ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ (Football) ಅಚೀವರ್ ಫ್ರೀಡಂ ಟ್ರೋಫಿ-ಕರ್ನಾಟಕ ರಾಜ್ಯ ಆಹ್ವಾನಿತ ಫುಟಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ಹುಬ್ಬಳ್ಳಿಯ ಸಿ.ಆರ್-7 ಫುಟಬಾಲ್ ಕ್ಲಬ್ ತಂಡದ ಆಟಗಾರರು.
ಆಯೋಜಿಸಿದ್ದ ಅಚೀವರ್ ಫ್ರೀಡಂ ಟ್ರೋಫಿ-ಕರ್ನಾಟಕ ರಾಜ್ಯ ಆಹ್ವಾನಿತ ಫುಟಬಾಲ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಸಿ.ಆರ್-7 ಫುಟಬಾಲ್ ಕ್ಲಬ್ ಚಾಂಪಿಯನ್ ಆಗಿದೆ.
ಭಾನುವಾರ ಅಂತಿಮ ಪಂದ್ಯದಲ್ಲಿ ಸಿ.ಆರ್-7 ಎಫ್ಸಿ, ಹುಬ್ಬಳ್ಳಿಯ ಪರ್ಪಲ್ ಎಫ್ಸಿ ವಿರುದ್ಧ 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಪಂದ್ಯದ 30ನೇ ನಿಮಿಷದಲ್ಲಿ ಮೆಹಬೂಬ್ ಅವರು ಗೆಲುವಿನ ಗೋಲು ಗಳಿಸಿದರು. ಇವರು ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.
ಇಂದೇ ನಡೆದ ಮೊದಲ ಸೆಮಿಫೈನಲ್ನಲ್ಲಿ ಸಿ.ಆರ್-7 ಎಫ್ಸಿ, ದಾವಣಗೆರೆಯ ಕರುನಾಡು ಎಫ್ಸಿ ತಂಡವನ್ನು ಟೈ-ಬ್ರೇಕರ್ (ಸಡನ್ ಡೆತ್) ಹಂತದಲ್ಲಿ 5-4 ಗೋಲುಗಳ ಅಂತರದಿಂದ ಸೋಲಿಸಿತು. ವಿಜೇತ ತಂಡಕ್ಕಾಗಿ ಆನಂದ, ಮಂಜು, ರಾಹುಲ್, ಮೆಹಬೂಬ್ ಮತ್ತು ಅಶೋಕ್ ತಲಾ ಒಂದೊಂದು ಗೋಲು ಗಳಿಸಿದರು. ದಾವಣಗೆರೆ ತಂಡಕ್ಕಾಗಿ ಶ್ರೇಯಸ್, ವೇದಾಂತ, ಓಂ ಮತ್ತು ಅಯಾನ್ ಗೋಲು ಬಾರಿಸಿದರು.
ಎರಡನೇ ಸೆಮಿಫೈನಲ್ನಲ್ಲಿ ಪರ್ಪಲ್ ಎಫ್ಸಿ, ಧಾರವಾಡದ ಮಿನಿಟ್ಸ್ಮೆನ್ ಎಫ್ಸಿ ತಂಡವನ್ನು ಟೈ-ಬ್ರೇಕರ್ನಲ್ಲಿ 4-2 ಗೋಲುಗಳ ಅಂತರದಿಂದ ಸೋಲಿಸಿತು. ಪರ್ಪಲ್ ಎಫ್ಸಿ ಪರವಾಗಿ ಇಮ್ಯಾನುಯೆಲ್, ರಾಜೇಶ, ಶೆದ್ರಾಕ್ ಮತ್ತು ಮುಲಾಲ್ ಗೋಲು ಗಳಿಸಿದರು. ಮಿನಿಟ್ಸ್ಮೆನ್ ಎಫ್ಸಿ ತಂಡಕ್ಕಾಗಿ ಆಕಾಶ ಮತ್ತು ವಿನೋದ ಗೋಲು ಬಾರಿಸಿದರು.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಿನಿಟ್ಸ್ಮೆನ್ ಎಫ್ಸಿ ತಂಡವು ಕರುನಾಡು ಎಫ್ಸಿ ತಂಡವನ್ನು ನಿಗದಿತ ಅವಧಿಯಲ್ಲಿ 2-0 ಗೋಲುಗಳ ಅಂತರದಿಂದ ಸೋಲಿಸಿ 3ನೇ ಸ್ಥಾನ ಗಳಿಸಿತು.
ಸ್ಟುಡೆಂಟ್ ಫುಟಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ, ಸ್ಟುಡೆಂಟ್ ಒಲಿಂಪಿಕ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಕರ್ನಾಟಕ 7 ಎ ಸೈಡ್ ಫುಟಬಾಲ್ ಅಸೋಸಿಯೇಷನ್, ಅಚೀವರ್ ಸ್ಪೋರ್ಟ್ಸ್ ಡಾಟ್ಕಾಮ್ ಸಹಯೋಗದೊಂದಿಗೆ ಸಂಘಿಟಿಸಿದ್ದ 3 ದಿನಗಳ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಕಲಘಟಗಿ, ಕುಂದಗೋಳ ಸೇರಿ 12 ತಂಡಗಳು ಭಾಗವಹಿಸಿದ್ದವು.