Footpath ‘ಫುಟ್‌ಪಾತ್ ಅತಿಕ್ರಮಣ’ ಜನ ಹೈರಾಣ

ಕಲಘಟಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಫುಟ್‌ಪಾತ್ Footpath ಮೇಲೆ ಅಂಗಡಿಕಾರರು ಸಾಮಗ್ರಿಗಳನ್ನು ಇಟ್ಟಿರುವುದು.
ಕಲಘಟಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಫುಟ್‌ಪಾತ್ Footpath ಮೇಲೆ ಅಂಗಡಿಕಾರರು ಸಾಮಗ್ರಿಗಳನ್ನು ಇಟ್ಟಿರುವುದು.
Published on
ಕಲಘಟಗಿ: ಸಾರ್ವಜನಿಕರು ಸುಗಮವಾಗಿ ಓಡಾಡುವ ಉದ್ದೇಶದಿಂದ ನಿರ್ಮಿಸಲಾಗಿರುವ ಫುಟ್‌ಪಾತ್ ಮೇಲೆ ಅಂಗಡಿಕಾರರು ಮನ ಬಂದಂತೆ ಅಂಗಡಿ ಇಟ್ಟು ಫುಟ್‌ಪಾತ್ Footpath ಆಕ್ರಮಿಸಿಕೊಂಡಿದ್ದಾರೆ. ಇದರಿಂದ ಪಾದಚಾರಿಗಳು ಜೀವ ಭಯದಲ್ಲೇ ಓಡಾಡುವಂತಾಗಿದೆ.
ಪಟ್ಟಣದಲ್ಲಿ ಹಾದು ಹೋಗಿರುವ ಚುತುಷ್ಪಥ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ (63) ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡುತ್ತವೆ. ಇದೇ ಮಾರ್ಗದಿಂದಲೇ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುತ್ತಾರೆ. ಆದರೆ, ಪಾದಚಾರಿಗಳ ಅನುಕೂಲಕ್ಕಾಗಿ ಸಮರ್ಪಕವಾದ ಫುಟ್‌ಪಾತ್ ಇದೆ. ಅದನ್ನು ಅಂಗಡಿಕಾರರು ಆಕ್ರಮಿಸಿಕೊಂಡಿದ್ದಾರೆ.
ಕಲಘಟಗಿ ಕೇಂದ್ರೀಯ ಬಸ್ ನಿಲ್ದಾಣದಿಂದ ಹುಬ್ಬಳ್ಳಿ, ಹಳಿಯಾಳ, ಕಾರವಾರ ಮುಂಡಗೋಡ ಸೇರಿದಂತೆ ವಿವಿಧ ಭಾಗಗಳಿಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಓಡಾಡುತ್ತಾರೆ. ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಚರಿಸುವ ಪಾದಚಾರಿಗಳಿಗಾಗಿ ಇರುವ ಫುಟ್‌ಪಾತ್ ಮೇಲೆ ವ್ಯಾಪಾರಸ್ಥರು ತಮ್ಮ ಅಂಗಡಿ ಸಾಮಾನುಗಳನ್ನು ಇಟ್ಟಿರುವುದರಿಂದ ಸಾರ್ವಜನಿಕರು ಹೆದ್ದಾರಿ ಮೇಲೆಯೇ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ.
ಹೆಸರಿಗೆ ಮಾತ್ರ ನಾಮಫಲಕಗಳು: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಹನ ನಿಲುಗಡೆಗೆ ಪ.ಪಂ.ನಿಂದ ನಾಮಫಲಕ ಹಾಕಲಾಗಿದೆ. ಆದರೆ, ಇದುವರೆಗೂ ಆ ಫಲಕಗಳ ಪಾಲನೆ ಮಾಡುವ ಬಗ್ಗೆ ಯಾರು ಕ್ರಮ ಕೈಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡುವಂತಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ.ಪಂ.ಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ.
ಹೆದ್ದಾರಿಯಲ್ಲಿ ಬೀಡು ಬಿಟ್ಟ ಬೀದಿನಾಯಿಗಳು: ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡು ಬಿಟ್ಟಿರುವ ಬೀದಿ ನಾಯಿಗಳು ಹಾಗೂ ದನಕರುಗಳ ಉಪಟಳದಿಂದಾಗಿ ಜನರು ತೊಂದರೆ ಅನುಭವವಿಸುತ್ತಿದ್ದಾರೆ. ಇನ್ನು ಅನೇಕ ಭಾಗಗಳಲ್ಲಿ ಬೀದಿ ನಾಯಿಗಳಿಂದ ಮಕ್ಕಳು ಕಚ್ಚಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಪಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನರಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
"

ಈಗಾಗಲೇ ವ್ಯಾಪಾರಸ್ಥರಿಗೆ ಫುಟ್‌ಪಾತ್ ಮೇಲಿನ ಅಂಗಡಿ ತೆರವು ಮಾಡುವಂತೆ ಸೂಚಿಸಲಾಗಿದೆ. ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಫೂಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸಿ, ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು.

> ಸತೀಶ ನಾಗನೂರ, ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net