಿವನವು ಮಹತ್ವದ ತಿರುವಿನಲ್ಲಿದೆ. ಸ್ಪರ್ಧಾತ್ಮಕ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಲು ಎಂಬಿಎ ವಿದ್ಯಾರ್ಥಿಗಳು ಅತ್ಯುತ್ತಮ ಪ್ರಯತ್ನ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರೈಟ್ ಬಿಜಿನೆಸ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ ಮಾತನಾಡಿ, ಬೋಧಕ ವರ್ಗವು ವಿದ್ಯಾರ್ಥಿಗಳನ್ನು ಕಾರ್ಪೊರೇಟ್ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುವ ನಿರಂತರ ಪ್ರಯತ್ನ ಮಾಡುತ್ತಾರೆ. ಪೋಷಕರು ಈ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಇತ್ತೀಚೆಗೆ ಉದ್ಯೋಗಾವಕಾಶ ಪಡೆದ ಮೂವರು ಎಂಬಿಎ ವಿದ್ಯಾರ್ಥಿಗಳು ಹಾಗೂ ಇಂಟರ್ನಶಿಪ್ ಯೋಜನೆ ಪೂರ್ಣಗೊಳಿಸಿದ 12 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಟ್ರಸ್ಟ್ ಸದಸ್ಯರಾದ ಅನಿಲ್ ಲಿಂಗಶೆಟ್ಟರ್, ವಿದ್ಯಾರ್ಥಿಗಳು, ಪೋಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾಶಿಶ್ ಮತ್ತು ಅರುಂಧತಿ ಪ್ರಾರ್ಥನೆ ಹಾಡಿದರು. ಆದಿತ್ಯ ತಿರ್ಲಾಪುರ ಮತ್ತು ರಕ್ಷಿತಾ ತಿರ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ನಿತಿನ್ಚಂದ್ರ ಮಾನೆ ವಂದಿಸಿದರು.