BENNE HALLA: ಬೆಣ್ಣೆ ಹಳ್ಳ ಪ್ರವಾಹ ತಡೆಗೆ ಸರ್ಕಾರ ದಿಟ್ಟ ಕ್ರಮ

ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಣ್ಣಿಹಳ್ಳದ ಪ್ರವಾಹ ತಡೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್  ವೀಕ್ಷಿಸಿದರು. ಶಾಸಕ ಎನ್ ಎಚ್. ಕೋನರಡ್ಡಿ, ರಾಘವೇಂದ್ರ ಜಾಲಗಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ, ಇತರರು ಇದ್ದರು.
ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಣ್ಣಿಹಳ್ಳದ ಪ್ರವಾಹ ತಡೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್ ವೀಕ್ಷಿಸಿದರು. ಶಾಸಕ ಎನ್ ಎಚ್. ಕೋನರಡ್ಡಿ, ರಾಘವೇಂದ್ರ ಜಾಲಗಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ, ಇತರರು ಇದ್ದರು.
Published on
ನವಲಗುಂದ: ಬೆಣ್ಣೆ ಹಳ್ಳ (BENNE HALLA) ಪ್ರವಾಹ ತಡೆಯಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿರುವುದು ಐತಿಹಾಸಿಕ ಘಟನೆಯಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಭಿಪ್ರಾಯಪಟ್ಟರು.
ಹೆಬಸೂರ ಗ್ರಾಮದ ಹತ್ತಿರ ಬೆಣ್ಣಿಹಳ್ಳ ಅಗಲೀಕರಣ ಹಾಗೂ ಹೆಬಸೂರ-ಬೆನ್ನೂರ ನಡುವೆ ಬೆಣ್ಣಿ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.
‘ಬೆಣ್ಣೆ ಹಳ್ಳ ತುಂಬಿ ಹರಿದರೆ ಸಾಕು ಪ್ರವಾಹೋಪಾದಿಯಲ್ಲಿ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗುತ್ತಿತ್ತು. ಸಮೀಪದ ಗ್ರಾಮಗಳಲ್ಲೂ ಜನಜೀವನ ಅಸ್ತವ್ಯಸ್ತವಾಗುತ್ತಿತ್ತು. ಈ ಎಲ್ಲ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶದಿಂದ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು 200 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ.
ಜಮಿನುಗಳಿಗೆ ನೀರು ನುಗ್ಗದಂತೆ ಮುಳ್ಳು-ಕಂಟಿ ತೆರವುಗೊಳಿಸಿ ಅಲ್ಲಲ್ಲಿ ಸೇತುವೆ, ತಡೆಗೋಡೆ ನಿರ್ಮಿಸಲಾಗುತ್ತಿದೆ. ಮುಖ್ಯವಾಗಿ ಉತ್ತರ ಕರ್ನಾಟಕದ ಪ್ರಸಿದ್ಧ ಕ್ಷೇತ್ರವಾದ ಯಮನೂರ ಚಾಂಗದೇವ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಭಕ್ತರಿಗೆ ಸ್ನಾನ ಮಾಡಲು ಬೆಣ್ಣೆ ಹಳ್ಳಕ್ಕೆ ಸೂಕ್ತ ಮೆಟ್ಟಿಲು ಹಾಗೂ ಸ್ನಾನ ಗೃಹ ನಿರ್ಮಿಸಲಾಗುತ್ತದೆ. ‘ಯಮನೂರ ಆರತಿ’ ಹೆಸರಿನಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಳೆಗಾಲ ಸಮೀಪಿಸುತ್ತಿರುವುದರಿಂದ ಕಾಮಗಾರಿಯನ್ನು ತ್ವರಿತವಾಗಿ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ, ಎಸ್ಪಿ ಗುಂಜನ ಆರ್ಯ, ರಾಘವೇಂದ್ರ ಜಾಲಗಾರ, ತಹಸೀಲ್ದಾರ್ ಸುಧೀರ ಸಾವಕಾರ, ಮಂಜುನಾಥ ದಾಸಪ್ಪನವರ ಜೆ.ಬಿ. ಮಜ್ಜಗಿ ತಾ.ಪಂ. ಇಒ ರವಿಂದ್ರಗೌಡ ಪಾಟೀಲ, ರಾಮಚಂದ್ರ ಹೊಸಮನಿ ಸೋಮನಗೌಡ ಪಾಟೀಲ, ಮುಖ್ಯಾಧಿಕಾರಿ ಎಸ್.ಪಿ. ಪೂಜಾರ, ಸಿಪಿಐ ರವಿ ಕಪ್ಪತ್ತವರ, ಪಿಎಸ್‌ಐ ಜನಾರ್ಧನ ಬಟ್ರಳ್ಳಿ, ಶಿವಾನಂದ ಭೂಮಣ್ಣವರ ಇತರರಿದ್ದರು.
ತಾತ್ಕಾಲಿಕ ಸ್ಟೀಲ್ ಬ್ರಿಜ್
ತಡಹಾಳ ಗ್ರಾಮದ ಹತ್ತಿರ ಬೆಣ್ಣೆಹಳ್ಳಕ್ಕೆ ನಿರ್ಮಿಸಲಾಗಿದ್ದ ಸೇತುವೆ ಪ್ರವಾಹದಿಂದಾಗಿ ಕುಸಿದುಬಿದ್ದಿದೆ. ಲೋಕೋಪಯೋಗಿ ಇಲಾಖೆಯಿಂದ 80 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ಸ್ಟೀಲ್ ಬ್ರಿಜ್ ನಿರ್ಮಿಸಲಾಗುತ್ತಿದ್ದು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಹೆಬಸೂರದಿಂದ ಕಾಲವಾಡವರೆಗೆ ಬೆಣ್ಣೆಹಳ್ಳದ ದಂಡೆಗುಂಟ ನಿರ್ಮಿಸಲಾದ ರಸ್ತೆಯಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ, ಕಾಲವಾಡ- ಕರ್ಲವಾಡ- ಯಮನೂರ, ನವಲಗುಂದ, ಬೆಳವಟಗಿ, ಗುಡಿಸಾಗರ, ತಡಹಾಳ ಹತ್ತಿರ ಬೆಣ್ಣೆಹಳ್ಳ ಪ್ರವಾಹ ತಡೆಯುವ ಕಾಮಗಾರಿ ಪರಿಶೀಲಿಸಿದರು. ಜಮೀನಿಗೆ ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾಲವಾಡ- ಬೆಳಹಾರ ರಸ್ತೆ, ಆರೇ ಕುರಹಟ್ಟಿ- ಚಿಲಕವಾಡ ನಡುವೆ ನಿರ್ಮಿಸಲಾಗುವ ಸೇತುವೆ ಕಾಮಗಾರಿ ವೀಕ್ಷಿಸಿದರು.
ಕುಡಿಯುವ ನೀರಿಗೆ ಆದ್ಯತೆ ನೀಡಿ
ನವಲಗುಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ, ಬೆಣ್ಣಿಹಳ್ಳ ಪ್ರಗತಿ ಹಾಗೂ ತಡಹಾಳ ಹತ್ತಿರವಿರುವ ನೂತನ ಸೇತುವೆ ಕಾಮಗಾರಿಯ ಡಿಪಿಆರ್ ವೀಕ್ಷಿಸಿದರು. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. 24ಗಿ7 ಕುಡಿಯುವ ನೀರಿನ ಯೋಜನೆ, ಒಳಚರಂಡಿ, ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಡಿ.ಸಿ. ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net