30ರಿಂದ ಚರ್ಮರೋಗ ತಜ್ಞರ ಮಹಾಸಮ್ಮೇಳನ

ಹುಬ್ಬಳ್ಳಿಯಲ್ಲಿ ಮೊದಲ ಬಾರಿ ಆಯೋಜನೆ
ಹುಬ್ಬಳ್ಳಿಯಲ್ಲಿ ಚರ್ಮರೋಗ ತಜ್ಞರ ಮಹಾಸಮ್ಮೇಳನದ ಬಗ್ಗೆ ಮಾಹಿತಿ ನೀಡಿದ ಡಾ. ರಾವೇಂದ್ರ ತೋಖಾನೆ, ಡಾ. ರವಿ. ರಾಥೋಡ, ಡಾ. ಚನ್ನಬಸಪ್ಪ ಮೆಂಡಗುದ್ಲಿ, ಡಾ. ಚಂದ್ರಮೋಹನ ಕೆ.
ಹುಬ್ಬಳ್ಳಿಯಲ್ಲಿ ಚರ್ಮರೋಗ ತಜ್ಞರ ಮಹಾಸಮ್ಮೇಳನದ ಬಗ್ಗೆ ಮಾಹಿತಿ ನೀಡಿದ ಡಾ. ರಾವೇಂದ್ರ ತೋಖಾನೆ, ಡಾ. ರವಿ. ರಾಥೋಡ, ಡಾ. ಚನ್ನಬಸಪ್ಪ ಮೆಂಡಗುದ್ಲಿ, ಡಾ. ಚಂದ್ರಮೋಹನ ಕೆ.
Published on: 

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಚರ್ಮರೋಗ ತಜ್ಞರ ಸಂಘ, ಎಸ್​ಡಿಎಂ ಮೆಡಿಕಲ್​ ಕಾಲೇಜ್​, ಕೆಎಂಸಿಆರ್​ಐ ಹಾಗೂ ಇಂಡಿಯನ್​ ಅಸೋಸಿಯೇಶನ್​ ಆಫ್ ಡೆರ್ಮಟೊಲಾಜಿಸ್ಟ್​, ವೆನೆರೊಲಾಜಿಸ್ಟ್​ ಹಾಗೂ ಲೆಪ್ರೊಲಾಜಿಸ್ಟ್​ ಕರ್ನಾಟಕ ಶಾಖೆಯ ವತಿಯಿಂದ "ಡೆರ್ಮಝೊನ್​ ಸೌತ್​ ಕ್ಯೂಟಿಕಾನ್​ ಕೆಎನ್​-2026' ದಕ್ಷಿಣ ವಲಯ ಚರ್ಮರೋಗ ತಜ್ಞರ ಮಹಾಸಮ್ಮೇಳನವನ್ನು ಅ. 30ರಿಂದ ಮೂರು ದಿನಗಳ ವರೆಗೆ ಏರ್ಪಡಿಸಲಾಗಿದೆ ಎಂದು ಸಂಘಟನಾ ಕಾರ್ಯಾಧ್ಯಕ್ಷ ಡಾ. ರಾವೇಂದ್ರ ತೋಖಾನೆ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ಸತ್ತೂರ ಎಸ್​ಡಿಎಂ ಮೆಡಿಕಲ್​ ಕಾಲೇಜಿನಲ್ಲಿ ಮೊದಲ ಬಾರಿ ನಡೆಯುವ ಸಮ್ಮೇಳನವನ್ನು ಶುಕ್ರವಾರ ಮಧ್ಯಾಹ್ನ 12ಕ್ಕೆ ಉದ್ಘಾಟಿಸಲಾಗುವುದು. ತುಮಕೂರಿನ ಡಾ. ಎಸ್​. ಸಚ್ಚಿದಾನಂದ, ಡಾ. ಸವಿತಾ, ಡಾ. ಅನೀಶ ಎಸ್​. ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಕೇರಳ, ತಮಿಳಾನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಪುದುಚೇರಿ ಸೇರಿ ವಿವಿಧೆಡೆಯ 700ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವರು ಎಂದರು.

ಎಸ್​ಡಿಎಂ ಮೆಡಿಕಲ್​ ಕಾಲೇಜ್​ ಬಳಿಯ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಅಕ್ಟೋಬರ್​ 31ರಂದು ಬೆಳಗ್ಗೆ 9ರಿಂದ ವಿವಿಧ ಗೋಷ್ಠಿಗಳು ಆರಂಭವಾಗಲಿವೆ. ಎಸ್​ಡಿಎಂ ವಿಶ್ವವಿದ್ಯಾಲಯ ಕುಲಪತಿ ಡಾ. ನಿರಂಜನಕುಮಾರ ಉದ್ಘಾಟಿಸುವರು. ಡಾ. ಸೀತಾರಾಮ ಕೆ.ಎ. ಅಧ್ಯಕ್ಷತೆ ವಹಿಸುವರು.

ವೈದ್ಯಕಿಯ ಅನುಭವ, ಸಂಶೋಧನೆ, ಚರ್ಮರೋಗ ಚಿಕಿತ್ಸಾ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಕುರಿತು ತಜ್ಞರು ಅಭಿಪ್ರಾಯ ಹಂಚಿಕೊಳ್ಳುವರು. ವೈಜ್ಞಾನಿಕ ಉಪನ್ಯಾಸಗಳು, ಸಂವಾದಗಳು, ಪ್ರಾಯೋಗಿಕ ಅನುಭವಗಳ ವಿನಿಮಯ ಹಾಗೂ ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.

ಇತ್ತೀಚೆಗೆ ಚರ್ಮರೋಗ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಆಗಿವೆ. ಅದರಲ್ಲೂ ಸೌಂದರ್ಯವರ್ಧಕ ಚಿಕಿತ್ಸೆಗೆ ಒತ್ತು ನೀಡುತ್ತಿದ್ದಾರೆ. ಹಾಗಾಗಿಯೇ ಚರ್ಮ ಕಾಯಿಲೆ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆಗಳು ಹುಟ್ಟಿಕೊಳ್ಳುತ್ತಿವೆ. ಸಾಮಾನ್ಯ ಜನರು ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ಪಡೆದರೆ ಹೆಚ್ಚಿನ ವೆಚ್ಚ ತಗಲುವುದಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವು ಸಂದಿಂದ ನಡೆಯಲಿದೆ ಎಂದು ಉತ್ತರಿಸಿದರು.

ಸಂಘಟನಾ ಸಮಿತಿ ಖಜಾಂಚಿ ಡಾ. ಚನ್ನಬಸಪ್ಪ ಮೆಂಡಗುದ್ಲಿ ಮಾತನಾಡಿ, ಡರ್ಮಝೊನ್​ ಸೌತ್​ ಕ್ಯೂಟಿಕಾನ್​ ಕೆಎನ್​ ಸಮ್ಮೇಳನವು ಚರ್ಮರೋಗ ತಜ್ಞರ ನಡುವೆ ವೃತ್ತಿಪರ ಬಾಂಧವ್ಯ ಬಲಪಡಿಸುವ ಜತೆಗೆ ವೈದ್ಯಕಿಯ ಜ್ಞಾನ, ಸಂಶೋಧನೆಯ ವಿನಿಮಯಕ್ಕೆ ಮಹತ್ವದ ವೇದಿಕೆಯಾಗಲಿದೆ. ಹುಬ್ಬಳ್ಳಿ ಧಾರವಾಡದ ವೈದ್ಯಕಿಯ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣ ಎಂದು ಹೇಳಿದರು.

ಡಾ. ರವಿ. ರಾಥೋಡ, ಡಾ. ಚಂದ್ರಮೋಹನ ಕೆ. ಇತರರು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net