ಲೇಸರ್ ವೇದಾ ಡೆಂಟಲ್ ಇನ್ಸ್ಟಿಟ್ಯೂಟ್ನಲ್ಲಿ ಒಂದು ದಿನದ ಶಿಬಿರ
ಗುಟ್ಖಾ, ತಂಬಾಕು ಚಟ ಬಿಡಿಸಲು ಚಿಕಿತ್ಸೆ
ಭಾರತದಲ್ಲಿ ಪ್ರತಿ 90 ಸೆಕೆಂಡ್ಗಳಿಗೆ ಒಬ್ಬ ವ್ಯಕ್ತಿ ಬಾಯಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾನೆ.
ಹುಬ್ಬಳ್ಳಿ :oral
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಲೇಸರ್ ವೇದಾ ಯಾವಗಲ್ ಹೆಲ್ತ್ ಕೇರ್ ಫೌಂಡೇಷನ್ ನಿರ್ದೇಶಕರಾದ ಓರಲ್ ಲೇಸರ್ ಸರ್ಜನ್ ಡಾ. ಚಂದ್ರಶೇಖರ ಯಾವಗಲ್, ಬಾಯಿ ಕ್ಯಾನ್ಸರ್ ರೋಗದಲ್ಲಿ ಭಾರತ ಜಗತ್ತಿನಲ್ಲಿಯೇ ಪ್ರಥಮ ಸ್ಥಾನದಲ್ಲಿ ಇದೆ ಎಂದರು.
ಭಾರತದಲ್ಲಿ ಪ್ರತಿ 90 ಸೆಕೆಂಡ್ಗಳಿಗೆ ಒಬ್ಬ ವ್ಯಕ್ತಿ ಬಾಯಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾನೆ. ಯಾವುದೇ ಗುಟ್ಖಾ, ತಂಬಾಕು, ಪಾನ್ ಸೇವನೆಯ ಚಟ ಇರದಿದ್ದರೂ ಕೆಲವೊಮ್ಮೆ ಬಾಯಿ ಕ್ಯಾನ್ಸರ್ಗೆ ತುತ್ತಾಗುತ್ತಾರೆ.
ಇದಕ್ಕೆ ಕಾರಣ ವಂಶದಲ್ಲಿ ಯಾರಾದರೂ ಬಾಯಿ ಕ್ಯಾನ್ಸರ್ಗೆ ತುತ್ತಾಗಿದ್ದರೆ ಅವರ ಡಿಎನ್ಎ ಮೂಲಕವೂ ಕ್ಯಾನ್ಸರ್ ಬರುತ್ತದೆ. ಅಂತಹ ಅಪಾಯದ ಸ್ಥಿತಿಯಲ್ಲಿಯೂ ಮತ್ತೆ ಚಟ ಮಾಡುವುದನ್ನು ಬಿಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಜನರು ಬೇರೆ ಬೇರೆ ಅಂಗಗಳ ಹಾಗೂ ಮಧುಮೇಹ, ರಕ್ತದೊತ್ತಡದ ಪರೀಕ್ಷೆಯನ್ನು ಆಗಾಗ ಮಾಡಿಸುತ್ತಾರೆ. ಅದೇ ರೀತಿ ಬಾಯಿ ಕ್ಯಾನ್ಸರ್ ಪರೀಕ್ಷೆಯನ್ನೂ ನಿಗದಿತ ಅವಧಿಯಲ್ಲಿ ಮಾಡಿಸುತ್ತ ಇರಬೇಕು ಎಂದು ಸಲಹೆ ನೀಡಿದರು.
ಒರಲ್ಬ್ಲೂ ಲೇಸರ್ ಮೂಲಕ ಬಾಯಿಯಲ್ಲಿನ ಚರ್ಮವನ್ನು ಪರೀಕ್ಷಿಸಿ, ಕೇವಲ 5 ನಿಮಿಷದಲ್ಲಿ ಬಾಯಿ ಕ್ಯಾನ್ಸರ್ ಕಂಡುಹಿಡಿಯಬಹುದಾಗಿದೆ. ಇದು ನೋವು ರಹಿತ ಪರೀಕ್ಷೆಯಾಗಿದೆ ಎಂದರು.
ಚಿತ್ರತಾರೆಯರು ನಡೆಸುವ ಜಾಹೀರಾತುಗಳಿಗೆ ಮಾರು ಹೋಗಿ, ಯುವಕರು ಗುಟ್ಖಾ, ತಂಬಾಕಿನಂತಹ ಚಟಗಳಿಗೆ ದಾಸರಾಗುತ್ತಿದ್ದಾರೆ. ಬಾಯಿ ಕ್ಯಾನ್ಸರ್ ಬಗ್ಗೆ ಜನರಲ್ಲಿ ಕಡಿಮೆ ಜಾಗೃತಿ ಇದೆ. ಜಾಗೃತಿ ಇದ್ದವರೂ ಈ ಚಟದಿಂದ ಮುಕ್ತರಾಗುತ್ತಿಲ್ಲ ಎಂದು ಹೇಳಿದರು.
ಈ ಚಟ ಬಿಡಿಸಲು ಸಹ ಶಿಬಿರದಲ್ಲಿ ಅಗತ್ಯ ಏರ್ಪಾಡು ಮಾಡಲಾಗಿದೆ. ಚಟದಿಂದ ಮುಕ್ತರಾಗಲು ಮೂರು ರೀತಿಯ ಚಿಕಿತ್ಸೆ ನೀಡಲಾಗುತ್ತದೆ. ನಂತರ ಚಟಗಳಿಂದ ಮುಕ್ತರಾದವರ ಮುಂದೆ ಗುಟ್ಖಾ ಅಥವಾ ತಂಬಾಕು ಇಟ್ಟರೂ ಅವರು ಸೇವಿಸುವುದಿಲ್ಲ.
31ರಂದು ನಡೆಯಲಿರುವ ಉಚಿತ ಶಿಬಿರದಲ್ಲಿ ಒಂದು ರೀತಿಯ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಒರಲ್ಬ್ಲೂ ಲೇಸರ್ ಮೂಲಕ ಒಂದು ದಿನದಲ್ಲಿ 500 ಜನರ ಬಾಯಿ ಕ್ಯಾನ್ಸರ್ ಪತ್ತೆ ಮಾಡಬಹುದಾಗಿದೆ. ಇದುವರೆಗೆ ಸಾವಿರಾರು ಜನರಿಗೆ ಚಿಕಿತ್ಸೆ ನೀಡುವ ಜತೆಗೆ ಗುಟ್ಖಾ, ತಂಬಾಕು ಹಾಗೂ ಪಾನ್ ಚಟ ಬಿಡಿಸಿದ್ದಾಗಿ ಹೇಳಿದರು.