ಕರ್ನಾಟಕ ರಾಜ್ಯದ ಕೃಷಿಗೆ ಜಾಗತಿಕ ಮನ್ನಣೆ

ಮನ್ ಕೀ ಬಾತ್ 131ನೇ ಸಂಚಿಕೆ ವೀಕ್ಷಿಸಿದ ಪ್ರಲ್ಹಾದ ಜೋಶಿ
ಮನ್ ಕೀ ಬಾತ್ 131ನೇ ಸಂಚಿಕೆ ವೀಕ್ಷಿಸಿದ ಪ್ರಲ್ಹಾದ ಜೋಶಿ
Published on
ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕೃಷಿ ಉತ್ಪನ್ನಗಳು ಸೇರಿ ಭಾರತೀಯ ಕೃಷಿಗೆ ಜಾಗತಿಕ ಮನ್ನಣೆ ಕಲ್ಪಿಸಿಕೊಟ್ಟಿದ್ದಾರೆ. ಇದರ ಪರಿಣಾಮ ರಾಜ್ಯದ ನಂಜನಗೂಡು ಬಾಳೆ, ಮೈಸೂರು ವೀಳ್ಯದೆಲೆ ಮತ್ತು ಇಂಡಿ ನಿಂಬೆಹಣ್ಣು ವಿದೇಶಿ ಪ್ರಸಿದ್ಧಿ ಪಡೆದಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಹ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದರು.
ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವಡ್ಡಿನ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಧಾನಿ ಮೋದಿ ಅವರ 131ನೇ `ಮನ್ ಕೀ ಬಾತ್' ಸಂಚಿಕೆ ವೀಕ್ಷಿಸಿ ಅಭಿಪ್ರಾಯ ಹಂಚಿಕೊಂಡರು.
ಮನ್ ಕೀ ಬಾತ್ ಅಲ್ಲಿ ಪ್ರಧಾನಿ ಮೋದಿ ಅವರು ವಿಶೇಷವಾಗಿ ಕರ್ನಾಟಕದ ರೈತರ ಸಾಧನೆ ಬಗ್ಗೆ ತಿಳಿಸಿ ಶ್ಲಾಘಿಸಿದ್ದಾರೆ. ಮಾಲ್ಡೀವ್ಸ್ ಸೇರಿ ವಿದೇಶಗಳಲ್ಲಿ ಆಹಾರೋತ್ಪನ್ನದ ಸವಿರುಚಿ ಹೆಚ್ಚಿಸಿದ ರಾಜ್ಯದ ಅನ್ನದಾತರನ್ನು ಈ ಮೂಲಕ ಹುರಿದುಂಬಿಸುತ್ತಿದ್ದಾರೆ. ನಮ್ಮ ರಾಜ್ಯದ ಹೆಮ್ಮೆಯ ಎಐ ಮಾನ್ಯತೆ ಪಡೆದ ಉತ್ಪನ್ನಗಳಾದ ನಂಜನಗೂಡಿನ ಬಾಳೆಹಣ್ಣು, ಮೈಸೂರು ವೀಳ್ಯದೆಲೆ ಹಾಗೂ ಇಂಡಿಯ ನಿಂಬೆಹಣ್ಣು ವಿಶಿಷ್ಟ ರುಚಿ ಮತ್ತು ಉನ್ನತ ಗುಣಮಟ್ಟದಿಂದ ಕೂಡಿದ್ದು, ಇದೀಗ ವಾಯು ಮಾರ್ಗದ ಮೂಲಕ ಮಾಲ್ಡೀವ್ಸ್ ಸೇರಿ ಜಾಗತಿಕ ಮಾರುಕಟ್ಟೆಗಳಿಗೆ ರಪ್ತಾಗುತ್ತಿವೆ ಎಂದರು.
ಕೇಂದ್ರ ಸರ್ಕಾರದ ರಪ್ತು ನೀತಿ, ನಿಯಮಗಳು ಹಾಗೂ ರೈತರು ಮತ್ತು ವರ್ತಕರ ಬೆಂಬಲಕ್ಕೆ ನಿಂತು ಕೈಗೊಂಡ ಯೋಜನೆಗಳಿಂದ ನಮ್ಮ ಕೃಷಿ ಉತ್ಪನ್ನಗಳಿಗೂ ಇಂದು ಮಾಲ್ಡೀವ್ಸ್ ನಂತಹ ರಾಷ್ಟ್ರದಲ್ಲಿ ಸಹ ಮಾರುಕಟ್ಟೆ ದೊರೆತು ಜಾಗತಿಕ ಮಟ್ಟದಲ್ಲಿ ಕರ್ನಾಟಕ ಸೇರಿ ಭಾರತೀಯ ಕೃಷಿ ಉತ್ಪನ್ನಗಳಿಗೆ ಬಹು ಬೇಡಿಕೆ ಕಂಡುಬರುತ್ತಿದೆ ಎಂದರು.
ಕರ್ನಾಟಕದ ರೈತರು ಕೇವಲ ಅಧಿಕ ಇಳುವರಿಗೆ ಸೀಮಿತವಾಗದೆ, ಗುಣಮಟ್ಟದ ಕೃಷಿಗೆ ಆದ್ಯತೆ ನೀಡುವ ಮೂಲಕ ಭಾರತೀಯ ಕೃಷಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಈ ರಾಜ್ಯದ ರೈತರನ್ನು ಸದಾ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಈ ವೇಳೆ ಶಾಸಕ ಅರವಿಂದ ಬೆಲ್ಲದ, ಮಾಜಿ ಸಚಿವ ಮುರುಗೇಶ ನಿರಾಣಿ, ಮೇಯರ್, ಜ್ಯೋತಿ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಲ್ಲಿಗವಾಡ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಗರಗ, ವಾರ್ಡ್ನ ಪ್ರಮುಖ ಪರಶುರಾಮ ಸಾಖರೆ, ಪಾಲಿಕೆ ಸದಸ್ಯರು, ಪಕ್ಷದ ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net