footpath ಹೆಸರು 'ನವ'ನಗರವಾದರೂ ಸಮಸ್ಯೆ 'ಹಳೆ'ಯದು

footpath ಹುಬ್ಬಳ್ಳಿಯ ನವನಗರ ಮುಖ್ಯರಸ್ತೆಯಲ್ಲಿ ಫುಟ್ ಪಾತ್ ಮೇಲೆ ಪಾರ್ಕಿಂಗ್​ ಮಾಡಿರುವುದು.
footpath ಹುಬ್ಬಳ್ಳಿಯ ನವನಗರ ಮುಖ್ಯರಸ್ತೆಯಲ್ಲಿ ಫುಟ್ ಪಾತ್ ಮೇಲೆ ಪಾರ್ಕಿಂಗ್​ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಾಹನಗಳು ಫುಟ್ ಪಾತ್ ಮೇಲೆ ಜನರು ರಸ್ತೆ ಮೇಲೆ
  • ಇದು ಅವಳಿನಗರ ಮಧ್ಯದ ಬೃಹತ್​ ಬಡಾವಣೆಯ ದುಸ್ಥಿತಿ
  • ನವನಗರದಲ್ಲಿ ಪಾದಚಾರಿಗಳ ಪರದಾಟ ಕೇಳೋರಿಲ್ಲ
ಹುಬ್ಬಳ್ಳಿ: footpath ಹುಬ್ಬಳ್ಳಿ ಧಾರವಾಡ ಅವಳಿನಗರ ಮಧ್ಯದ ನವನಗರ ಅನೇಕ ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳು, ವಿಶ್ವವಿದ್ಯಾಲಯ ಇರುವ ಪ್ರಮುಖ ಬಡಾವಣೆಯಾಗಿದೆ. ಪ್ರಶಾಂತ ವಾತಾವರಣ ಇರುವುದರಿಂದ ಅನೇಕರು ನಿವೃತ್ತಿ ನಂತರ ಇಲ್ಲೊಂದು ಮನೆ ಮಾಡಿಕೊಂಡು ವಾಸವಾಗಿದ್ದಾರೆ.
ನಗರದ ಮಧ್ಯ ಭಾಗದಲ್ಲಿ ಇರುವ ಕಾರಣಕ್ಕೆ ದಶಕದಿಂದ ಇಲ್ಲಿನ ಜನಸಂಖ್ಯೆ ಅಧಿಕಗೊಂಡಿದೆ. ಸರ್ಕಾರಿ ಕಚೇರಿಗಳು ಇರುವುದರಿಂದ ಇಲ್ಲಿಯೇ ಅನೇಕ ಅಧಿಕಾರಿಗಳು ಸಹ ತಮ್ಮ ಮನೆ ಮಾಡಿಕೊಂಡಿದ್ದಾರೆ.
ಆದರೆ, ನವನಗರದಲ್ಲಿ ಅವ್ಯವಸ್ಥೆಗಳಿಗೆ ಯಾವುದೇ ಕಮ್ಮಿ ಇಲ್ಲ. ವ್ಯವಸ್ಥಿತ ನಗರ ಎಂದು ಮೊದಲು ಕರೆಸಿಕೊಳ್ಳುತ್ತಿದ್ದ ನವನಗರವು ಈಗ ಹಾಗೆ ಉಳಿದಿಲ್ಲ. ದೊಡ್ಡ ರಸ್ತೆಗಳು ಅತಿಕ್ರಮಣಗೊಂಡಿವೆ. ವ್ಯಾಪಾರ ವಹಿವಾಟು, ಪಾರ್ಕಿಂಗ್ ಎಲ್ಲವೂ ರಸ್ತೆ ಮೇಲೆಯೇ ನಡೆಯುತ್ತಿದೆ.
ವಿಪರ್ಯಾಸವೆಂದರೆ ನವನಗರದ ಮುಖ್ಯರಸ್ತೆ, ಪೊಲೀಸ್​ ಠಾಣೆ ಅಕ್ಕಪಕ್ಕದಲ್ಲಿಯೇ ರಸ್ತೆ ಅತಿಕ್ರಮಣ ಮಾಡಿಕೊಂಡಿರುವ ಕೆಲವರು, ರಸ್ತೆಯನ್ನು ಅನ್ಯ ಕೆಲಸಗಳಿಗೆ ಬಳಸುತ್ತಿದ್ದಾರೆ. ಕೆಲವರು ಕಾಯಂ ಅಂಗಡಿ, ಮುಂಗಟ್ಟೆಗಳನ್ನೇ ಮಾಡಿಕೊಂಡಿದ್ದಾರೆ.
ಮಹಾನಗರ ಪಾಲಿಕೆ ವಲಯ ಕಚೇರಿ 4ರ ಕಾರ್ಯಾಲಯವೂ ಇಲ್ಲಿದೆ. ಅದರ ಪಕ್ಕದಲ್ಲಿಯೇ ಸುಸಜ್ಜಿತ ಮಾರುಕಟ್ಟೆಯನ್ನು ಇತ್ತೀಚೆಗೆ ನಿರ್ಮಿಸಿಕೊಡಲಾಗಿದೆ. ಬಹುತೇಕ ವ್ಯಾಪಾರಸ್ಥರು ಅಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಕೆಲವರು ಫುಟ್ ಪಾತ್​ ಅತಿಕ್ರಮಿಸಿಕೊಂಡು ಪಾದಚಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ.
ಮುಖ್ಯರಸ್ತೆಯಲ್ಲಿ ಮುಂದೆ ಹೋದಂತೆ ಪ್ರತಿ ಹೆಜ್ಜೆಗೂ ಇಂತಹ ಅವ್ಯವಸ್ಥೆ ಕಾಣಿಸುತ್ತ ಹೋಗುತ್ತದೆ. ಫುಟ್ ಪಾತ್​ ಹಾಗೂ ರಸ್ತೆ ಮೇಲೆ ಭಜಿ, ಮಿಚಿರ್, ಪಾನಿಪುರಿ ಅಂಗಡಿಗಳು ಇದ್ದರೆ ಅವುಗಳಿಗೆ ಬರುವ ಗ್ರಾಹಕರು ನಡು ರಸ್ತೆಯಲ್ಲಿ ನಿಲ್ಲುತ್ತಿದ್ದಾರೆ. ಇದರಿಂದ ಟ್ರಾಫಿಕ್​ ಕಿರಿಕಿರಿ ಸಾಮಾನ್ಯವಾಗುತ್ತಿದೆ.

ಅಮರಗೋಳದಲ್ಲೂ ಇದೇ ಕಥೆ

ನವನಗರ ಬಳಿಯ ಅಮರಗೋಳದಲ್ಲಿಯೂ ಫುಟ್ ಪಾತ್ ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಕೆಲ ವರ್ಷದ ಹಿಂದೆ ಮುಖ್ಯ ರಸ್ತೆ ಅಗಲೀಕರಣ ಮಾಡಿ ದ್ವಿಪಥ ನಿಮಿರ್ಸಲಾಗಿದೆ. ಆದರೆ, ದಾಖಲೆಯಲ್ಲಿ ಮಾತ್ರ ದ್ವಿಪಥ ಇದ್ದು, ಬಹುತೇಕ ಕಡೆಗಳಲ್ಲಿ ಒಂದೇ ಪಥ ಕಾಣಿಸುತ್ತದೆ. ಕಟ್ಟಡ ಸಾಮಗ್ರಿ, ಇಟ್ಟಂಗಿ, ಮನೆ ಸಾಮಗ್ರಿಗಳು ಎಲ್ಲವೂ ರಸ್ತೆ ಇಲ್ಲವೇ ಫುಟ್ ಪಾತ್ ಮೇಲೆ ಇಡಲಾಗುತ್ತಿದೆ. ಕಾರು, ಬೈಕ್​ಗಳು ಸಹ ಫುಟ್ ಪಾತ್ ಹಾಗೂ ರಸ್ತೆ ಬದಿ ನಿಲ್ಲಿಸಲಾಗುತ್ತಿದೆ.
"

ನವನಗರದಲ್ಲಿ ಫುಟ್ ಪಾತ್​ ಮೇಲೆ ವ್ಯಾಪಾರ ಮಾಡುತ್ತಿದ್ದ ಗೂಡಂಗಡಿಗಳನ್ನು ತೆರವು ಮಾಡಲಾಗಿದೆ. ಸೀಸನ್​ ಇರುವುದರಿಂದ ಮಾವಿನ ಹಣ್ಣಿನ ವ್ಯಾಪಾರಿಗಳಿಗೆ ಮಾತ್ರ ಫುಟ್ ಪಾತ್ ನ ಒಂದು ಬದಿ ವ್ಯಾಪಾರ ಮಾಡಲು ಬಿಡಲಾಗಿದೆ. ಬೈಕ್​, ಕಾರು ಪಾರ್ಕಿಂಗ್ ಗೆ ಫುಟ್ ಪಾತ್​ ಮೇಲೆ ಅವಕಾಶ ಇಲ್ಲ. ಈ ಬಗ್ಗೆ ಪೊಲೀಸ್​ ಇಲಾಖೆಗೆ ಪತ್ರ ಬರೆದು ತೆರವಿಗೆ ಮನವಿ ಮಾಡಲಾಗುವುದು.

— ಸಂತೋಷ ಆನಿಶೆಟ್ಟರ್​, ಸಹಾಯಕ ಆಯುಕ್ತ, ವಲಯ ಕಚೇರಿ 4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net